ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ಕಾಲ್ಚಳಕದ ಪುಳಕಕ್ಕೆ ಮೋಹಕ ಕ್ರೀಡಾಂಗಣ

ಖತಾರ್‌ನಲ್ಲಿ ಸಜ್ಜಾಗಿವೆ ಸುಂದರ ತಾಣಗಳು
Last Updated 31 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ 22ನೇ ಆವೃತ್ತಿ ಆರಂಭಗೊಳ್ಳಲು ಇನ್ನು 600 ದಿನಗಳು ಬಾಕಿ ಇವೆ. ಟೂರ್ನಿಗೆ ಖತಾರ್‌ನಲ್ಲಿ ಭವ್ಯ ಕ್ರೀಡಾಂಗಣಗಳು ಸಿದ್ಧಗೊಂಡಿವೆ. ಒಟ್ಟು ಎಂಟು ಕ್ರೀಡಾಂಗಣಗಳ ಪೈಕಿ ನಾಲ್ಕನ್ನು ಈಗಾಗಲೇ ಉದ್ಘಾಟಿಸಲಾಗಿದ್ದು ಉಳಿದ ನಾಲ್ಕರ ಕಾಮಗಾರಿ ಅಂತಿಮ ಹಂತದಲ್ಲಿದೆ.

ಮುಂದಿನ ವರ್ಷದ ನವೆಂಬರ್ 21ರಂದು ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಅರಂಭವಾಗಲಿದ್ದು ಡಿಸೆಂಬರ್ 18ರಂದು ಮುಕ್ತಾಯಗೊಳ್ಳಲಿದೆ. ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಕ್ರೀಡಾಂಗಣಗಳನ್ನು ಸಿದ್ಧಗೊಳಿಸಲಾಗಿದೆ. ಹೊಸಶೈಲಿಯ ಮೆಟ್ರೊ ಮತ್ತು ‘ಎಕ್ಸ್‌ಪ್ರೆಸ್‌ ವೇ’ಗಳ ನಡುವೆ ಕ್ರೀಡಾಂಗಣಗಳು ಮೈದಳೆದಿದ್ದು ಕಣ್ಣಿಗೂ ಮುದ ನೀಡುತ್ತಿವೆ.

ಕ್ರೀಡಾಂಗಣಗಳ ಕಿರು ನೋಟ...
ಖಲೀಫಾ ಕ್ರೀಡಾಂಗಣ: 40 ಸಾವಿರ ಆಸನ ಸೌಲಭ್ಯವಿರುವ ಈ ಕ್ರೀಡಾಂಗಣ ದೋಹಾದಿಂದ 11 ಕಿಮೀ ದೂರದಲ್ಲಿದ್ದು 2017ರಲ್ಲಿ ಉದ್ಥಾಟನೆಗೊಂಡಿತ್ತು. ಪ್ಲೇ ಆಫ್ ಹಂತದ ಎಂಟು ಪಂದ್ಯಗಳು ಇಲ್ಲಿ ನಡೆಯಲಿವೆ. ಖತಾರ್‌ನ ಕ್ರೀಡಾ ಕೇಂದ್ರದಲ್ಲೇ ಈ ಕ್ರೀಡಾಂಗಣವಿದೆ. ಏಷ್ಯನ್ ಗೇಮ್ಸ್‌, ಎಎಫ್‌ಸಿ ಏಷ್ಯಾಕಪ್‌, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌, ಫಿಫಾ ಕ್ಲಬ್‌ ವಿಶ್ವಕಪ್‌ ಇತ್ಯಾದಿಗಳಿಗೆ ಆತಿಥ್ಯ ವಹಿಸಿದೆ.

ಅಲ್ ಜನಾಬ್ ಕ್ರೀಡಾಂಗಣ: ಇಲ್ಲಿ ಕೂಡ 40 ಸಾವಿರ ಆಸನ ಸಾಮರ್ಥ್ಯ ಇದ್ದು ದೋಹಾದಿಂದ 23 ಕಿಮೀ ದೂರವಿದೆ. 2019ರಲ್ಲಿ ಉದ್ಘಾಟನೆಗೊಂಡಿತ್ತು. ಸ್ಥಳೀಯ ಸಾಂಪ್ರದಾಯಿಕ ದೋಣಿಗಳ ಮಾದರಿಯಲ್ಲಿ ಇದರ ಒಳಾಂಗಣ ವಿನ್ಯಾಸವನ್ನು ಮಾಡಲಾಗಿದೆ. ಪ್ರಿ ಕ್ವಾರ್ಟರ್ ಫೈನಲ್‌ನ ಏಳು ಪಂದ್ಯಗಳು ಇಲ್ಲಿ ನಡೆಯಲಿದ್ದು 2020ರ ಎಎಫ್‌ಸಿ ಚಾಂಪಿಯನ್ಸ್‌ ಲೀಗ್ ಫೈನಲ್ ಪಂದ್ಯ ಇಲ್ಲಿ ನಡೆದಿತ್ತು.

ಎಜುಕೇಷನ್ ಸಿಟಿ ಕ್ರೀಡಾಂಗಣ: 40 ಸಾವಿರ ಆಸನ ವ್ಯವಸ್ಥೆಯ ಕ್ರೀಡಾಂಗಣವಿದು. ದೋಹಾದಿಂದ 13 ಕಿಮೀ ದೂರ ಇದ್ದು ಕಳೆದ ವರ್ಷ ಉದ್ಘಾಟನೆಯಾಗಿತ್ತು. ಖತಾರ್‌ನ ಜ್ಞಾನ ಮತ್ತು ಸಂಶೋಧನಾ ಕೇಂದ್ರದ ನಡುವೆ ಇರುವ ಈ ಕ್ರೀಡಾಂಗಣ ಕ್ವಾರ್ಟರ್ ಫೈನಲ್‌ ಹಂತದ ಎಂಟು ಪಂದ್ಯಗಳು ಇಲ್ಲಿ ನಡೆಯಲಿವೆ. ಫಿಫಾ ಕ್ಲಬ್ ವಿಶ್ವಕಪ್‌ ಟೂರ್ನಿಯ ಪಂದ್ಯಗಳು ಇಲ್ಲಿ ನಡೆದಿವೆ.

ಅಹಮ್ಮದ್ ಬಿನ್ ಅಲಿ ಕ್ರೀಡಾಂಗಣ: 40 ಸಾವಿರ ಆಸನ ಸೌಲಭ್ಯ ಇದ್ದು ದೋಹಾದಿಂದ 22 ಕಿಮೀ ದೂರದಲ್ಲಿದೆ. ಕಳೆದ ವರ್ಷ ಉದ್ಘಾಟನೆಗೊಂಡ ಕ್ರೀಡಾಂಗಣ ಅರಬ್ ರಾಷ್ಟ್ರದ ಸೊಬಗನ್ನು ಮೇಳೈಸುತ್ತದೆ. ವಿಶ್ವಕಪ್‌ನ ಏಳು ಪಂದ್ಯಗಳು ಇಲ್ಲಿ ನಡೆಯಲಿದ್ದು ಫಿಫಾ ಕ್ಲಬ್ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೆ ಈಗಾಗಲೇ ಆತಿಥ್ಯ ವಹಿಸಿದೆ.

ಅಲ್ ಬೈತ್ ಕ್ರೀಡಾಂಗಣ: 60 ಸಾವಿರ ಆಸನ ವ್ಯವಸ್ಥೆ ಇರುವ ಇದು ದೋಹಾದಿಂದ 46 ಕಿಮೀ ದೂರದಲ್ಲಿದೆ. ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿರುವ ಸ್ಥಳ ಇದು. ಸೆಮಿಫೈನಲ್ ಪಂದ್ಯಗಳು ಕೂಡ ಇಲ್ಲೇ ನಡೆಯಲಿವೆ. ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.

ಅಲ್‌ ಥುಮಾಮ ಕ್ರೀಡಾಂಗಣ: 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾಗಿದೆ. ದೋಹಾದಿಂದ 12 ಕಿಮೀ ದೂರದಲ್ಲಿದ್ದು ವಿಶ್ವಕಪ್‌ನ ಎಂಟು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಉಳಿದಿರುವ ಕಾಮಗಾರಿ ಕೊನೆಯ ಹಂತದಲ್ಲಿದೆ.

ರಾಸ್ ಅಬು ಅಬೌದ್‌ ಕ್ರೀಡಾಂಗಣ: 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಕ್ರೀಡಾಂಗಣ ದೋಹಾದಿಂದ ಏಳು ಕಿಲೋಮೀಟರ್ ದೂರದಲ್ಲಿದೆ. ವಿಶ್ವಕಪ್‌ ಟೂರ್ನಿಯ ಏಳು ಪಂದ್ಯಗಳು ಇಲ್ಲಿ ನಡೆಯಲಿದ್ದು ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಲುಸೈಲ್ ಕ್ರೀಡಾಂಗಣ: ಎಲ್ಲ ಕ್ರೀಡಾಂಗಣಗಳ ಪೈಕಿ ಅತಿದೊಡ್ಡದು ಇದು. 80 ಸಾವಿರ ಆಸನ ವ್ಯವಸ್ಥೆ ಇರುವ ಈ ಕ್ರೀಡಾಂಗಣ ದೋಹಾದಿಂದ 20 ಕಿಲೋಮೀಟರ್ ದೂರಲ್ಲಿದೆ. ಕಾಮಗಾರಿಯ ಬಹುತೇಕ ಭಾಗ ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT