ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಾನಾ ವಿರುದ್ಧ ಪೋರ್ಚುಗಲ್‌ಗೆ 3–2ರಲ್ಲಿ ಗೆಲುವು: ರೊನಾಲ್ಡೊ ವಿಶ್ವದಾಖಲೆ

Last Updated 24 ನವೆಂಬರ್ 2022, 18:43 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್‌): ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ದೋಹಾದ ‘ಸ್ಟೇಡಿಯಂ 974’ ರಲ್ಲಿ ಗುರುವಾರ ರಾತ್ರಿ ವಿಶ್ವದಾಖಲೆಯೊಂದನ್ನು ಸ್ಥಾಪಿಸಿದರು.

ಐದು ವಿಶ್ವಕಪ್‌ ಟೂರ್ನಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಅಪೂರ್ವ ಸಾಧನೆಗೆ ಭಾಜನರಾದರು. ಅವರ ಆಟದ ಬಲದಿಂದ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಪೋರ್ಚುಗಲ್‌ 3–2 ಗೋಲುಗಳಿಂದ ಘಾನಾ ತಂಡವನ್ನು ಮಣಿಸಿತು.

37 ವರ್ಷದ ರೊನಾಲ್ಡೊ ಅವರು ಈ ಹಿಂದೆ ಆಡಿದ್ದ ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲೂ ಗೋಲು ಗಳಿಸಿದ್ದರು. ಬ್ರೆಜಿಲ್‌ನ ಪೆಲೆ, ಜರ್ಮನಿಯ ಉವೆ ಸೀಲೆರ್ ಮತ್ತು ಮಿರೊಸ್ಲಾವ್‌ ಕ್ಲೋಸ್‌ ಅವರೊಂದಿಗೆ ದಾಖಲೆಯನ್ನು ಹಂಚಿಕೊಂಡಿದ್ದರು. ಇದೀಗ ಅವರು ಐದನೇ ವಿಶ್ವಕಪ್‌ ಟೂರ್ನಿಯಲ್ಲಿ ಗೋಲು ಗಳಿಸಿ ಎಲ್ಲರನ್ನೂ ಹಿಂದಿಕ್ಕಿದ್ದಾರೆ.

ರೊನಾಲ್ಡೊ 64ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಗೋಲು ಗಳಿಸಿದರು. ರೊನಾಲ್ಡೊ ಅವರನ್ನು ಪೆನಾಲ್ಟಿ ಆವರಣದಲ್ಲಿ ಎದುರಾಳಿ ಆಟಗಾರ ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ಕಿಕ್‌ ಅವಕಾಶ ನೀಡಿದರು.

73ನೇ ನಿಮಿಷದಲ್ಲಿ ಆಂಡ್ರೆ ಅಯೇವ್‌ ಘಾನಾ ತಂಡಕ್ಕೆ ಸಮಬಲದ ಗೋಲು ತಂದಿತ್ತರು.ಆಕ್ರಮಣಕಾರಿ ಆಟ ಮುಂದುವರಿಸಿದ ಪೋರ್ಚುಗಲ್‌, ಐದು ನಿಮಿಷಗಳಲ್ಲಿ ಮತ್ತೆ ಮುನ್ನಡೆ ಗಳಿಸಿತು. ಜಾವೊ ಫೆಲಿಕ್ಸ್‌ 78ನೇ ನಿಮಿಷದಲ್ಲಿ ಎದುರಾಳಿ ಗೋಲ್‌ಕೀಪರ್‌ಅನ್ನು ಚಾಣಾಕ್ಷತನದಿಂದ ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು.

ಇದಾದ ಎರಡು ನಿಮಿಷಗಳ ಬಳಿಕ ರಫಾಯೆಲ್ ಲಿಯೊ ಅವರು ಪೋರ್ಚುಗಲ್‌ ತಂಡದ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು.

ಹಿನ್ನಡೆ ಅನುಭವಿಸಿದರೂ ಘಾನಾ ತಂಡ ಸುಲಭದಲ್ಲಿ ತಲೆಬಾಗಲು ಸಿದ್ಧವಿರಲಿಲ್ಲ. ಒಸ್ಮಾನ್‌ ಬುಕಾರಿ 89ನೇ ನಿಮಿಷದಲ್ಲಿ ಗೋಲು ಗಳಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿದರು. ಆ ಬಳಿಕ ಕೊನೆಯ ನಿಮಿಷಗಳಲ್ಲಿ ಘಾನಾ ಸಮಬಲದ ಗೋಲಿಗೆ ಪ್ರಯತ್ನಿಸಿದರೂ, ಪೋರ್ಚುಗಲ್‌ ಡಿಫೆಂಡರ್‌ಗಳು ಹಾಗೂ ಗೋಲ್‌ಕೀಪರ್‌ ತಡೆಯಾಗಿ ನಿಂತು ತಮ್ಮ ತಂಡದ ಗೆಲುವನ್ನು ಖಚಿತಪಡಿಸಿಕೊಂಡರು.

ಮೊದಲ ಅವಧಿಯ ಆಟ ಗೋಲುರಹಿತವಾಗಿತ್ತು. ರೊನಾಲ್ಡೊ ಅವರಿಗೆ ಮೊದಲ 15 ನಿಮಿಷಗಳಲ್ಲಿ ಗೋಲು ಗಳಿಸುವ ಎರಡು ಉತ್ತಮ ಅವಕಾಶಗಳು ಲಭಿಸಿತ್ತಾದರೂ, ಗುರಿ ಸೇರಿಸಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT