ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂ‍ಪಿಯನ್ಸ್‌ ಲೀಗ್‌ ಫುಟ್‌ಬಾಲ್‌: ಸೆಮಿಫೈನಲ್‌ಗೆ ಲಿವರ್‌ಪೂಲ್‌

ಗೋಲು ಗಳಿಸಿದ ಮೊಹಮ್ಮದ್‌ ಸಲಾ
Last Updated 18 ಏಪ್ರಿಲ್ 2019, 20:16 IST
ಅಕ್ಷರ ಗಾತ್ರ

ಪೋರ್ಟೊ, ಪೋರ್ಚುಗಲ್‌: ಅತ್ಯುತ್ತಮ ಆಟ ಆಡಿದ ಲಿವರ್‌ಪೂಲ್‌ ತಂಡ ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಲಿವರ್‌ಪೂಲ್‌ ಒಟ್ಟಾರೆ 6–1 ಗೋಲುಗಳಿಂದ ಎಫ್‌ಸಿ ಪೋರ್ಟೊ ತಂಡವನ್ನು ಪರಾಭವಗೊಳಿಸಿತು.

ಹೋದ ವಾರ ನಡೆದಿದ್ದ ಮೊದಲ ಲೆಗ್‌ನ ಪಂದ್ಯದಲ್ಲಿ 2–0 ಗೋಲುಗಳಿಂದ ಎದುರಾಳಿಗಳನ್ನು ಮಣಿಸಿದ್ದ ಲಿವರ್‌ಪೂಲ್‌ ತಂಡ, ಗುರುವಾರ ನಡೆದ ಎರಡನೇ ಲೆಗ್‌ನ ಹೋರಾಟದಲ್ಲಿ 4–1 ಗೋಲುಗಳಿಂದ ಗೆದ್ದಿತು.

ಸೆಮಿಫೈನಲ್‌ನಲ್ಲಿ ಲಿವರ್‌‍ಪೂಲ್ ತಂಡ ಲಯೊನೆಲ್‌ ಮೆಸ್ಸಿ ಅವರನ್ನೊಳಗೊಂಡ ಎಫ್‌ಸಿ ಬಾರ್ಸಿಲೋನಾ ಎದುರು ಸೆಣಸಲಿದೆ. 13 ವರ್ಷಗಳ ನಂತರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಗರಿಗೆದರಿದೆ.

ಎರಡನೇ ಲೆಗ್‌ನ ಹಣಾಹಣಿಯಲ್ಲಿ ಲಿವರ್‌ಪೂಲ್‌ ಕೋಚ್‌ ಜರ್ಗೆನ್‌ ಕ್ಲಾಪ್‌ ಮೂರು ಬದಲಾವಣೆಗಳೊಂದಿಗೆ ತಂಡವನ್ನು ಕಣಕ್ಕಿಳಿಸಿದ್ದರು. ನೆಬಿ ಕೀಥಾ, ಫಿರ್ಮಿನೊ ಮತ್ತು ಜೋರ್ಡನ್‌ ಹೆಂಡರ್ಸನ್‌ ಅವರಿಗೆ ವಿಶ್ರಾಂತಿ ನೀಡಿ ಜಾರ್ಜಿನಿಯೊ ವಿಜ್‌ನಾಲ್ಡಮ್‌, ಜೇಮ್ಸ್‌ ಮಿಲ್ನರ್‌ ಮತ್ತು ಡಿವೊಕ್‌ ಒರಿಗಿ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಿದ್ದರು.

4–3–3 ಯೋಜನೆಯೊಂದಿಗೆ ಅಂಗಳಕ್ಕಿಳಿದಿದ್ದ ಲಿವರ್‌ಪೂಲ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ತಂಡ ಮೊದಲ 25 ನಿಮಿಷಗಳಲ್ಲಿ ಒಟ್ಟು 13 ಬಾರಿ ಎದುರಾಳಿ ತಂಡದ ಆವರಣ ಪ್ರವೇಶಿಸಿತ್ತು. ಆದರೆ ಗೋಲು ಗಳಿಸಲು ಮಾತ್ರ ಆಗಲಿಲ್ಲ. ತಂಡದ ನಿರಂತರ ಪ್ರಯತ್ನಕ್ಕೆ 26ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಸಾಡಿಯೊ ಮಾನೆ ಗೋಲು ಹೊಡೆದು ಸಂಭ್ರಮಿಸಿದರು.

1–0 ಗೋಲಿನ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಲಿವರ್‌ಪೂಲ್‌, ದ್ವಿತೀಯಾರ್ಧದಲ್ಲೂ ಮೇಲುಗೈ ಸಾಧಿಸಿತು. 65ನೇ ನಿಮಿಷದಲ್ಲಿ ಮೊಹಮ್ಮದ್‌ ಸಲಾ ತಂಡದ ಮುನ್ನಡೆ ಹೆಚ್ಚಿಸಿದರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಅವರು ಅದನ್ನು ಚುರುಕಾಗಿ ಗುರಿ ಸೇರಿಸಿದರು.

ಇದರ ಬೆನ್ನಲ್ಲೇ ಪೋರ್ಟೊ ತಂಡದ ಈಡರ್‌ ಮಿಲಿಟಾವೊ ಕಾಲ್ಚಳಕ ತೋರಿದರು. 68ನೇ ನಿಮಿಷದಲ್ಲಿ ಗೋಲು ಹೊಡೆದ ಅವರು ತವರಿನ ಅಭಿಮಾನಿಗಳನ್ನು ರಂಜಿಸಿದರು.

ನಂತರ ಲಿವರ್‌ಪೂಲ್‌ ಆಟ ಮತ್ತಷ್ಟ ರಂಗೇರಿತು. 77ನೇ ನಿಮಿಷದಲ್ಲಿ ಈ ತಂಡಕ್ಕೆ ಮತ್ತೊಂದು ಯಶಸ್ಸು ಸಿಕ್ಕಿತು. ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ರಾಬರ್ಟೊ ಫಿರ್ಮಿನೊ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಮುನ್ನಡೆ ಹೆಚ್ಚಿಸಿದರು.

ಇಷ್ಟಾದರೂ ಲಿವರ್‌ಪೂಲ್‌ ಗೋಲಿನ ದಾಹ ನೀಗಿದಂತೆ ಕಾಣಲಿಲ್ಲ. ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ತಂಡ ನಿರಂತರವಾಗಿ ಆತಿಥೇಯರ ರಕ್ಷಣಾ ಕೋಟೆ ಭೇದಿಸಲು ಮುಂದಾಯಿತು. ತಂಡದ ಪ್ರಯತ್ನಕ್ಕೆ 84ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು. ವಿರ್ಗಿಲ್‌ ವ್ಯಾನ್‌ ಡಿಜ್ಕ್‌ ಗೋಲು ಹೊಡೆದು ಸಹ ಆಟಗಾರರು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT