ಸೋಮವಾರ, ಮೇ 23, 2022
30 °C
ಭಾರತ ಮಹಿಳಾ ತಂಡದ ಕೋಚ್‌ ಥಾಮಸ್‌ ಡೆನೆರ್ಬಿ ಆರೋಪ

ಕೋವಿಡ್‌ ಹರಡಲು ಬಯೋಬಬಲ್ ಲೋಪ ಕಾರಣ: ಕೋಚ್‌ ಥಾಮಸ್‌ ಡೆನೆರ್ಬಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಆಟಗಾರ್ತಿಯರಲ್ಲಿ ಕೋವಿಡ್ ಖಚಿತಪಟ್ಟು, ಏಷ್ಯಾಕಪ್‌ ಟೂರ್ನಿಯಿಂದ ಭಾರತ ಮಹಿಳಾ ಫುಟ್‌ಬಾಲ್‌ ತಂಡವು ಹೊರಗುಳಿಯಲು ಅಸುರಕ್ಷಿತ ಬಯೋಬಬಲ್ ವ್ಯವಸ್ಥೆಯೇ ಕಾರಣ. ಹೊಟೇಲ್ ಸಿಬ್ಬಂದಿಯಿಂದ ಸೋಂಕು ಹರಡಿತು ಎಂದು ತಂಡದ ಕೋಚ್‌ ಥಾಮಸ್‌ ಡೆನೆರ್ಬಿ ನೇರ ಆರೋಪ ಮಾಡಿದ್ದಾರೆ.

ಈ ಕುರಿತು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್‌ನ (ಎಎಫ್‌ಸಿ) ಟೂರ್ನಿ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿರುವ ಥಾಮಸ್‌, ಫಿಫಾ ವಿಶ್ವಕಪ್‌ ಅರ್ಹತೆಯತ್ತ ಸಾಗುವ ಭಾರತ ಕನಸು ಕೈಗೂಡದಿರುವಲ್ಲಿ ಆಟಗಾರ್ತಿಯರ ಯಾವುದೇ ತಪ್ಪಿಲ್ಲ. ಇದಕ್ಕೆ ಎಎಫ್‌ಸಿ ರೂಪಿಸಿದ್ದ ಬಯೋಬಬಲ್‌ ವ್ಯವಸ್ಥೆಯ ಲೋಪವೇ ಕಾರಣ ಎಂದಿದ್ದಾರೆ.

‘ಇಂತಹ ಮಹತ್ವದ ಟೂರ್ನಿಯಲ್ಲಿ ಎಎಫ್‌ಸಿ ಅಸಾಧಾರಣ ಪರಿಸ್ಥಿತಿಯನ್ನು ಎದುರಿಸಲು ತಂಡಕ್ಕೆ ಯಾವುದೇ ರೀತಿಯ  ಸಹಾನುಭೂತಿಯನ್ನೂ ತೋರಿಸಲಿಲ್ಲ‘ ಎಂದು ಅವರು ದೂರಿದರು.

‘ನಾವು ತಂಡದ ಹೋಟೆಲ್‌ಗೆ ತಲುಪಿದಾಗ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ತರಬೇತಿಗಾಗಿ ಹೋಟೆಲ್‌ನಿಂದ ಹೊರಗೆ ಹೋದ ದಿನದಂದು ಮೊದಲ ‘ಪಾಸಿಟಿವ್‘ ದೃಢಪಟ್ಟಿತ್ತು. ಇದಾದ ಒಂದು ದಿನದ ಬಳಿಕ (ಜನವರಿ 17), ಏಳು ಹೋಟೆಲ್ ಸಿಬ್ಬಂದಿಗೆ ಸೋಂಕು ಖಚಿತಪಟ್ಟಿತ್ತು. ಹೀಗಾಗಿ ಇದು ಏಕಾಏಕಿ ಹೇಗೆ ಸಂಭವಿಸಿತು ಎಂದು ತಿಳಿಯಲು ರಾಕೆಟ್‌ ವಿಜ್ಞಾನದ ಅಗತ್ಯವಿಲ್ಲ‘ ಎಂದು ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಡೆನೆರ್ಬಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಹೋಟೆಲ್ ಸಿಬ್ಬಂದಿಯ ಪರೀಕ್ಷೆಗಳನ್ನು ಜನವರಿ 17ರಂದು ನಡೆಸಲಾಯಿತು. ಜನವರಿ 18ರಂದು ಏಳು ಪ್ರಕರಣಗಳು ಪತ್ತೆಯಾದವು. ಆದರೆ ಮಾಹಿತಿಯನ್ನು ಜನವರಿ 19ರಂದು ಮಧ್ಯಾಹ್ನ ನೀಡಲಾಯಿತು. ಇಡೀ ಒಂದು ದಿನ ಎಎಫ್‌ಸಿ ಏನು ಮಾಡುತ್ತಿತ್ತು‘ ಎಂದು ಅವರು ಪ್ರಶ್ನಿಸಿದ್ದಾರೆ.

ಡಜನ್ ಆಟಗಾರ್ತಿಯರಲ್ಲಿ ಕೋವಿಡ್‌ ಖಚಿತಪಟ್ಟ ಕಾರಣ ಭಾರತ ತಂಡವು ಭಾನುವಾರ ಎಎಫ್‌ಸಿ ಮಹಿಳಾ ಏಷ್ಯಾ ಕಪ್‌ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಅಂದು ನಡೆಯಬೇಕಿದ್ದ ಚೀನಾ ತೈಪೆ ವಿರುದ್ಧದ ಗುಂಪು ಹಂತದ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು