ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಆಟಗಾರರ ಸಂಖ್ಯೆ ನಾಲ್ಕಕ್ಕೆ ಇಳಿಕೆ

ಹೊಸ ನಿಯಮಕ್ಕೆ ಅಂಕಿತ ಹಾಕಿದ ಐಎಸ್‌ಎಲ್‌ ಆಡಳಿತ ಮಂಡಳಿ
Last Updated 6 ಜುಲೈ 2020, 11:17 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯವೊಂದರಲ್ಲಿ ನಾಲ್ಕು ಮಂದಿ ವಿದೇಶಿ ಆಟಗಾರರನ್ನಷ್ಟೇ ಕಣಕ್ಕಿಳಿಸುವ ನಿಯಮಕ್ಕೆ ಸೋಮವಾರ ಅಂಕಿತ ಹಾಕಲಾಗಿದೆ. ಎಂಟನೇ ಆವೃತ್ತಿಯ (2021–22) ಲೀಗ್‌ನಿಂದಲೇ ಇದು ಜಾರಿಯಾಗಲಿದೆ.

ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ಮುಖ್ಯಸ್ಥೆ ನೀತಾ ಅಂಬಾನಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಹೊಸ ನಿಯಮಕ್ಕೆ ಒಪ್ಪಿಗೆ ನೀಡಲಾಗಿದೆ. ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಹಾಗೂ ಐಎಸ್‌ಎಲ್‌ ಫ್ರಾಂಚೈಸ್‌ಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.

ಹೊಸ ನಿಯಮದ ಪ್ರಕಾರ ಕ್ಲಬ್‌ವೊಂದು ಗರಿಷ್ಠ ಆರು ಮಂದಿ ವಿದೇಶಿ ಆಟಗಾರರ ಜೊತೆ ಒಪ್ಪಂದ ಮಾಡಿಕೊಳ್ಳಬಹುದು. ಇದರಲ್ಲಿಏಷ್ಯಾ ಮೂಲದ ಒಬ್ಬ ಆಟಗಾರ ಇರುವುದು ಕಡ್ಡಾಯ. ಈ ಪೈಕಿ ನಾಲ್ಕು ಮಂದಿಗಷ್ಟೇ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಬಹುದು.

ಇದಕ್ಕೂ ಮುನ್ನ ಏಳು ಮಂದಿಯ ಜೊತೆ ಒಪ್ಪಂದ ಮಾಡಿಕೊಳ್ಳುವ, ಈ ಪೈಕಿ ಗರಿಷ್ಠಐದು ಮಂದಿಯನ್ನು ಅಂಗಳಕ್ಕಿಳಿಸುವ ನಿಯಮ ಇತ್ತು.

ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಆಯೋಜಿಸುವ ಟೂರ್ನಿಗಳಲ್ಲೂ 3+1 (ವಿದೇಶದ ಮೂವರು ‌ಹಾಗೂ ಏಷ್ಯಾ ಮೂಲದ ಒಬ್ಬ ಆಟಗಾರ) ನಿಯಮವನ್ನು ಅನುಸರಿಸಲಾಗುತ್ತಿದೆ.

‘ಐಎಸ್‌ಎಲ್‌ ಶುರುವಾದ ದಿನದಿಂದಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈಗ ಜಾರಿಗೆ ತಂದಿರುವ ನಿಯಮದಿಂದಾಗಿ ಭಾರತದ ಆಟಗಾರರಿಗೆ ಹೆಚ್ಚಿನ ಲಾಭವಾಗಲಿದೆ. ಭಾರತದ ಫುಟ್‌ಬಾಲ್‌ ಬೆಳವಣಿಗೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫಿಫಾ ಹಾಗೂ ಎಎಫ್‌ಸಿ, 2019ರಲ್ಲಿ ಐಎಸ್‌ಎಲ್‌ಗೆ ಭಾರತದ ಪ್ರಮುಖ ಲೀಗ್‌ನ ಸ್ಥಾನಮಾನ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT