ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಪಕ್ಷೀಯ ಗೆಲುವಿನೊಂದಿಗೆ ಪ್ರೀಮಿಯರ್ ಲೀಗ್ ಪ್ರಶಸ್ತಿಯತ್ತ ಲಿವರ್ ಪೂಲ್

Last Updated 25 ಜೂನ್ 2020, 6:35 IST
ಅಕ್ಷರ ಗಾತ್ರ

ಲಿವರ್‌ಪೂಲ್: ಮೂರು ದಶಕಗಳಿಂದ ಪ್ರೀಮಿಯರ್ ಲೀಗ್ ಪ್ರಶಸ್ತಿಗೆ ಮುತ್ತಿಡಲು ಕಾಯುತ್ತಿರುವ ಲಿವರ್ ಪೂಲ್ ತಂಡದ ಕನಸು ಈ ಬಾರಿ ನನಸಾಗುವ ಸಾಧ್ಯತೆ ನಿಚ್ಚಳವಾಗಿದೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿದ ಲಿವರ್ ಪೂಲ್ ಏಕಪಕ್ಷೀಯವಾದ ನಾಲ್ಕು ಗೋಲುಗಳಿಂದ ಕ್ರಿಸ್ಟಲ್ ಪ್ಯಾಲೇಸ್ ವಿರುದ್ಧ ಗೆಲುವು ಸಾಧಿಸಿತು.

ಜೂರ್ಗನ್ ಕ್ಲಾಪ್ ಕೋಚ್‌ ಆಗಿರುವ ತಂಡ ಈ ಬಾರಿ ಆರಂಭದಿಂದಲೇ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ್ದು ಮುಂದಿನ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡ ಚೆಲ್ಸಿ ವಿರುದ್ಧ ಸೋತರೆ ಲಿವರ್ ಪೂಲ್ ತಂಡದ ಹಾದಿ ಇನ್ನಷ್ಟು ಸುಗಮವಾಗಲಿದೆ. ಹಾಲಿ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ ತಂಡ ಸದ್ಯ ದ್ವಿತೀಯ ಸ್ಥಾನದಲ್ಲಿದ್ದು 30 ಪಂದ್ಯಗಳಿಂದ 63 ಪಾಯಿಂಟ್ ಕಲೆ ಹಾಕಿದೆ. ಲಿವರ್ ಪೂಲ್ 31 ಪಂದ್ಯಗಳನ್ನು ಆಡಿದ್ದು 86 ಪಾಯಿಂಟ್ ಅದರ ಬಗಲಲ್ಲಿ ಇದೆ. ಮುಂದಿನ ಗುರುವಾರ ಈ ಎರಡೂ ತಂಡಳು ಮುಖಾಮುಖಿ ಆಗಲಿವೆ.

‘ಮ್ಯಾಂಚೆಸ್ಟರ್ ಸಿಟಿ ತಂಡದ ಮುಂದಿನ ಪಂದ್ಯಕ್ಕಾಗಿ ಕಾಯುತ್ತಿದ್ದೇನೆ. ಸಂಭ್ರಮಾಚರಣೆಗಾಗಿ ಅಲ್ಲ; ಮುಂದಿನ ಗುರುವಾರ ಆ ತಂಡವನ್ನು ಎದುರಿಸುವುದಕ್ಕಾಗಿ’ ಎಂದು ಕ್ಲಾಪ್ ಹೇಳಿದರು.

ಲಿವರ್ ಪೂಲ್ ತಂಡಕ್ಕೆ ಇನ್ನೂ ಏಳು ಪಂದ್ಯಗಳು ಬಾಕಿ ಇವೆ. ಈ ಪಂದ್ಯಗಳಿಂದ ಗರಿಷ್ಠ ಎರಡು ಪಾಯಿಂಟ್ ಕಲೆ ಹಾಕುವುದು ಕ್ಲಾಪ್ ಗುರಿ. ಲೀಗ್ ಪುನರಾರಂಭಗೊಂಡ ನಂತರ ಕಳೆದ ಭಾನುವಾರ ತನ್ನ ಮೊದಲ ಪಂದ್ಯದಲ್ಲಿ ಲಿವರ್ ಪೂಲ್ ತಂಡ ಎವರ್ಟನ್ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಬುಧವಾರದ ಪಂದ್ಯದಲ್ಲಿ ಪ್ಯಾಲೇಸ್‌ಗೆ ಪೆಟ್ಟು ನೀಡಿತು.

23ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ ಟ್ರೆಂಟಿ ಅಲೆಕ್ಸಾಂಡರ್ ಅರ್ನಾಲ್ಡ್ ಚೆಂಡನ್ನು ಗುರಿ ಮುಟ್ಟಿಸಿ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ವಿರಾಮಕ್ಕೆ ತೆರಳಲು ಒಂದು ನಿಮಿಷ ಬಾಕಿ ಇದ್ದಾಗ ಮೊಹಮ್ಮದ್ ಸಲಾ ಕಾಲ್ಚಳಕ ತೋರಿದರು. ಫ್ಯಾಬಿನೊ ನೀಡಿದ ಕ್ರಾಸ್‌ನಿಂದ ಈ ಗೋಲು ಮೂಡಿ ಬಂತು.

ದ್ವಿತೀಯಾರ್ಧದಲ್ಲಿ ಲಿವರ್ ಪೂಲ್ ಆಕ್ರಮಣ ಇನ್ನಷ್ಟು ಪರಿಣಾಮಕಾರಿಯಾಯಿತು. 55ನೇ ನಿಮಿಷದಲ್ಲಿ ಫ್ಯಾಬಿನೊ ಮಿಂಚಿನ ವೇಗದಲ್ಲಿ ಚೆಂಡನ್ನು ಒದ್ದು ಗುರಿ ಸೇರಿಸಿದರು. 69ನೇ ನಿಮಿಷದಲ್ಲಿ ಮೊಹಮ್ಮದ್ ಸಲಾ ನೀಡಿದ ಪಾಸ್‌ನಿಂದ ಸಾಡಿಯೊ ಮಾನೆ ಗಳಿಸಿದ ಗೋಲಿನ ಮೂಲಕ ತಂಡ ಸಂಪೂರ್ಣ ಆಧಿಪತ್ಯ ಸ್ಥಾಪಿಸಿತು. ಈ ಗೆಲುವಿನ ಮೂಲಕ ತಂಡ ಈ ಬಾರಿ ತವರಿನಲ್ಲಿ ಆಡಿದ ಎಲ್ಲ 16 ಪಂದ್ಯಗಳನ್ನೂ ಗೆದ್ದ ಖುಷಿಯ ಅಲೆಯಲ್ಲಿ ತೇಲಿತು.

‘ಈ ಬಾರಿ ತಂಡದ ಅತ್ಯಂತ ಗಮನಾರ್ಹ ಗೆಲುವು ಇದು. ಈ ಪಂದ್ಯದಲ್ಲೂ ಲೀಗ್‌ನಲ್ಲೂ ತೋರಿದ ಸಾಮರ್ಥ್ಯ ಅತ್ಯಂತ ಖುಷಿ ತಂದಿದೆ’ ಎಂದು ಕ್ಲಾಪ್ ಪಂದ್ಯದ ನಂತರ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಾಣು ಹಾವಳಿಯ ಬಗ್ಗೆ ಎಚ್ಚರಿಕೆ ನೀಡಿದ ದಿನವೇ ಲಿವರ್ ಪೂಲ್‌ ತಂಡ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಅತ್ಲೆಟಿಕೊ ಮ್ಯಾಡ್ರಿಡ್ ಎದುರು ಸೋತಿತ್ತು. ನಂತರ ಮಾರ್ಚ್ 11ರಂದು ಫುಟ್‌ಬಾಲ್ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ನೀಡದೆ ಪಂದ್ಯಗಳನ್ನು ನಡೆಸಲಾಗುತ್ತದೆ.ಬುಧವಾರದ ಪಂದ್ಯಕ್ಕೆ 300 ಮಂದಿಯನ್ನು ಮಾತ್ರ ಅಂಗಣದೊಳಗೆ ಬಿಡಲಾಗಿತ್ತು. ಅವರಲ್ಲಿ 1990ರಲ್ಲಿ ಕೊನೆಯದಾಗಿ ತಂಡ ಪ್ರಶಸ್ತಿ ಗೆದ್ದಾಗ ಮ್ಯಾನೇಜರ್ ಆಗಿದ್ದ ಕೆನಿ ಡಗ್ಲಿಷ್ ಕೂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT