ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup: ಮೊರೊಕ್ಕೊ ಮುಂದೆ ಮುಗ್ಗರಿಸಿದ ಬೆಲ್ಜಿಯಂ

ಆಘಾತದ ಸೋಲಿಗೆ ತುತ್ತಾದ ಮತ್ತೊಂದು ಬಲಿಷ್ಠ ತಂಡ; ಸಬೀರಿ, ಝಕಾರಿಯಾ ಮಿಂಚು
Last Updated 27 ನವೆಂಬರ್ 2022, 16:17 IST
ಅಕ್ಷರ ಗಾತ್ರ

ದೋಹಾ: ಫುಟ್‌ಬಾಲ್ ಕ್ಷೇತ್ರದ ಬಲಾಢ್ಯ ತಂಡಗಳು ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ತಮಗಿಂತಲೂ ಕಡಿಮೆ ಶ್ರೇಯಾಂಕದ ಎದುರಾಳಿಗಳಿಂದ ಸೋಲಿನ ಆಘಾತ ಅನುಭವಿಸುತ್ತಿವೆ.

ಈ ಸಾಲಿಗೆ ಭಾನುವಾರ ಬೆಲ್ಜಿಯಂ ಕೂಡ ಸೇರಿತು. ಎಫ್‌ ಗುಂಪಿನ ಪಂದ್ಯದಲ್ಲಿ ಬದಲೀ ಆಟಗಾರರಾದ ಅಬ್ದೆಲ್‌ಹಮೀದ್ ಸಬೀರಿ ಹಾಗೂ ಝಕಾರಿಯಾ ಅಬೂಖಲಾಲ್ ಅವರ ಕಾಲ್ಚಳಕದ ಬಲದಿಂದ ಮೊರೊಕ್ಕೊ ತಂಡವು 2–0ಯಿಂದ ಬೆಲ್ಜಿಯಂ ಬಳಗಕ್ಕೆ ಆಘಾತ ನೀಡಿತು.

ಮೊರೊಕ್ಕೊ ತಂಡಕ್ಕೆ 24 ವರ್ಷಗಳಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಒಲಿದ ಮೊದಲ ಜಯ ಇದಾಗಿದೆ. ಮೊರೊಕ್ಕೊ ಅಭಿಮಾನಿಗಳು ಈ ಜಯದಿಂದಾಗಿ ವಿಶ್ವಕಪ್ ಮುಡಿಗೇರಿಸಿಕೊಂಡಂತೆ ಸಂಭ್ರಮಿಸಿದ್ದಾರೆ. 1998ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಜಯಿಸಿದ ಮೊರೊಕ್ಕೊ ತಂಡವು ಮತ್ತೆ ಯಶಸ್ವಿಯಾಗಿರಲಿಲ್ಲ. 2018ರ ಟೂರ್ನಿಯಲ್ಲಿ ಕೇವಲ ಒಂದು ಅಂಕ ಪಡೆದು ನಿರ್ಗಮಿಸಿತ್ತು.

‘ಸರಿಯಾದ ಸಮಯದಲ್ಲಿ ಗೋಲು ಗಳಿಸಿದೆವು. ಈ ಜಯಕ್ಕೆ ನಮ್ಮ ತಂಡ ಅರ್ಹವಾಗಿದೆ. ಪಂದ್ಯದ 70 ನಿಮಿಷಗಳ ನಂತರ ನಮ್ಮ ಕೆಲವು ಆಟಗಾರರು ಸುಸ್ತಾಗಿದ್ದರು. ಆದರೆ ಅಭಿಮಾನಿಗಳು ನಮ್ಮನ್ನು ಹುರಿದುಂಬಿಸಿದ ರೀತಿಯಿಂದ ಆಟಗಾರರಲ್ಲಿ ಚೈತನ್ಯ ಮೂಡಿತ್ತು. ಅದು ನಮಗೆ ಉಪಯುಕ್ತವಾಯಿತು’ ಎಂದು ಪಂದ್ಯದ ಆಟಗಾರ ಹಕೀಮ್ ಝಿಯೆಚ್ ಹೇಳಿದರು.

ಪಂದ್ಯದ 73ನೇ ನಿಮಿಷದಲ್ಲಿ ಸಬೀರಿ ಹಾಗೂ ಇಂಜುರಿ ಸಮಯದಲ್ಲಿಝಕಾರಿಯಾ (90+2) ಗೋಲು ಗಳಿಸಿದರು.

ಬೆಲ್ಜಿಯಂ ತಂಡದ ಆಟಗಾರರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಆದ್ದರಿಂದಕೊನೆಯ ಹತ್ತು ನಿಮಿಷಗಳಿದ್ದಾಗ ಬೆಲ್ಜಿಯಂ ತಂಡದ ಮ್ಯಾನೇಜರ್ ರಾಬರ್ಟೊ ಮಾರ್ಟಿನೇಜ್ ಅವರು ಪ್ರಮುಖ ಅಟಗಾರ ರೊಮೆಲು ಲುಕಾಕು ಅವರನ್ನು ಕಣಕ್ಕಿಳಿಸಿದರು. ಸ್ನಾಯುಸೆಳೆತದ ನೋವಿನಿಂದ ಬಸವಳಿದಿದ್ದರೂ ಲುಕಾಕು ಆಡಿದರು.

ಬೆಲ್ಜಿಯಂ ತಂಡವು ತನ್ನ ಮೊದಲ ಪಂದ್ಯದಲ್ಲಿ 1–0ಯಿಂದ ಕೆನಡಾ ವಿರುದ್ಧ ಜಯಿಸಿದೆ. 2018ರಲ್ಲಿ ಮೂರನೇ ಸ್ಥಾನ ಗಳಿಸಿತ್ತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ. ಆದರೆ ಈ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿತು. ಮುಂದಿನ ಪಂದ್ಯದಲ್ಲಿ ಕ್ರೊವೇಷ್ಯಾ ವಿರುದ್ಧ ಜಯಿಸಿದರೆ ಮಾತ್ರ ಬೆಲ್ಜಿಯಂ ತಂಡಕ್ಕೆ 16ರ ಘಟ್ಟಕ್ಕೆ ಪ್ರವೇಶ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT