ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ದಿಗ್ಗಜ ಮಾರಿಯೊ ಝಗಾಲೊ ಇನ್ನಿಲ್ಲ

ವಿಶ್ವಕಪ್ ಗೆದ್ದ ತಂಡದಲ್ಲಿ ಆಡಿದ್ದ ಆಟಗಾರ– ಕೋಚ್
Published 6 ಜನವರಿ 2024, 14:31 IST
Last Updated 6 ಜನವರಿ 2024, 14:31 IST
ಅಕ್ಷರ ಗಾತ್ರ

ರಿಯೊ ಡಿ ಜನೇರೊ: ಆಟಗಾರ ಮತ್ತು ನಂತರ ಕೋಚ್‌ ಆಗಿ ಒಟ್ಟು ನಾಲ್ಕು ಸಲ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿ ಗೆದ್ದ ಬ್ರೆಜಿಲ್ ತಂಡದ ದಿಗ್ಗಜ ಮಾರಿಯೊ ಝಗಾಲೊ ನಿಧನರಾಗಿದ್ದಾರೆ ಎಂದು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶನಿವಾರ ಪ್ರಕಟಿಸಲಾಗಿದೆ.

ಅವರಿಗೆ 92 ವರ್ಷವಾಗಿತ್ತು. 1958ರಲ್ಲಿ ಬ್ರೆಜಿಲ್‌ ತಂಡ ಮೊದಲ ಬಾರಿ ವಿಶ್ವಕಪ್ ಗೆದ್ದಾಗ ಅವರು ಆಡಿದ್ದರು. ನಾಲ್ಕು ವರ್ಷಗಳ ನಂತರ ಚಿಲಿಯಲ್ಲಿ ನಡೆದ ವಿಶ್ವಕಪ್‌ನಲ್ಲೂ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರು. ದಂತಕತೆ ಪೆಲೆ ಅವರಿಗಿಂತ ಇವರು ಹತ್ತು ವರ್ಷದ ದೊಡ್ಡವರು.

1970 ರಲ್ಲಿ ಅವರು ತಂಡದ ತರಬೇತುದಾರನಾಗಿದ್ದರು. ಆ ತಂಡದಲ್ಲಿ ಘಟಾನುಘಟಿ ಆಟಗಾರರಾದ ಪೆಲೆ, ಜೈರ್ಝೀನೊ, ರಿವೆಲಿನೊ ಮತ್ತು ಟೊಸ್ಟಾವೊ ಮೊದಲಾದವರು ಆಡಿದ್ದು, ಇದನ್ನು ಸಾರ್ವಕಾಲಿಕ ಶ್ರೇಷ್ಠ ತಂಡವೆಂದು ಪರಿಗಣಿಸಲಾಗಿದೆ. ಈ ತಂಡ ಮೂರನೇ ಬಾರಿ ಬ್ರೆಜಿಲ್‌ಗೆ ವಿಶ್ವಕಪ್ ಗೆದ್ದುಕೊಟ್ಟಿತ್ತು. ಆಟಗಾರ ಮತ್ತು ಮ್ಯಾನೇಜರ್ ಆಗಿ ವಿಶ್ವಕಪ್ ಗೆದ್ದ ಮೊದಲ ಆಟಗಾರನೆಂಬ ಶ್ರೇಯ ಮಾರಿಯೊ ಅವರದಾಯಿತು.

1931ರಲ್ಲಿ ಬ್ರೆಜಿಲ್‌ನ ಈಶಾನ್ಯ ತೀರದ ಮಾಸಿಯೊದಲ್ಲಿ ಹುಟ್ಟಿದ ಅವರಿಗೆ ಒಂದು ವರ್ಷ ಆಗುವ ಮೊದಲೇ ಕುಟುಂಬ ರಿಯೊ ಡಿ ಜನೇರೊಗೆ ವಲಸೆಹೋಗಿತ್ತು. ಪೈಲಟ್‌ ಆಗಬೇಕೆಂಬ ಅವರ ಆಸೆ ಈಡೇರಿರಲಿಲ್ಲ. ಕಣ್ಣಿನ ದೃಷ್ಟಿ ಚುರುಕಾಗಿಲ್ಲ ಎಂಬುದು ಇದಕ್ಕೆ ಕಾರಣ. ನಂತರ ಅವರು ಅಕೌಂಟೆನ್ಸಿ ಓದಿದರು. ಫುಟ್‌ಬಾಲ್ ಆಟಗಾರನಾದರು. 1955ರಲ್ಲಿ ಅಲ್ಸಿನಾ ಡಿ ಕ್ಯಾಸ್ಟ್ರೊ ಅವರನ್ನು ವರಿಸಿದರು.

1994 ರ ಅಟ್ಲಾಂಟಾ (ಅಮೆರಿಕ) ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡ ನಾಲ್ಕನೇ ಬಾರಿ ಚಾಂಪಿಯನ್ ಆದಾಗ ಅವರು ಸಹಾಯಕ ಕೋಚ್‌ ಆಗಿದ್ದರು. ‘ಓಲ್ಡ್‌ ವೂಲ್ಫ್’ (ಹಿರಿ ತೋಳ) ಎಂಬ ಅಡ್ಡಹೆಸರು ಅವರಿಗಿತ್ತು. 2006ರಲ್ಲಿ ಫುಟ್‌ಬಾಲ್‌ ಕ್ಷೇತ್ರಕ್ಕೆ ನಿವೃತ್ತಿ ಹೇಳಿದ್ದರು.

ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಮಾರಿಯೊ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಈ ಆಟದ ಮೇಲೆ ಅವರ ಪ್ರಭಾವ ಅಸಾಧಾರಣವಾದುದು ಎಂದು ಬಣ್ಣಿಸಿದ್ದಾರೆ. ಬ್ರೆಜಿಲ್‌ ಫುಟ್‌ಬಾಲ್‌ ಒಕ್ಕೂಟ ಏಳು ದಿನಗಳ ಶೋಕಾಚರಣೆ ನಡೆಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT