ಫುಟ್‌ಬಾಲ್‌: ಮ್ಯಾಂಡ್‌ಜುಕಿಚ್‌ ಮೋಡಿ

7

ಫುಟ್‌ಬಾಲ್‌: ಮ್ಯಾಂಡ್‌ಜುಕಿಚ್‌ ಮೋಡಿ

Published:
Updated:
Deccan Herald

ಮಿಲಾನ್‌: ದ್ವಿತೀಯಾರ್ಧದಲ್ಲಿ ಕಾಲ್ಚಳಕ ತೋರಿದ ಮರಿಯೊ ಮ್ಯಾಂಡ್‌ಜುಕಿಚ್‌, ಶುಕ್ರವಾರ ರಾತ್ರಿ ಅಲಿಯನ್ಸ್‌ ಕ್ರೀಡಾಂಗಣದಲ್ಲಿ ಸೇರಿದ್ದ ತವರಿನ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಮ್ಯಾಂಡ್‌ಜುಕಿಚ್‌ ಗಳಿಸಿದ ಏಕೈಕ ಗೋಲಿನ ಬಲದಿಂದ ಯುವೆಂಟಸ್‌ ತಂಡ ಸೀರಿ ‘ಎ’ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿತು.

ಯುವೆಂಟ್‌ 1–0 ಗೋಲಿನಿಂದ ಇಂಟರ್‌ ಮಿಲಾನ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. 15 ಪಂದ್ಯಗಳನ್ನು ಆಡಿರುವ ಈ ತಂಡ 14ರಲ್ಲಿ ಗೆದ್ದಿದ್ದು, 43 ಪಾಯಿಂಟ್ಸ್‌ ಕಲೆಹಾಕಿದೆ.

ನಪೋಲಿ (32 ಪಾಯಿಂಟ್ಸ್‌) ಮತ್ತು ಇಂಟರ್‌ ಮಿಲಾನ್‌ (29 ಪಾ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ಉಭಯ ತಂಡಗಳು ಆರಂಭದಿಂದಲೇ ವೇಗದ ಆಟಕ್ಕೆ ಮುಂದಾದವು. ಮೊದಲಾರ್ಧದಲ್ಲಿ ಇಂಟರ್‌ ಮಿಲಾನ್‌ ತಂಡದ ಆಟಗಾರರು ಚೆಂಡಿನೊಂದಿಗೆ ಪದೇ ಪದೇ ಆವರಣ ಪ್ರವೇಶಿಸಿ ಯುವೆಂಟಸ್‌ ಪಾಳಯದಲ್ಲಿ ಆತಂಕ ಮೂಡಿಸಿದ್ದರು.

ಆದರೆ ದ್ವಿತೀಯಾರ್ಧದಲ್ಲಿ ಜಿಯೋರ್ಜಿಯೊ ಚಿಯೆಲಿನಿ ಸಾರಥ್ಯದ ಯುವೆಂಟಸ್‌ ಮಿಂಚಿತು. 66ನೇ ನಿಮಿಷದಲ್ಲಿ ಕ್ರೊವೇಷ್ಯಾದ ಮುಂಚೂಣಿ ವಿಭಾಗದ ಆಟಗಾರ ಮ್ಯಾಂಡ್‌ಜುಕಿಚ್‌ ಮೋಡಿ ಮಾಡಿದರು. ಎದುರಾಳಿ ಆವರಣದ ಎಡಭಾಗದಿಂದ ಜಾವೊ ಕ್ಯಾನ್ಸೆಲೊ ಒದ್ದು ಕಳುಹಿಸಿದ ಚೆಂಡನ್ನು ಮ್ಯಾಂಡ್‌ಜುಕಿಚ್‌ ತಲೆತಾಗಿಸಿ (ಹೆಡರ್‌) ಗುರಿ ಮುಟ್ಟಿಸಿದ ರೀತಿ ಸೊಗಸಾಗಿತ್ತು. ನಂತರ ಚಿಯೆಲಿನಿ ಬಳಗ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿ ಸಂಭ್ರಮಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !