ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ಅಸಿಸ್ಟ್ ಮೂಲಕ ಮಿಂಚಿದ ಮೆಸ್ಸಿ: ಬಾರ್ಕಾಗೆ ಗೆಲುವಿನ ಸಿಹಿ

Last Updated 12 ಜುಲೈ 2020, 6:28 IST
ಅಕ್ಷರ ಗಾತ್ರ

ಮ್ಯಾಡ್ರಿಡ್: ಲಯೊನೆಲ್ ಮೆಸ್ಸಿ ಮತ್ತೊಮ್ಮೆ ಕಾಲ್ಚಳಕ ತೋರಿದರು. ಗೋಲು ಗಳಿಸಿ ಅಲ್ಲ; ಈ ಬಾರಿ ಅವರು ಮಿಂಚಿದ್ದು ಅಸಿಸ್ಟ್‌ ಮೂಲಕ. ಅವರ ಅಮೋಘ ಆಟದ ಮೂಲಕಲಾ ಲಿಗಾ ಫುಟ್‌ಬಾಲ್ ಟೂರ್ನಿಯ ಶನಿವಾರ ರಾತ್ರಿಯ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ಗೆಲುವು ಸಾಧಿಸಿತು.

ರಿಯಲ್ ವಲಡೊಲಿಡ್ ಎದುರಿನ ಹಣಾಹಣಿಯಲ್ಲಿ ತಂಡ ಗೆದ್ದಿದ್ದು 1–0 ಅಂತರದಿಂದ. ಆದರೂ ಬಾರ್ಸಿಲೋನಾದ ಮುಂದಿನ ಹಾದಿ ದುರ್ಗಮವಾಗಿದ್ದು ಪ್ರಶಸ್ತಿ ಗೆಲ್ಲುವ ಸಾಧ್ಯತೆ ಮೇಲೆ ಕರಿನೆರಳು ಬಿದ್ದಿದೆ. ಜೋಸ್ ಜೊರಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 15ನೇ ನಿಮಿಷದಲ್ಲಿ ಆರ್ತುರೊ ವೈಡಲ್ ಅವರು ಬಾರ್ಸಿಲೋನಾಗೆ ಗೋಲು ತಂದುಕೊಟ್ಟರು.ಚೆಂಡನ್ನು ಗುರಿ ಮುಟ್ಟಿಸಲು ಅವರಿಗೆ ನೆರವಾದದ್ದು ಮೆಸ್ಸಿ. ಇದು ಈ ಬಾರಿಯ ಟೂರ್ನಿಯಲ್ಲಿ ಅವರು ಮಾಡಿದ 20ನೇ ಅಸಿಸ್ಟ್‌. ಅವರು ಲಾ ಲಿಗಾದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿದರು. ಈ ದಾಖಲೆ ಇಲ್ಲಿಯ ವರೆಗೆ ಕ್ಸೇವಿ ಹರ್ನಾಂಡಸ್ (2009) ಹೆಸರಿನಲ್ಲಿತ್ತು.

ಈ ಗೆಲುವಿನೊಂದಿಗೆ ಬಾರ್ಸಿಲೋನಾ 44 ಪಂದ್ಯಗಳಲ್ಲಿ 79 ಪಾಯಿಂಟ್‌ ಕಲೆ ಹಾಕಿ ಎರಡನೇ ಸ್ಥಾನದಲ್ಲೇ ಉಳಿಯಿತು. ಅಗ್ರ ಸ್ಥಾನದಲ್ಲಿರುವ ರಿಯಲ್ ಮ್ಯಾಡ್ರಿಡ್ 43 ಪಂದ್ಯಗಳಲ್ಲಿ 80 ಪಾಯಿಂಟ್ ಹೊಂದಿದೆ. ಉಳಿದಿರುವ ತನ್ನಮೂರು ಪಂದ್ಯಗಳಲ್ಲಿ ಐದು ಪಾಯಿಂಟ್‌ ಗಳಿಸಿದರೆ ಮ್ಯಾಡ್ರಿಡ್ ಪ್ರಶಸ್ತಿ ಎತ್ತಿ ಹಿಡಿಯಲಿದೆ. ಇದು ಸಾಧ್ಯವಾದರೆ ಎಂಟು ವರ್ಷಗಳಲ್ಲಿ ಮೂರನೇ ಬಾರಿ ಚಾಂಪಿಯನ್ ಆದಂತಾಗುತ್ತದೆ.

