ಸೋಮವಾರ, ಆಗಸ್ಟ್ 2, 2021
24 °C
ಲಾ ಲಿಗಾ ಫುಟ್‌ಬಾಲ್‌ ಟೂರ್ನಿ; ಯೂಸುಫ್‌, ಲುಕಾಸ್‌ ಮಿಂಚು

ಸೆವಿಲ್ಲಾಗೆ ಸತತ ‌ನಾಲ್ಕನೇ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಅಮೋಘ ಆಟ ಮುಂದುವರಿಸಿರುವ ಸೆವಿಲ್ಲಾ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ.

ಸೋಮವಾರ ಬೆಳಿಗ್ಗೆ ನಡೆದ ಹಣಾಹಣಿಯಲ್ಲಿ ಸೆವಿಲ್ಲಾ 2–0 ಗೋಲುಗಳಿಂದ ಮಲ್ಲೋರ್ಕಾ ತಂಡವನ್ನು ಪರಾಭವಗೊಳಿಸಿತು.

ಇದರೊಂದಿಗೆ ಮುಂದಿನ ಋತುವಿನ ಚಾಂಪಿಯನ್ಸ್‌ ಲೀಗ್‌ಗೆ ಅರ್ಹತೆ ಗಳಿಸುವ ಹಾದಿಯನ್ನು ಸುಗಮ ಮಾಡಿಕೊಂಡಿತು.

2016ರ ಚಾಂಪಿಯನ್ಸ್‌ ಲೀಗ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ ತಂಡವು ಈ ಋತುವಿನ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.

ಲೀಗ್‌ನಲ್ಲಿ ಒಟ್ಟು 36 ಪಂದ್ಯಗಳನ್ನು ಆಡಿರುವ ಸೆವಿಲ್ಲಾ ತಂಡವು 18ರಲ್ಲಿ ಗೆದ್ದಿದೆ. ಇದರೊಂದಿಗೆ ಒಟ್ಟು 66 ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಹಿಂದಿನ ಮೂರು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದ್ದ ಸೆವಿಲ್ಲಾ ತಂಡ ಮಲ್ಲೋರ್ಕಾ ವಿರುದ್ಧವೂ ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು. 41ನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಲಭಿಸಿತು. ಈ ಅವಕಾಶದಲ್ಲಿ ಲುಕಾಸ್‌ ಒಕಾಂಪಸ್ ಮಿಂಚಿದರು. ಹೀಗಾಗಿ ತಂಡವು 1–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿನಿಂದ ಸೆಣಸಿದವು. ಆದ್ದರಿಂದ 80ನೇ ನಿಮಿಷದವರೆಗೂ ಯಾರಿಗೂ ಗೋಲು ದಾಖಲಿಸಲು ಆಗಲಿಲ್ಲ. ಬಳಿಕ ತಂತ್ರ ಬದಲಿಸಿದ ಸೆವಿಲ್ಲಾ ತಂಡ ಅದರಲ್ಲಿ ಯಶಸ್ಸು ಪಡೆಯಿತು.

84ನೇ ನಿಮಿಷದಲ್ಲಿ ಯೂಸುಫ್‌ ನೆಸಿರಿ ಗೋಲು ಬಾರಿಸಿ ಸೆವಿಲ್ಲಾ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು. ಅನಂತರ ತಂಡವು ರಕ್ಷಣಾ ವಿಭಾಗದಲ್ಲಿ ಎಚ್ಚರಿಕೆಯ ಆಟ ಆಡಿತು.

ಇನ್ನೊಂದು ಪಂದ್ಯದಲ್ಲಿ ಲೇಗನ್ಸ್‌ 1–0 ಗೋಲಿನಿಂದ ವಲೆನ್ಸಿಯಾ ಎದುರು ಗೆದ್ದಿತು.

18ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಲೇಗನ್ಸ್‌ ತಂಡದ ರುಬೆನ್‌ ಪೆರೆಜ್‌ ಗೆಲುವಿನ ರೂವಾರಿಯಾದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು