ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಜೆಮ್ಶೆಡ್‌ಪುರಕ್ಕೆ ಆಘಾತ ನೀಡಿದ ನಾರ್ತ್‌ ಈಸ್ಟ್ ಯುನೈಟೆಡ್‌

Last Updated 17 ಜನವರಿ 2021, 16:15 IST
ಅಕ್ಷರ ಗಾತ್ರ

ವಾಸ್ಕೊ, ಗೋವಾ: ಏಳು ಪಂದ್ಯಗಳಲ್ಲಿ ಜಯ ಕಾಣದಿದ್ದ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಕೊನೆಗೂ ಲಯ ಕಂಡುಕೊಂಡಿತು. ತಿಲಕ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನಾರ್ತ್‌ ಈಸ್ಟ್‌ 2–1 ಗೋಲುಗಳಿಂದ ಜೆಮ್ಶೆಡ್‌ಪುರ ಎಫ್‌ಸಿಯನ್ನು ಮಣಿಸಿತು. ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರದ ಮೊದಲ ಪಂದ್ಯದಲ್ಲೇ ಖಲೀದ್ ಜಮೀಲ್ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿ ಸಂಭ್ರಮಿಸಿದರು.

36ನೇ ನಿಮಿಷದಲ್ಲಿ ಅಶುತೋಶ್ ಮೆಹ್ತಾ ಮತ್ತು 61ನೇ ನಿಮಿಷದಲ್ಲಿ ದೇಶಾನ್‌ ಬ್ರೌನ್ ಗಳಿಸಿದ ಗೋಲುಗಳು ನಾರ್ತ್‌ ಈಸ್ಟ್‌ಗೆ ಮುನ್ನಡೆ ತಂದುಕೊಟ್ಟವು. ಜೆಮ್ಶೆಡ್‌ಪುರ ಪರವಾಗಿ ಪೀಟರ್ ಹರ್ಟ್ಲಿ 89ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸೋಲಿನ ಅಂತರ ಕಡಿಮೆ ಮಾಡಿದರು. ಈ ಜಯದೊಂದಿಗೆ ನಾರ್ತ್‌ ಈಸ್ಟ್ ಐದನೇ ಸ್ಥಾನಕ್ಕೆ ಜಿಗಿಯಿತು. ಜೆಮ್ಶೆಡ್‌ಪುರ ಒಂದು ಸ್ಥಾನ ಕುಸಿತ ಕಂಡು ಎಂಟನೇ ಸ್ಥಾನಕ್ಕೆ ಇಳಿಯಿತು.

ಆರಂಭದಲ್ಲೇ ಹಿಡಿತ ಸಾಧಿಸಿದ ನಾರ್ತ್ ಈಸ್ಟ್‌

ಮೊದಲಾರ್ಧದಲ್ಲೇ ನಾರ್ತ್ ಈಸ್ಟ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಚೆಂಡನ್ನು ತನ್ನ ಬಳಿ ಇರಿಸಿಕೊಳ್ಳುವಲ್ಲಿ ಯಶಸ್ಸು ಕಂಡ ತಂಡ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸುವಲ್ಲೂ ಮೇಲುಗೈ ಸಾಧಿಸಿತು. ವಿರಾಮಕ್ಕೆ ತೆರಳುವಾಗ ತಂಡ 1–0 ಮುನ್ನಡೆ ಗಳಿಸಿತ್ತು. ಇನ್ನಷ್ಟು ಮುನ್ನಡೆಯ ಅವಕಾಶ ಇತ್ತಾದರೂ ಎದುರಾಳಿ ತಂಡದ ಗೋಲ್‌ಕೀಪರ್ ಟಿ.ಪಿ.ರೆಹನೇಶ್ ಅದ್ಭುತ ಕೈಚಳಕ ತೋರಿಸಿ ಆಕ್ರಮಣವನ್ನು ತಡೆದರು.

ಎಂಟನೇ ನಿಮಿಷದಲ್ಲಿ ಜೆ‌ಮ್ಶೆಡ್‌ಪುರ ಎಫ್‌ಸಿಗೆ ಅತ್ಯುತ್ತಮ ಅವಕಾಶ ದೊರಕಿತ್ತು. ಆದರೆ ಖಾತೆ ತೆರೆಯಲು ನಾರ್ತ್ ಈಸ್ಟ್‌ನ ಗೋಲ್‌ಕೀಪರ್ ಸುಭಾಶಿಷ್ ರಾಯ್ ಅವಕಾಶ ನೀಡಲಿಲ್ಲ. ಯುವ ಆಟಗಾರ ಜಾಧವ್ ನೀಡಿದ ಕ್ರಾಸ್‌ನಲ್ಲಿ ಗುರಿ ಕಾಣಲು ನೆರಿಜಸ್ ವಲ್ಕಿಸ್‌ ವಿಫಲರಾದರು. 32ನೇ ನಿಮಿಷದಲ್ಲಿ ನಾರ್ತ್ ಈಸ್ಟ್‌ಗೂ ಉತ್ತಮ ಅವಕಾಶ ಲಭಿಸಿತ್ತು. ಸುಹೇರ್ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿ ಗುರಿಯತ್ತ ಅಟ್ಟಲು ಪ್ರಯತ್ನಿಸಿದ ಲೂಯಿಸ್ ಮಚಾದೊ ನಿರಾಸೆ ಅನುಭವಿಸಿದರು. ಆದರೆ ನಾಲ್ಕು ನಿಮಿಷಗಳ ನಂತರ ಸೆಟ್‌ಪೀಸ್‌ ಮೂಲಕ ತಂಡ ಗೋಲು ಗಳಿಸಿತು. ಕಾರ್ನರ್‌ನಿಂದ ಫೆಡೆರಿಕೊ ಗಾಲೆಗೊ ನೀಡಿದ ನಿಖರ ಕ್ರಾಸ್‌ನಲ್ಲಿ ಹೆಡ್ ಮಾಡಿದ ಮೆಹ್ತಾ ಸುಲಭವಾಗಿ ಗೋಲು ಗಳಿಸಿ ಸಂಭ್ರಮಿಸಿದರು.

ದ್ವಿತೀಯಾರ್ಧದಲ್ಲಿ ತಿರುಗೇಟು ನೀಡುವ ತಂತ್ರದೊಂದಿಗೆ ಇಳಿದ ಜೆಮ್ಶೆಡ್‌ಪುರ ತಂಡದ ಕೆಲಕಾಲ ಅದರಲ್ಲಿ ಯಶಸ್ವಿಯಾಯಿತು. ಹೀಗಾಗಿ ನಾರ್ತ್ ಈಸ್ಟ್ ಸ್ವಲ್ಪ ಹೊತ್ತು ಹಿನ್ನಡೆ ಅನುಭವಿಸಿತು. ಕ್ರಮೇಣ ಪಂದ್ಯದ ಮೇಲೆ ಮತ್ತೆ ಆಧಿಪತ್ಯ ಸ್ಥಾಪಿಸಿದ ನಾರ್ತ್ ಈಸ್ಟ್‌ ಯುನೈಟೆಡ್ ಗೆಲುವು ಸಾಧಿಸಿ ಕೇಕೆ ಹಾಕಿತು.

ಗೋವಾ–ಎಟಿಕೆಎಂಬಿ ಪಂದ್ಯ ಡ್ರಾ

ಎಟಿಕೆ ಮೋಹನ್ ಬಾಗನ್ ಎದುರು ರಾತ್ರಿ ನಡೆದ ಪಂದ್ಯವನ್ನು ಆತಿಥೇಯ ಎಫ್‌ಸಿ ಗೋವಾ 1–1ರಲ್ಲಿ ಡ್ರಾ ಮಾಡಿಕೊಂಡಿತು. 75ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ ಎಡು ಗಾರ್ಸಿಯಾ ಗಳಿಸಿದ ಗೋಲಿನ ಮೂಲಕ ಎಟಿಕೆ ಮೋಹನ್ ಬಾಗನ್ 1–0ಯಿಂದ ಮುನ್ನಡೆಯಿತು. 85ನೇ ನಿಮಿಷದಲ್ಲಿ ಲಭಿಸಿದ ಕಾರ್ನರ್‌ ಕಿಕ್‌ನಲ್ಲಿ ಇಶಾನ್ ಪಂಡಿತ ಗಳಿಸಿದ ಗೋಲು ಗೋವಾಗೆ ಸಮಬಲ ತಂದುಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT