ಶುಕ್ರವಾರ, ನವೆಂಬರ್ 22, 2019
22 °C
ಗೋಲು ಗಳಿಸಿದ ಪಾರ್ಟಲು, ಚೆಟ್ರಿ, ಹಾಕಿಪ್

ಐಎಸ್‌ಎಲ್‌: ಬಿಎಫ್‌ಸಿಗೆ ಮೊದಲ ಜಯ

Published:
Updated:
Prajavani

ಬೆಂಗಳೂರು: ಮೂರು ಪಂದ್ಯಗಳಲ್ಲಿ ಜಯದ ಸವಿಯುಣ್ಣಲು ವಿಫಲರಾಗಿದ್ದ ಹಾಲಿ ಚಾಂಪಿಯನ್‌ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಭಾನುವಾರ ರಾತ್ರಿ ತವರಿನ ಅಂಗಣದಲ್ಲಿ ಮನಮೋಹಕ ಆಟವಾಡಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ 6ನೇ ಆವೃತ್ತಿಯಲ್ಲಿ ಜಯದ ಖಾತೆ ತೆರೆಯಿತು.

 ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯರು ಚೆನ್ನೈಯಿನ್ ಎಫ್‌ಸಿ ವಿರುದ್ಧ 3–0 ಅಂತರದ ಗೆಲುವು ದಾಖಲಿಸಿದರು. ಎರಿಕ್ ಪಾರ್ಟಲು (14ನೇ ನಿಮಿಷ) ಸುನಿಲ್ ಚೆಟ್ರಿ (25ನೇ ನಿ) ಮತ್ತು ಶೆಂಬೊಯ್ ಹಾಕಿಪ್ (84ನೇ ನಿ) ಪಂದ್ಯದ ಹೀರೊ ಎನಿಸಿಕೊಂಡರು.

ಮ್ಯಾನ್ಯುವಲ್ ಒನ್ವುಗೆ ವಿಶ್ರಾಂತಿ ನೀಡಿ 4–2–3–1ರಲ್ಲಿ ತಂತ್ರ ಹೆಣೆದ ಬಿಎಫ್‌ಸಿಗೆ ಪ್ರತಿಯಾಗಿ ಚೆನ್ನೈಯಿನ್ 4–4–2ರಲ್ಲಿ ಕಣಕ್ಕೆ ಇಳಿದಿತ್ತು. ಆದರೆ ಆತಿಥೇಯರ ತಂತ್ರ ಫಲಿಸಿತು. 4 ಮತ್ತು 5ನೇ ನಿಮಿಷಗಳಲ್ಲಿ ಬಿಎಫ್‌ಸಿ ಪ್ರಬಲ ಆಕ್ರಮಣ ನಡೆಸಿತು. ಆದರೆ ಗೋಲ್ ಕೀಪರ್ ವಿಶಾಲ್ ಕೇತ್ ಬಿಎಫ್‌ಸಿ ಖಾತೆ ತೆರೆಯುವುದನ್ನು ತಡೆದರು.

12ನೇ ನಿಮಿಷದಲ್ಲೂ ವಿಶಾಲ್ ಕೇತ್ ಮನಸೆಳೆಯುವ ಆಟವಾಡಿದರು. ಆದರೆ 14ನೇ ನಿಮಿಷದಲ್ಲಿ ದಿಮಾಸ್ ಮತ್ತು ಎರಿಕ್ ಹೆಣೆದ ತಂತ್ರಕ್ಕೆ ವಿಶಾಲ್ ಬಳಿ ಉತ್ತರ ಇರಲಿಲ್ಲ. ಬಲಭಾಗದ ಕಾರ್ನರ್‌ನಿಂದ ದಿಮಾಸ್ ನೀಡಿದ ಕ್ರಾಸ್‌ ಅನ್ನು ಹೆಡ್ ಮಾಡಿದ ಪಾರ್ಟಲು ಇಬ್ಬರು ಡಿಫೆಂಡರ್‌ಗಳು ಮತ್ತು ಗೋಲ್ ಕೀಪರ್‌ನ ತಲೆ ಮೇಲಿಂದ ಚೆಂಡನ್ನು ಮೋಹಕವಾಗಿ ತೇಲಿ ಬಿಟ್ಟರು. ಚೆಂಡು ಗುರಿ ಸೇರಿತು.

ಮೊದಲ ಗೋಲು ಗಳಿಸಿದ ನಾಯಕ: ಈ ಆವೃತ್ತಿಯ ಮೂರು ಪಂದ್ಯಗಳಲ್ಲಿ ಗೋಲಿನ ಖಾತೆ ತೆರೆಯಲು ವಿಫಲರಾಗಿದ್ದ ನಾಯಕ ಸುನಿಲ್ ಚೆಟ್ರಿ 25ನೇ ನಿಮಿಷದಲ್ಲಿ ಬಿಎಫ್‌ಸಿಯ ಮುನ್ನಡೆಯನ್ನು ಹೆಚ್ಚಿಸಿದರು. ಬಲಭಾಗದಿಂದ ರಾಫೆಲ್ ಆಗಸ್ಟೊ ಗಾಳಿಯಲ್ಲಿ ತೇಲಿಬಿಟ್ಟ ಚೆಂಡನ್ನು ನಿಯಂತ್ರಿಸಿದ ಚೆಟ್ರಿ ಇಬ್ಬರು ಡಿಫೆಂಡರ್‌ಗಳನ್ನು ಹಿಂದಿಕ್ಕಿ ಡ್ರಿಬಲ್ ಮಾಡುತ್ತ ಮುಂದೆ ಸಾಗಿದರು.

ಎದುರಾಳಿಯ ಆವರಣ ತಲುಪುತ್ತಿದ್ದಂತೆ ಮಿಂಚಿನ ವೇಗದಲ್ಲಿ ಒದ್ದು ಚೆಂಡನ್ನು ಗುರಿ ಮುಟ್ಟಿಸಿದರು. 84ನೇ ನಿಮಿಷದಲ್ಲಿ ಶೆಂಬೊಯ್ ಹಾಕಿಪ್ ಅವರ ಮ್ಯಾಜಿಕ್‌ನಿಂದಾಗಿ ಬಿಎಫ್‌ಸಿಯ ಮುನ್ನಡೆ ಮತ್ತಷ್ಟು ಹೆಚ್ಚಿತು.

ಇನ್ನು 12 ದಿನ ವಿರಾಮ
ಐಎಸ್‌ಎಲ್ ಪಂದ್ಯಗಳಿಗೆ ಇನ್ನು 12 ದಿನ ವಿರಾಮ. ಲೀಗ್‌ನಲ್ಲಿ ಆಡುತ್ತಿರುವ ಅನೇಕ ಆಟಗಾರರು ಎಎಫ್‌ಸಿ ಕಪ್ ಟೂರ್ನಿಯಲ್ಲಿ ಆಡಲಿರುವುದರಿಂದಾಗಿ ವಿರಾಮ ನೀಡಲಾಗಿದೆ. ವಿರಾಮದ ನಂತರದ ಮೊದಲ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದ್ದು ಆತಿಥೇಯ ಬಿಎಫ್‌ಸಿ ತಂಡ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಸೆಣಸಲಿದೆ. ಪಂದ್ಯ ನವೆಂಬರ್ 23ರಂದು ನಡೆಯಲಿದೆ. 

ಪ್ರತಿಕ್ರಿಯಿಸಿ (+)