‘ಪ್ರಶಸ್ತಿ ಗೆಲ್ಲುವುದಕ್ಕಾಗಿ ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇವೆ. ಆದರೆ ಎದುರಾಳಿ ತಂಡದವರು ಯಾವುದನ್ನೂ ಬಿಟ್ಟುಕೊಡಲು ಸಿದ್ಧವಿಲ್ಲದ ಕಾರಣ ನಮಗೆ ನಿರಾಸೆ ಕಾಡುತ್ತಿದೆ’ ಎಂದು ಬಾರ್ಸಿಲೋನಾದ ಕೋಚ್ ಕ್ವಿಕ್ ಸೆಟೇನ್ ಹೇಳಿದರು.

ಮೋಹಕ ಗೋಲು ಗಳಿಸಿದ ವೈಡಲ್

ವೈಡಲ್ ಗಳಿಸಿದ ಗೋಲು ಮನಮೋಹಕವಾಗಿತ್ತು. ಮೆಸ್ಸಿ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ಅವರು ಎದುರಾಳಿ ತಂಡದ ಇಬ್ಬರು ಡಿಫೆಂಡರ್‌ಗಳನ್ನು ವಂಚಿಸಿ ಮುನ್ನುಗ್ಗಿ ಗುರಿ ಮುಟ್ಟಿಸಿದರು. ಐದು ಪ್ರಮುಖ ಯುರೋಪಿಯನ್ ಟೂರ್ನಿಗಳ ಒಂದೇ ಋತುವಿನಲ್ಲಿ 20 ಗೋಲು ಗಳಿಸಿ 20 ಅಸಿಸ್ಟ್‌ಗಳನ್ನೂ ಮಾಡಿದ 21ನೇ ಶತಮಾನದ ಏಕೈಕ ಆಟಗಾರ ಎಂಬ ಖ್ಯಾತಿಯೂ ಮೆಸ್ಸಿ ಪಾಲಾಯಿತು.

ಸೆಮೆಡೊ ಅವರಿಂದ ಚೆಂಡನ್ನು ಪಡೆದ ಮೆಸ್ಸಿ ಎದುರಾಳಿಗಳು ನೋಡನೋಡುತ್ತಿದ್ದಂತೆಯೇ ವೈಡಲ್ ಕಡೆಗೆ ಸ್ಕೂಪ್ ಮಾಡಿದರು. ಚುರುಕಾಗಿ ನಿಯಂತ್ರಿಸಿದ ವೈಡಲ್ ಒಂದರೆ ಕ್ಷಣವೂ ತಡ ಮಾಡದೆ ಚೆಂಡನ್ನು ಗೋಲುಪೆಟ್ಟಿಗೆಯ ಅಂಚಿಗೆ ಮಿಂಚಿನ ವೇಗದಲ್ಲಿ ತಳ್ಳಿದರು.

3-5-2ರ ರಣತಂತ್ರದೊಂದಿಗೆ ತಂಡವನ್ನು ಕಣಕ್ಕೆ ಇಳಿಸಿದ ಬಾರ್ಸಿಲೋನಾ ಕೋಚ್ ವಿಂಗ್‌ಗಳಲ್ಲಿ ನೆಲ್ಸನ್ ಸೆಮೆಡೊ ಮತ್ತು ಜೋರ್ಡಿ ಆಲ್ಬಾಗೆ ಅವಕಾಶ ನೀಡಿದ್ದರು. ಸರ್ಜಿಯೊ ರಾಬರ್ಟೊ ಅವರನ್ನು ರಕ್ಷಣಾ ವಿಭಾಗದಲ್ಲಿ ಇಳಿಸಿದ್ದರು. ಲೂಯಿಸ್ ಸೌರೆಜ್‌ಗೆ ವಿಶ್ರಾಂತಿ ನೀಡಲಾಗಿತ್ತು.ಈ ತಂತ್ರ ಮೊದಲಾರ್ಧದಲ್ಲಿ ಫಲ ನೀಡಿತು. ಆದರೆ ವಿರಾಮದ ನಂತರ ವಲಾಡೊಲಿಡ್ಪಂದ್ಯದಲ್ಲಿ ಹಿಡಿತ ಸಾಧಿಸಿತು. ಹೀಗಾಗಿ ಪಂದ್ಯದ ಕೊನೆಯಲ್ಲಿ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಬಾರ್ಕಾ ತಂಡಕ್ಕೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT