ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ಚಾಂಪಿಯನ್‌ ತಂಡದ ಮೇಲೆ ಅಭಿನಂದನೆಯ ಮಳೆ

ಅಮೆರಿಕಕ್ಕೆ ಪ್ರಶಸ್ತಿ; ಮಿಂಚಿದ ಮೇಗನ್, ರೋಸ್
Last Updated 8 ಜುಲೈ 2019, 19:53 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದ ಅಮೆರಿಕ ತಂಡದ ಮೇಲೆ ಅಭಿನಂದನೆಯ ಮಳೆ ಸುರಿದಿದೆ. ಕ್ರೀಡಾಪಟುಗಳು, ರಾಜಕಾರಣಿಗಳು ಮತ್ತು ವಿವಿಧ ಕ್ಷೇತ್ರದ ಗಣ್ಯರು ತಂಡವನ್ನು ಅಭಿನಂದಿಸಿದ್ದು ಆಟಗಾರ್ತಿಯರನ್ನು ವಿಶಿಷ್ಟ ರೀತಿಯಲ್ಲಿ ಗೌರವಿಸಲು ನ್ಯೂಯಾರ್ಕ್ ಮೇಯರ್ ನಿರ್ಧರಿಸಿದ್ದಾರೆ. 2015ರಲ್ಲಿ ಪ್ರಶಸ್ತಿ ಗೆದ್ದಾಗಲೂ ತಂಡಕ್ಕೆ ಭರ್ಜರಿ ಸ್ವಾಗತ ಕೋರಲಾಗಿತ್ತು.

ಫ್ರಾನ್ಸ್‌ನ ಗ್ರೂಪಮಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮೇಗನ್ ರಾಪಿನೊ ಮತ್ತು ರೋಸ್ ಲಾವೆಲಿ ಗಳಿಸಿದ ಗೋಲುಗಳ ಬಲದಿಂದ ಅಮೆರಿಕ ತಂಡದವರು 2–0ಯಿಂದ ನೆದರ್ಲೆಂಡ್ಸ್‌ ವಿರುದ್ಧ ಜಯ ಗಳಿಸಿದ್ದರು. ಈ ಮೂಲಕ ಸತತ ಎರಡನೇ ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆದ ಸಾಧನೆ ತಂಡದ್ದು.

ಮಹಿಳಾ ತಂಡವನ್ನು ಅಭಿನಂದಿಸಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಇದೊಂದು ಅ‌ಪ್ರತಿಮ ಸಾಧನೆ. ತಂಡದ ಪ್ರತಿಯೊಬ್ಬರೂ ಅಭಿನಂದನೆಗೆ ಅರ್ಹರು’ ಎಂದಿದ್ದಾರೆ. ಸ್ಥಳೀಯ ಮಾಧ್ಯಮಗಳಲ್ಲೂ ತಂಡದ ಸಾಧನೆಯನ್ನು ಕೊಂಡಾಡಿ ವರದಿಗಳು ಪ್ರಕಟಗೊಂಡಿವೆ.

‘ಭರವಸೆ, ಛಲ ಮತ್ತು ಕೆಚ್ಚೆದೆಯ ಆಟದ ಮೂಲಕ ತಂಡದ ಆಟಗಾರ್ತಿಯರು ಅಮೆರಿಕ ಮಹಿಳೆಯರ ಬಲ ಏನೆಂದು ತೋರಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ’ ಎಂದು ನ್ಯೂಯಾರ್ಕ್ ಮೇಯರ್ ಬಿಲ್‌ ಡಿ ಬ್ಲಾಸಿಯೊ ಹೇಳಿದ್ದಾರೆ.

ಅಮೆರಿಕದ ಪ್ರಮುಖ ನಗರಗಳಲ್ಲಿ ಫೈನಲ್ ಪಂದ್ಯ ವೀಕ್ಷಿಸಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಫುಟ್‌ಬಾಲ್ ಪ್ರಿಯರು ಪಂದ್ಯದ ಪ್ರತಿ ಕ್ಷಣವನ್ನೂ ಆಸ್ವಾದಿಸಿದ್ದರು. ಪ್ರತಿ ಗೋಲು ಬಂದಾಗಲೂ ಕುಣಿದು ಕುಪ್ಪಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT