ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಲೆವಂಡೋವ್‌ಸ್ಕಿ: ಕ್ರೀಡೆ–ಜೀವನದ ಶಿಸ್ತಿನ ಸಿಪಾಯಿ

Last Updated 20 ಡಿಸೆಂಬರ್ 2020, 10:21 IST
ಅಕ್ಷರ ಗಾತ್ರ

ಫುಟ್‌ಬಾಲ್‌ ಎಂದರೆ ಪ್ರಾಣ. ಈ ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕಾಗಿ ಎಂಥ ತ್ಯಾಗ ಸಹಿಸುವುದಕ್ಕೂ ಸಿದ್ದ. ಬಲಗಾಲಿನಲ್ಲಿ ಚೆಂಡು ಒದೆಯುವ ಈ ಆಟಗಾರ ಈ ಕಾಲಿನ ಸ್ವಾಧೀನಕ್ಕೆ ಯಾವ ರೀತಿಯಲ್ಲೂ ಧಕ್ಕೆಯಾಗಬಾರದು ಎಂದು ಎಡಭಾಗದ ಮೇಲೆಯೇ ಭಾರ ಹಾಕಿಯೇ ಮಲಗುವುದು. ದೇಹದ ಚುರುಕುತನಕ್ಕೆ ಧಕ್ಕೆಯಾಗಬಾರದು ಎಂದು ಊಟಕ್ಕೆ ಮೊದಲಷ್ಟೇ ಸಿಹಿ ಪದಾರ್ಥ ಸೇವನೆ. ವಿಡಿಯೊ ಗೇಮ್ ಆಡಿದರೆ ಏಕಾಗ್ರತೆಗೆ ಭಂಗ ಉಂಟಾಗಬಹುದು ಎಂಬ ಆತಂಕದಿಂದ ಪುಸ್ತಕ ಓದಿ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವ ಪ್ರಯತ್ನ.

ಇಷ್ಟೊಂದು ಶಿಸ್ತು ಪಾಲಿಸುವ ಆಟಗಾರನನ್ನು ಈವರೆಗೆ ನೋಡಲೇ ಇಲ್ಲ ಎಂದು ಕೋಚ್‌ ಪೆಪ್ ಗಾರ್ಡಿಯಾಲ ಅವರಿಂದಲೇ ಮೆಚ್ಚುಗೆ. ಈ ಶಿಸ್ತಿನ ಸಿಪಾಯಿಯನ್ನು ಬ್ಯೂಟಿಷಿಯನ್ ಮತ್ತು ಮಾಜಿ ಕರಾಟೆ ಪಟು ಆಗಿರುವ ಪತ್ನಿ ಅನಾ ‘ನನ್ನ ಪತಿ ಒಬ್ಬ ಮಾನವಯಂತ್ರ’ ಎಂದು ಹಾಸ್ಯದ ಧ್ವನಿಯಲ್ಲಿ ಬಣ್ಣಿಸಿದ್ದರು. ಆದರೆ ಫುಟ್‌ಬಾಲ್ ಜಗತ್ತು, ‘ಅದು ಮಾನವಯಂತ್ರವಲ್ಲ; ಗೋಲ್ ಮಷಿನ್‘ ಎಂದು ಕರೆಯಿತು. ಈ ಆಟಗಾರ ಬೇರೆ ಯಾರೂ ಅಲ್ಲ, ರಾಬರ್ಟ್ ಲೆವಂಡೋವ್‌ಸ್ಕಿ. ಫಿಫಾ ವರ್ಷದ ಆಟಗಾರ ಎಂದೆನಿಸಿಕೊಂಡಿರುವ ಪೋಲೆಂಡ್‌ನ ಈ ಸ್ಟ್ರೈಕರ್, ವರ್ಷದ ಪ್ರಶಸ್ತಿ ಮೇಲೆ ರೊನಾಲ್ಡೊ ಮತ್ತು ಮೆಸ್ಸಿ ಹೊಂದಿದ್ಧ ಆಧಿಪತ್ಯವನ್ನು ಕೊನೆಗೊಳಿಸಿದ್ದಾರೆ.

ಫುಟ್‌ಬಾಲ್‌ನಲ್ಲಿ ‘ದೊಡ್ಡ ಹೆಸರು’ ಮಾಡದೇ ತಮ್ಮಷ್ಟಕ್ಕೇ ಆಟದ ಮೇಲೆ ಗಮನ ಇರಿಸಿದ್ದ ಲೆವಂಡೋವ್‌ಸ್ಕಿ ಇತ್ತೀಚಿನ 10 ವರ್ಷಗಳಲ್ಲಿ ಮಾಡಿದ ಸಾಧನೆ ಅಪೂರ್ವ. 2006ರಿಂದ ಪೋಲೆಂಡ್‌ನ ನಿಕ್ ಪುಸ್ನೋವ್ ಮತ್ತು ಲೇಖ್ ಪೊಸ್ನಾನ್ ತಂಡಗಳಲ್ಲಿ ಆಡುತ್ತಿದ್ದಾಗಲೇ ಫುಟ್‌ಬಾಲ್ ಕ್ರೀಡೆಯ ಎಲ್ಲ ತಂತ್ರಗಳನ್ನು ಕರಗತ ಮಾಡಿಕೊಂಡ ಲೆವಂಡೋವ್‌ಸ್ಕಿ ಎಲ್ಲರ ಗಮನಸೆಳೆದಿದ್ದು 2010ರಲ್ಲಿ ಜರ್ಮನಿಯ ಬೊರೂಸಿಯಾ ಡಾರ್ಟ್‌ಮಂಡ್‌ ಕ್ಲಬ್‌ನಲ್ಲಿ ಆಡತೊಡಗಿದ ಸಮಯದಿಂದ. 2014ರಿಂದ ಅದೇ ದೇಶದ ಬಯೇನ್‌ ಮ್ಯೂನಿಚ್‌ ತಂಡ ಸೇರಿದ ಮೇಲಂತೂ ಅವರ ಕಾಲ್ಚಳಕದ ಸೊಬಗು ಇನ್ನಷ್ಟು ಶೋಭಿಸಿತು. ಬಂಡೆಸ್‌ಲೀಗಾ ಟೂರ್ನಿಯಲ್ಲಿ ಅವರಿಗೆ ಲಭಿಸಿದ ಅನುಭವ ವಿಶ್ವಶ್ರೇಷ್ಠ ಆಟಗಾರನಾಗಲು ನೆರವಾಯಿತು.

ಲೆವಂಡೋವ್‌ಸ್ಕಿ ಜನಿಸಿದ್ದು 1988ರ ಆಗಸ್ಟ್‌ 21ರಂದು, ಪೋಲೆಂಡ್‌ನ ರಾಜಧಾನಿ ವಾರ್ಸಾದಲ್ಲಿ. ಕುಟುಂಬದ ಎಲ್ಲರೂ ಕ್ರೀಡಾಪ್ರೇಮಿಗಳಾಗಿದ್ದರು. ಲೆವಂಡೋವ್‌ಸ್ಕಿ ಅವರನ್ನು ಉತ್ತಮ ಕ್ರೀಡಾಪಟುವಾಗಿ ರೂಪಿಸಬೇಕು ಎಂಬುದು ತಂದೆ–ತಾಯಿ ಆರಂಭದಲ್ಲೇ ಕಂಡ ಕನಸು. ಅವರ ಆಶಯಕ್ಕೆ ತಕ್ಕಂತೆ ಬೆಳೆದ ಲೆವಂಡೋವ್‌ಸ್ಕಿ ದೂರದೃಷ್ಟಿ ಹೊಂದಿದ್ದ ಕ್ರೀಡಾಪಟುವೂ ಆಗಿದ್ದಾರೆ. ಎಂದಾದರೊಮ್ಮೆ ಆಟದ ಅಂಗಣದಿಂದ ವಿರಮಿಸಲೇಬೇಕು. ಆಗ ಕ್ರೀಡೆಯಿಂದಲೇ ಜೀವನ ಸಾಗಬೇಕು ಎಂದು ಬಯಸಿರುವ ಅವರು ಕ್ರೀಡೆಯ ಬೇರೆ ಬೇರೆ ಆಯಾಮಗಳತ್ತಲೂ ನೋಟವಿಟ್ಟರು. ಹೀಗಾಗಿ ಆಟದ ಜೊತೆಯಲ್ಲೇ ಕೋಚಿಂಗ್ ಮತ್ತು ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪದವಿ ಪಡೆದುಕೊಂಡರು.

ಕಳೆದ ಬಾರಿ ಬಯೇನ್ ಮ್ಯೂನಿಚ್ ತಂಡ ಚಾಂಪಿಯನ್ ಆದ ಟೂರ್ನಿಗಳಲ್ಲೆಲ್ಲ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯ ಅಗ್ರಸ್ಥಾನದಲ್ಲಿ ಲೆವಂಡೋವ್‌ಸ್ಕಿ ಹೆಸರು ಇದೆ. ಬಂಡೆಸ್‌ಲೀಗಾದಲ್ಲಿ ಪ್ರತಿ 76 ನಿಮಿಷಕ್ಕೆ ಒಂದು ಗೋಲು ಅವರ ಸರಾಸರಿ ಆಗಿತ್ತು. ಬಂಡೆಸ್‌ಲೀಗಾ ಟೂರ್ನಿಯ ಡಿಸೆಂಬರ್ 17ರಂದು ನಡೆದ ಪಂದ್ಯದಲ್ಲಿ ವೋಲ್ಸ್‌ಬರ್ಗ್‌ ವಿರುದ್ಧ ಎರಡು ಗೋಲು ಗಳಿಸಿದ ಅವರು ಲೀಗ್‌ನಲ್ಲಿ 250ಕ್ಕೂ ಹೆಚ್ಚು ಗೋಲು ಗಳಿಸಿದ ಮೂರನೇ ಆಟಗಾರ ಎಂದೆನಿಸಿಕೊಂಡಿದ್ದರು. 2015ರಲ್ಲಿ ಇದೇ ತಂಡದ ವಿರುದ್ಧ ಆಡಿದ್ದ ಪಂದ್ಯವೊಂದರ ದ್ವಿತೀಯಾರ್ಧದ ಒಂಬತ್ತು ನಿಮಿಷಗಳಲ್ಲಿ ಐದು ಬಾರಿ ಚೆಂಡನ್ನು ಗುರಿಮುಟ್ಟಿಸಿ ಟೂರ್ನಿಯಲ್ಲಿ ವೇಗವಾಗಿ ಐದು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು.

1996ರಿಂದ 2004ರ ವರೆಗೆ ಯೂತ್ ವಿಭಾಗದಲ್ಲಿ ದೇಶದ ಎರಡು ಕ್ಲಬ್‌ಗಳಲ್ಲಿ ಆಡಿದ್ದ ಲೆವಂಡೋವ್‌ಸ್ಕಿ ಸೀನಿಯರ್ ವಿಭಾಗದ ಮೊದಲ ಪಂದ್ಯ ಆಡಿದ್ದು ಹುಟ್ಟೂರಿನ ಡೆಲ್ಟಾ ವಾರ್ಸೊ ತಂಡದಲ್ಲಿ. 17 ಪಂದ್ಯಗಳಲ್ಲಿ ನಾಲ್ಕು ಗೋಲುಗಳನ್ನು ಈ ಕ್ಲಬ್‌ಗಾಗಿ ಗಳಿಸಿದ ಅವರು ಕೆಲಕಾಲ ಲೆಜಿಯಾ ವಾರ್ಸೊ ತಂಡದ ಪರವೂ ಕಣಕ್ಕೆ ಇಳಿದಿದ್ದಾರೆ. ಆ ಕ್ಲಬ್‌ನಲ್ಲಿ 12 ಪಂದ್ಯಗಳಲ್ಲಿ ಕೇವಲ ಎರಡು ಗೋಲು ಗಳಿಸಿದ್ದರು. 2006ರಿಂದ 2008ರ ವರೆಗೆ ನಿಕ್ ಪುಸ್ಕೊವ್ ಪರ ಆಡಿದಾಗ 59 ಪಂದ್ಯಗಳಲ್ಲಿ 36 ಗೋಲು ಗಳಿಸಿ ಗಮನ ಸೆಳೆದರು. ನಂತರ ಎರಡು ವರ್ಷ ಲೇಚ್ ಪೊಸ್ನರಿ ಕ್ಲಬ್‌ಗಾಗಿಯೂ ಆಡಿದ್ದಾರೆ. 2010ರಿಂದ 2014ರ ವರೆಗೆ ಬೊರುಸಿಯಾ ಡಾರ್ಟ್‌ಮಂಡ್‌ನಲ್ಲಿ 131 ಪಂದ್ಯಗಳನ್ನು ಆಡಿದ್ದ ಲೆವಂಡೋವ್‌ಸ್ಕಿ ಬಲಿಷ್ಠ ಎದುರಾಳಿಗಳ ವಿರುದ್ಧ 74 ಬಾರಿ ಚೆಂಡನ್ನು ಗುರಿ ತಲುಪಿಸಿದ್ದಾರೆ. ಬಯೇನ್‌ ಮ್ಯೂನಿಚ್ ಕ್ಲಬ್‌ನಲ್ಲಿ ಈ ವರೆಗೆ 202 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ತಂಡಕ್ಕಾಗಿ ಅವರು ಗಳಿಸಿರುವ ಗೋಲುಗಳ ಸಂಖ್ಯೆ 179.

19 ವರ್ಷದೊಳಗಿನವರ ರಾಷ್ಟ್ರೀಯ ತಂಡದಲ್ಲಿ 2007ರಲ್ಲಿ ಒಂದೇ ಪಂದ್ಯ ಆಡಲು ಅವಕಾಶ ಲಭಿಸಿತ್ತು. ನಂತರ ಒಂದು ವರ್ಷ 21 ವರ್ಷದೊಳಗಿನವರ ತಂಡದಲ್ಲೂ ಆಡಿದ್ದಾರೆ. ಆಗ ಕಣಕ್ಕೆ ಇಳಿದದ್ದು ಮೂರು ಪಂದ್ಯಗಳಲ್ಲಿ. 2008ರಿಂದ ಪೋಲೆಂಡ್ ರಾಷ್ಟ್ರೀಯ ತಂಡದ ಸದಸ್ಯರಾಗಿರುವ ಲೆವಂಡೋವ್‌ಸ್ಕಿ ಈ ವರೆಗೆ 116 ಪಂದ್ಯಗಳನ್ನು ಆಡಿದ್ದಾರೆ. 63 ಗೋಲುಗಳೂ ಅವರ ಹೆಸರಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT