ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಲೀಗ್‌ನಲ್ಲಿ ಏಷ್ಯಾದ ನಗೆ ಬುಗ್ಗೆ

Last Updated 10 ಜನವರಿ 2021, 19:30 IST
ಅಕ್ಷರ ಗಾತ್ರ

ದಕ್ಷಿಣ ಕೊರಿಯಾದ ಸನ್ ಹ್ಯೂಂಗ್ ಮಿನ್‌ ಅವರಿಗೆ ಈ ಬಾರಿಯ ಪ್ರೀಮಿಯರ್ ಲೀಗ್, ಯುರೋಪಾ ಲೀಗ್ ಮತ್ತು ಕ್ಯಾರಬವೊ ಕಪ್ (ಇಎಫ್‌ಎಲ್‌ ಕಪ್) ಫುಟ್‌ಬಾಲ್ ಟೂರ್ನಿಗಳು ಚಿನ್ನದ ಬೆಲೆ ತಂದುಕೊಟ್ಟಿವೆ. ಟಾಟೆನ್‌ಹ್ಯಾಂ ಹಾಟ್‌ಸ್ಪುರ್ ತಂಡದ ಪರ ಆಡುತ್ತಿರುವ ಈ ಫಾರ್ವರ್ಡರ್‌ ಮೂರು ಟೂರ್ನಿಗಳಲ್ಲಿ ಈಗಾಗಲೇ 15 ಗೋಲುಗಳನ್ನು ಗಳಿಸಿದ್ದು ಆರು ಅಸಿಸ್ಟ್‌ಗಳ ಮೂಲಕ ಮಿಂಚಿದ್ದಾರೆ. ನಗುನಗುತ್ತಾ ಗೋಲು ಗಳಿಸುವುದು ಸನ್ ಹ್ಯೂಂಗ್ ಮಿನ್‌ ಅವರ ‘ಟ್ರೇಡ್‌ ಮಾರ್ಕ್’ ಆಗಿರುವುದರಿಂದ ಇಷ್ಟರಲ್ಲೇ ಫುಟ್‌ಬಾಲ್ ಪ್ರಿಯರ ಮನ ಗೆದ್ದಿದ್ಧಾರೆ.

ಮತ್ತೊಬ್ಬ ಪ್ರಮುಖ ಸ್ಟ್ರೈಕರ್ ಹ್ಯಾರಿ ಕೇನ್ ಜೊತೆಗೂಡಿ ಸನ್‌ ಹ್ಯೂಂಗ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಹ್ಯಾರಿ ಕೇನ್ ಈ ವರೆಗೆ 12 ಗೋಲು ಗಳಿಸಿದ್ದು 13 ಅಸಿಸ್ಟ್‌ಗಳ ಮೂಲಕ ಗಮನ ಸೆಳೆದಿದ್ದಾರೆ. ಈ ಜೋಡಿ ಈಗಾಗಲೇ ಫುಟ್‌ಬಾಲ್ ವಿಶ್ಲೇಷಕರಿಂದ ಮೆಚ್ಚುಗೆ ಗಳಿಸಿದ್ದಾರೆ. ಸನ್ ಹ್ಯೂಂಗ್ ಅವರ ಗೋಲು ಗಳಿಕೆ ಸಾಮರ್ಥ್ಯ ಫುಟ್‌ಬಾಲ್ ಪಂಡಿತರಿಂದ ಮೆಚ್ಚುಗೆಗೂ ಪಾತ್ರವಾಗಿದೆ.

ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದರೂ ವೈಯಕ್ತಿಕವಾಗಿ ಅಂಗಣದಲ್ಲೂ ಅಂಗಣದಾಚೆಗೂ ಶಾಂತಗುಣದ ವ್ಯಕ್ತಿ ಅವರು. ಎದುರಾಳಿ ತಂಡದವರಾಗಿರಲಿ, ತನ್ನದೇ ತಂಡದವರಾಗಿರಲಿ ಬಿದ್ದರೆ ಎಲ್ಲಿದ್ದರೂ ಓಡಿ ಬಂದು ಎದ್ದು ಕೂರಿಸುವ ವ್ಯಕ್ತಿ. ತನ್ನಿಂದಾಗಿ ಯಾರಾದರೂ ಬಿದ್ದು ಗಾಯಗೊಂಡರೆ ಅವರ ಕಣ್ಣಿಂದ ತಕ್ಷಣ ನೀರು ಹರಿಯುತ್ತದೆ. ಈ ಸದ್ಗುಣಗಳು ಬೇರೆ ತಂಡದ ಅಭಿಮಾನಿಗಳನ್ನೂ ಮಂತ್ರಮುಗ್ದಗೊಳಿಸಿವೆ.

2015ರಲ್ಲಿ ಬಯೇರ್ ಲೆವರ್‌ಕ್ಯೂಸೆನ್ ತಂಡದಲ್ಲಿದ್ದ ಸನ್ ಹ್ಯೂಂಗ್ ನಂತರ ಹಾಟ್‌ಸ್ಪುರ್‌ ತಂಡ ಪ್ರವೇಶಿಸಿದ್ದರು. ಅಂದಿನಿಂದ ಈಗಿನ ವರೆಗೆ ತಂಡದ ಬೆನ್ನೆಲುಬು ಆಗಿರುವ ಅವರು ಯುರೋಪ್‌ ಲೀಗ್‌ಗಳಲ್ಲಿ ಆಡಿದ ಏಷ್ಯಾದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಬೆಳಗಿದ್ದಾರೆ.

ಹಿಂದಿನ ನಾಲ್ಕು ಋತುಗಳಲ್ಲಿ ಪ್ರತಿ ಬಾರಿ 30ಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಿರುವ ಅವರ ಗೋಲು ಗಳಿಕೆ ಮಟ್ಟ ಒಮ್ಮೆಯೂ 10ಕ್ಕಿಂತ ಕಡಿಮೆ ಆಗಲಿಲ್ಲ. ಈ ಬಾರಿ ಈಗಾಗಲೇ 16 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಸಾಮರ್ಥ್ಯಕ್ಕೆ ಹ್ಯಾರಿ ಕೇನ್ ಅವರೇ ಪ್ರಮುಖ ಕಾರಣ ಎನ್ನುವ ಉದಾರಿ ಸನ್ ಹ್ಯೂಂಗ್‌. ಈ ಜೋಡಿ ಪ್ರತಿ ಪಂದ್ಯದಲ್ಲೂ ಬಲಿಷ್ಠವಾಗುತ್ತ ಸಾಗುತ್ತಿದೆ. ಪ್ರೀಮಿಯರ್ ಲೀಗ್‌ನ ಈ ಋತುವಿನಲ್ಲಿ ಈಗಾಗಲೇ ಇವರಿಬ್ಬರು ಜೊತೆಗೂಡಿ 13 ಗೋಲು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT