ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್‌ ಲೀಗ್ ಫುಟ್‌ಬಾಲ್‌ ಟೂರ್ನಿ: ಚೊಚ್ಚಲ ಪ್ರಶಸ್ತಿ ಗೆದ್ದ ಲಿವರ್‌ಪೂಲ್‌

Last Updated 26 ಜೂನ್ 2020, 6:52 IST
ಅಕ್ಷರ ಗಾತ್ರ

ಲಿವರ್‌ಪೂಲ್‌: ಲಿವರ್‌ಪೂಲ್‌ ತಂಡವು ಗುರುವಾರ ರಾತ್ರಿ ಹೊಸ ಮೈಲುಗಲ್ಲು ಸ್ಥಾಪಿಸಿತು. 28 ವರ್ಷಗಳ ಇತಿಹಾಸವಿರುವ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ತಂಡವು ಚೊಚ್ಚಲ ಪ್ರಶಸ್ತಿ ಜಯಿಸಿತು.

ಹೀಗಾಗಿ ಆ್ಯನ್‌ಫೀಲ್ಡ್‌ ನಗರದಲ್ಲಿ ಸಂಭ್ರಮಮೇಳೈಸಿತ್ತು. ಆ್ಯನ್‌ಫೀಲ್ಡ್‌ ಫುಟ್‌ಬಾಲ್‌ ಕ್ರೀಡಾಂಗಣದ ಹೊರಗೆ ಸಾವಿರಾರು ಸಂಖ್ಯೆಯಲ್ಲಿಜಮಾಯಿಸಿದ್ದ ಅಭಿಮಾನಿಗಳು ಪ್ರೀಮಿಯರ್‌ ಲೀಗ್‌ ಟ್ರೋಫಿಯ ಪ್ರತಿಕೃತಿಯನ್ನು ಹಿಡಿದು ಖುಷಿಪಟ್ಟರು. ಪಟಾಕಿ ಸಿಡಿಸುವ ಜೊತೆಗೆ ಘೋಷ ವಾಕ್ಯಗಳನ್ನು ಮೊಳಗಿಸಿದರು.

ಬ್ಯಾಸ್ಕೆಟ್‌ಬಾಲ್‌ ತಾರೆ ಲೆಬ್ರಾನ್‌ ಜೇಮ್ಸ್‌, ಚಲನಚಿತ್ರ ತಾರೆ ಸ್ಯಾಮುಯೆಲ್‌ ಎಲ್‌.ಜಾಕ್ಸನ್‌ ಮತ್ತು ಟೆನಿಸ್‌ ಆಟಗಾರ್ತಿ ಕ್ಯಾರೊಲಿನಾ ವೋಜ್ನಿಯಾಕಿ ಸೇರಿದಂತೆ ಅನೇಕರು ಲಿವರ್‌ಪೂಲ್‌ ತಂಡದ ಸಾಧನೆಯನ್ನು ಕೊಂಡಾಡಿದ್ದಾರೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್‌ ಸಿಟಿ ತಂಡವು 1–2 ಗೋಲುಗಳಿಂದ ಚೆಲ್ಸಿ ಎದುರು ಸೋತಿತು. ಹೀಗಾಗಿ ಲಿವರ್‌ಪೂಲ್‌ ತಂಡದ ಪ್ರಶಸ್ತಿಯ ಕನಸು ಸಾಕಾರಗೊಂಡಿತು.

31 ಪಂದ್ಯಗಳನ್ನು ಆಡಿರುವ ಲಿವರ್‌ಪೂಲ್‌ ತಂಡ ಒಟ್ಟು 86 ಪಾಯಿಂಟ್ಸ್‌ ಕಲೆಹಾಕಿ ಅಗ್ರಪಟ್ಟ ಅಲಂಕರಿಸಿದೆ. ಎರಡನೇ ಸ್ಥಾನ ಹೊಂದಿರುವ ಮ್ಯಾಂಚೆಸ್ಟರ್‌ ಸಿಟಿ ಇಷ್ಟೇ ಪಂದ್ಯಗಳಿಂದ 63 ಪಾಯಿಂಟ್ಸ್‌ ಗಳಿಸಿದೆ. ಉಳಿದ ಏಳು ಪಂದ್ಯಗಳಲ್ಲಿ ಗೆದ್ದರೂ ಮ್ಯಾಂಚೆಸ್ಟರ್‌ ತಂಡ ಲಿವರ್‌ಪೂಲ್‌ ತಂಡವನ್ನು ಹಿಂದಿಕ್ಕಲು ಆಗುವುದಿಲ್ಲ.

‘ಇದು ಅಮೋಘ ಸಾಧನೆ. ಈ ಖುಷಿಯನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ’ ಎಂದು ಲಿವರ್‌ಪೂಲ್‌ ತಂಡದ ಕೋಚ್‌ ಜುರ್ಗೆನ್‌ ಕ್ಲಾಪ್‌ ಹೇಳಿದ್ದಾರೆ.

‘ಕ್ಲಾಪ್‌ ಅವರ ಮೇಲೆ ನಮಗೆ ಅಪಾರ ನಂಬಿಕೆ ಇದೆ. ಹೀಗಾಗಿ ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಇದು ಬಹುದೊಡ್ಡ ಸಾಧನೆ. ಹಾಗಂತ ಖುಷಿಯಲ್ಲಿ ಮೈ ಮರೆಯುವುದಿಲ್ಲ. ಮುಂದೆ ಇನ್ನಷ್ಟು ಟ್ರೋಫಿಗಳನ್ನು ಜಯಿಸಲು ಪ್ರಯತ್ನಿಸುತ್ತೇವೆ’ ಎಂದು ತಂಡದ ನಾಯಕ ಜೋರ್ಡನ್‌ ಹೆಂಡರ್‌ಸನ್‌ ನುಡಿದಿದ್ದಾರೆ.

2017–18ನೇ ಸಾಲಿನ ಟೂರ್ನಿಯಲ್ಲಿ ಮ್ಯಾಂಚೆಸ್ಟರ್‌ ಸಿಟಿ ತಂಡವು ಒಟ್ಟು 100 ಪಾಯಿಂಟ್ಸ್‌ ಗಳಿಸಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಅಳಿಸಿ ಹಾಕುವ ಹಾದಿಯಲ್ಲಿ ಲಿವರ್‌ಪೂಲ್‌ ತಂಡ ಹೆಜ್ಜೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT