ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊ ಕಪ್ ಫುಟ್‌ಬಾಲ್‌: ಸ್ವೀಡನ್ ಮಣಿಸಿದ ಉಕ್ರೇನ್‌ ಎಂಟರ ಘಟ್ಟಕ್ಕೆ

ಹೆಚ್ಚುವರಿ ಅವಧಿಯಲ್ಲಿ ಗೋಲು ಗಳಿಸಿದ ಆರ್ಟೆಮ್‌ ಡೌಬಿಕ್
Last Updated 30 ಜೂನ್ 2021, 14:05 IST
ಅಕ್ಷರ ಗಾತ್ರ

ಗ್ಲಾಸ್ಗೊ, ಸ್ಕಾಟ್ಲೆಂಡ್‌: ಹೆಚ್ಚುವರಿ 30 ನಿಮಿಷಗಳ ಇಂಜುರಿ ಅವಧಿಯಲ್ಲಿ ಆರ್ಟೆಮ್‌ ಡೌಬಿಕ್ ಗಳಿಸಿದ ಗೋಲು ಉಕ್ರೇನ್‌ ತಂಡದಲ್ಲಿ ಸಂಭ್ರಮದ ಅಲೆ ಎಬ್ಬಿಸಿತು. ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ರೋಚಕ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 2–1 ಅಂತರದಿಂದ ಗೆದ್ದ ಉಕ್ರೇನ್ ಎಂಟರ್ ಘಟ್ಟ ಪ್ರವೇಶಿಸಿತು.

ಎರಡು ಸೋಲುಗಳೊಂದಿಗೆ ಪ್ರಯಾಸದಿಂದ ಪ್ರೀ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದ ಉಕ್ರೇನ್ ಈ ಪಂದ್ಯದಲ್ಲೂ ಸೋಲಿನ ಸುಳಿಯಲ್ಲಿ ಸಿಲುಕಿತ್ತು. 27ನೇ ನಿಮಿಷದಲ್ಲಿ ‌ಮುನ್ನಡೆ ಸಾಧಿಸಿದ್ದರೂ 43ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತ್ತು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಹೆಚ್ಚುವರಿ ಅರ್ಧತಾಸು ಒದಗಿಸಲಾಗಿತ್ತು. ಈ ಸಂದರ್ಭದಲ್ಲೂ ಎರಡೂ ತಂಡಗಳು ಕೆಚ್ಚೆದೆಯಿಂದ ಹೋರಾಡಿದವು. ಇಂಜುರಿ ಅವಧಿ ಆರಂಭಗೊಂಡು ಎರಡನೇ ನಿಮಿಷದಲ್ಲಿ ಬದಲಿ ಆಟಗಾರ ಡೌಬಿಕ್ ಅವರು ಉಕ್ರೇನ್‌ನ ಕೈ ಹಿಡಿದರು.ಅಲೆಕ್ಸಾಂಡರ್‌ ಜಿಂಚೆಂಕೊ ನೀಡಿದ ಕ್ರಾಸ್‌ನಲ್ಲಿ ಹೆಡರ್ ಮೂಲಕ ಚೆಂಡನ್ನು ಡೌಬಿಕ್ ಗೋಲುಪೆಟ್ಟಿಗೆಯ ಒಳಗೆ ತಳ್ಳಿದರು. ಎದುರಾಳಿ ತಂಡದ ಗೋಲ್‌ಕೀಪರ್ ರಾಬಿನ್ ಒಲ್ಸೆನ್ ತಡೆಯಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. 24 ವರ್ಷದ ಡೌಬಿಕ್ ರಾಷ್ಟ್ರೀಯ ತಂಡಕ್ಕಾಗಿ ಗಳಿಸಿದ ಮೊದಲ ಗೋಲು ಇದು.

27ನೇ ನಿಮಿಷದಲ್ಲಿ ನಾಯಕ ಆ್ಯಂಡ್ರಿ ಯರ್ಮಲೆಂಕೊ ನೀಡಿದ ಪಾಸ್‌ ನಿಯಂತ್ರಿಸಿದ ಅಲೆಕ್ಸಾಂಡರ್‌ ಜಿಂಚೆಂಕೊ ನೆಲಮಟ್ಟದಲ್ಲಿ ಚೆಂಡನ್ನು ಮಿಂಚಿನ ವೇಗದಲ್ಲಿ ಗೋಲುಪೆಟ್ಟಿಗೆಯ ಒಳಗೆ ಅಟ್ಟಿದ್ದರು. 43ನೇ ನಿಮಿಷದಲ್ಲಿ ಎಮಿಲ್ ಫೋರ್ಸ್‌ಬರ್ಗ್‌ ನಾಜೂಕಿನಿಂದ ಚೆಂಡನ್ನು ಗುರಿ ಸೇರಿಸಿದ್ದರು.

ಜರ್ಮನಿ ಕೋಚ್ ರಾಜೀನಾಮೆ
ಲಂಡನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 0–2 ಗೋಲುಗಳಿಂದ ಸೋತ ಜರ್ಮನಿ ತಂಡದ ಕೋಚ್ ಜೋಕಿಮ್‌ ಲ್ಯೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ಮೂಲಕ ತಂಡದೊಂದಿಗೆ 15 ವರ್ಷಗಳ ಅವರ ಸಂಬಂಧಕ್ಕೆ ತೆರೆ ಬಿತ್ತು.

ಅವರ ತರಬೇತಿಯಲ್ಲಿ ತಂಡ ಈ ವರೆಗೆ 124 ಪಂದ್ಯಗಳಲ್ಲಿ ಜಯ ಗಳಿಸಿದ್ದು 40 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಕೇವಲ 34 ಸೋಲು ಕಂಡಿದೆ.2014ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲಿಸಿಕೊಟ್ಟ ಅವರು ಆ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಬ್ರೆಜಿಲ್ ಎದುರು 7–1ರ ಜಯ ಗಳಿಸುವಲ್ಲೂ ತಂಡಕ್ಕೆ ನೆರವಾಗಿದ್ದರು.

ಕ್ವಾರ್ಟರ್‌ ಫೈನಲ್ ವೇಳಾಪಟ್ಟಿ

ದಿನಾಂಕ; ತಂಡಗಳು; ಪಂದ್ಯ ನಡೆಯುವ ಸ್ಥಳ: ಸಮಯ

ಜು.2; ಸ್ವಿಟ್ಜರ್ಲೆಂಡ್‌–ಸ್ಪೇನ್; ಸೇಂಟ್ ಪಿಟರ್ಸ್‌ಬರ್ಗ್‌;9.30

ಜು.2; ಬೆಲ್ಜಿಯಂ–ಇಟಲಿ; ಮ್ಯೂನಿನಚ್;12.30

ಜು.3; ಜೆಕ್‌ ಗಣರಾಜ್ಯ–ಡೆನ್ಮಾರ್ಕ್‌; ಬಾಕು;9.30

ಜು3; ಉಕ್ರೇನ್‌–ಇಂಗ್ಲೆಂಡ್‌; ರೋಮ್‌;12.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT