ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್-ಪಿಎಲ್ ಸಹಯೋಗಕ್ಕೆ ಹೊಸ ಒಪ್ಪಂದ

ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗಾಗಿ ಕೋಚ್‌, ರೆಫರಿಗಳ ತರಬೇತಿಗೆ ಪ್ರೀಮಿಯರ್ ಲೀಗ್ ನೆರವು
Last Updated 28 ಫೆಬ್ರುವರಿ 2020, 19:51 IST
ಅಕ್ಷರ ಗಾತ್ರ

ಮುಂಬೈ: ಭಾರತದಲ್ಲಿ ಫುಟ್‌ಬಾಲ್ ಆಟದ ಬೆಳವಣಿಗೆಗಾಗಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮತ್ತು ಇಂಗ್ಲೆಂಡಿನ ಪ್ರೀಮಿಯರ್ ಲೀಗ್ (ಪಿಎಲ್‌) ನಡುವಿನ ಒಪ್ಪಂದವನ್ನು ನವೀಕರಿಸಲಾಗಿದೆ.

ನವಿ ಮುಂಬೈನಲ್ಲಿರುವ ರಿಲಯನ್ಸ್ ಫೌಂಡೇಷನ್‌ನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ‘ಮುಂಬೈ 2020 ನೆಕ್ಸ್ಟ್ ಜನರೇಷನ್ ಫುಟ್‌ಬಾಲ್ ಟೂರ್ನಿ’ಯ ಕೊನೆಯ ಲೀಗ್ ಪಂದ್ಯದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿತ್ತು.

ಪಂದ್ಯದ ನಂತರ ರಿಲಯನ್ಸ್ ಫೌಂಡೇಷನ್ ಹಾಗೂ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಮುಖ್ಯಸ್ಥೆ ನೀತಾ ಅಂಬಾನಿ ಮತ್ತು ಪ್ರೀಮಿಯರ್ ಲೀಗ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಚರ್ಡ್ಸ್ ಮಾಸ್ಟರ್ಸ್ ಒಪ್ಪಂದದ ವಿಷಯವನ್ನು ಪ್ರಕಟಿಸಿದರು.

‘ಇಂಡಿಯನ್ ಸೂಪರ್ ಲೀಗ್‌ಗೆ ಆರು ವರ್ಷಗಳ ಹಿಂದೆಯೇ ಪ್ರೀಮಿ ಯರ್ ಲೀಗ್‌ ಸಹಕಾರ ನೀಡುತ್ತಿದೆ. ಆಡಳಿತ, ಪ್ರತಿಭಾ ಶೋಧ, ವಾಣಿಜ್ಯ ಬೆಳವಣಿಗೆಗೆ ಇದು ನೆರವಾಗಿತ್ತು. ಹೊಸ ಒಪ್ಪಂದದ ಮೂಲಕ ಯುವ ಆಟಗಾರರ ಬೆಳವಣಿಗೆ, ತರಬೇತಿ ಮತ್ತು ರೆಫರಿಗಳ ಕೊಡು–ಕೊಳ್ಳುವಿಕೆಗೆ ವಾತಾವರಣ ಮುಕ್ತವಾಗಿದೆ’ ಎಂದು ನೀತಾ ಅಂಬಾನಿ ವಿವರಿಸಿದರು.

ಎರಡು ವರ್ಷಗಳಿಂದ ನಡೆಯುತ್ತಿ ರುವ ನೆಕ್ಸ್ಟ್‌ ಜನರೇಷನ್ ಮುಂಬೈ ಕಪ್ ಟೂರ್ನಿಯಲ್ಲಿ ಪ್ರೀಮಿಯರ್ ಲೀಗ್‌ನ ಮೂರು ತಂಡಗಳಾದ ಚೆಲ್ಸಿ ಎಫ್‌ಸಿ, ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಸೌತಾಂ‍ಪ್ಟನ್ ಎಫ್‌ಸಿಯ 14 ವರ್ಷದೊಳಗಿನವರ ತಂಡಗಳು ಪಾಲ್ಗೊಳ್ಳುತ್ತಿವೆ. ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ), ಎಫ್‌ಸಿ ಗೋವಾ ಮತ್ತು ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ (ಆರ್‌ಎಫ್‌ವೈಸಿ) ತಂಡಗಳ ವಿರುದ್ಧ ಪ್ರೀಮಿಯರ್ ಲೀಗ್ ತಂಡಗಳು ಆಡುತ್ತವೆ.

ಪ್ರೀಮಿಯರ್ ಲೀಗ್ ತಂಡ ಗಳ ಕೋಚ್‌ಗಳು ಕೂಡ ಇಲ್ಲಿನ ಫುಟ್‌ ಬಾಲ್ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ.

‘ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗಾಗಿ ಕೈಜೋಡಿಸಲು ಖುಷಿಯಾಗುತ್ತಿದೆ. ಆರು ವರ್ಷಗಳಲ್ಲಿ ಇಲ್ಲಿನ ಫುಟ್‌ಬಾಲ್ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಹೊಸ ಒಪ್ಪಂದವು ಇನ್ನಷ್ಟು ಸಾಧ್ಯತೆಗಳಿಗೆ ಬಾಗಿಲನ್ನು ತೆರೆದಿದೆ’ ಎಂದು ರಿಚರ್ಡ್‌ ಮಾಸ್ಟರ್ಸ್ ಹೇಳಿದರು.

ಮ್ಯಾಂಚೆಸ್ಟರ್ ಮಣಿಸಿದ ಆರ್‌ಎಫ್‌ ವೈಸಿ:ಸಂಜೆ ನಡೆದ ಪಂದ್ಯದಲ್ಲಿ ರಿಲ ಯನ್ಸ್ ಸ್ಪೋರ್ಟ್ಸ್ ಫೌಂಡೇಷನ್‌ನ ಬಾಲಕರ ತಂಡ 1-0 ಗೋಲಿನಿಂದ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಮಣಿಸಿತು.

ಕೇರಳದ ಮಲಪ್ಪುರಂ ಜಿಲ್ಲೆಯ ರಶೀದ್ ಗಳಿಸಿದ ಏಕೈಕ ಗೋಲು ಆತಿ ಥೇಯರ ಕೈ ಹಿಡಿಯಿತು. ಈ ಮೂಲಕ ತಂಡ ಟೂರ್ನಿಯಲ್ಲಿ ಮೂರನೇ ಸ್ಥಾನ (9 ಪಾಯಿಂಟ್ಸ್‌) ಗಳಿಸಿತು.

ಎಲ್ಲ ಐದು ಪಂದ್ಯ ಗೆದ್ದು 15 ಪಾಯಿಂಟ್ಸ್ ಕಲೆ ಹಾಕಿದ ಚೆಲ್ಸಿ ಎಫ್ ಸಿ ಚಾಂಪಿಯನ್ ಆಯಿತು. ಮ್ಯಾಂಚೆಸ್ಟರ್ ಯುನೈಟೆಡ್ (9 ಪಾಯಿಂಟ್ಸ್‌) ದ್ವಿತೀಯ, ಎಫ್‌ಸಿ ಗೋವಾ (9 ಪಾಯಿಂಟ್ಸ್) ನಾಲ್ಕನೇ ಸ್ಥಾನ, ತಲಾ ಒಂದೊಂದು ಪಾಯಿಂಟ್ಸೌ ಗಳಿಸಿದ ತಾಂಪ್ಟನ್ ಮತ್ತು ಬಿಎಫ್‌ಸಿ ಕ್ರಮವಾಗಿ ಐದು ಹಾಗೂ ಆರನೇ ಸ್ಥಾನ ಗಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT