ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್‌: ನಾಕೌಟ್‌ಗೆ ಜಮೈಕಾ, ಫ್ರಾನ್ಸ್‌

Published 2 ಆಗಸ್ಟ್ 2023, 23:25 IST
Last Updated 2 ಆಗಸ್ಟ್ 2023, 23:25 IST
ಅಕ್ಷರ ಗಾತ್ರ

ಸಿಡ್ನಿ: ಕಡಿಡಿಯಾಟೌ ಡಿಯಾನಿ ಅವರ ಹ್ಯಾಟ್ರಿಕ್‌ ನೆರವಿನಿಂದ ಫ್ರಾನ್ಸ್‌ ತಂಡ ಹೋರಾಟದ ಪಂದ್ಯದಲ್ಲಿ 6–3 ಗೋಲುಗಳಿಂದ ಪನಾಮಾ ಮೇಲೆ ಜಯಗಳಿಸಿ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ನಾಕೌಟ್‌ ಹಂತಕ್ಕೆ ಬುಧವಾರ ಪ್ರವೇಶ ಪಡೆಯಿತು.

ಪನಾಮಾ ಪರ ಮಾರ್ತಾ ಕಾಕ್ಸ್ ಆರಂಭದಲ್ಲೇ ಗಳಿಸಿದ ಗೋಲಿನಿಂದ ಫ್ರಾನ್ಸ್‌ ಬೆರಗಾಗಿತ್ತು. ಫ್ರೀಕಿಕ್‌ನಲ್ಲಿ ಗಳಿಸಿದ ಈ ಗೋಲು ಪನಾಮಾ ಪರ ವಿಶ್ವಕಪ್‌ನ ಮೊದಲ ಗೋಲು ಎನಿಸಿತ್ತು.

ಆದರೆ ಫ್ರಾನ್ಸ್ ಚೇತರಿಸಿ ತಿರುಗೇಟು ನೀಡಿತು. ಪಿಎಸ್‌ಜಿ ಪರ ಆಡುವ ಡಿಯಾನಿ ವಿರಾಮಕ್ಕೆ ಮೊದಲು ಎರಡು ಗೋಲು ಗಳಿಸಿದರೆ, ಮ್ಯಾಲಿ ಲಕ್ರಾರ್‌ ಮತ್ತು ಲಿಯಾ ಲಿ ಗ್ಯಾರೆಕ್, ವಿಕಿ ಬೆಕೊ ತಲಾ ಒಂದೊಂದು ಗೋಲು ಗಳಿಸಿದರು. ವಿರಾಮದ ವೇಳೆ ಫ್ರಾನ್ಸ್‌ 4–1 ಗೋಲುಗಳಿಂದ ಮುಂದಿತ್ತು. ಪ್ರೇಕ್ಷಕರ ಬೆಂಬಲ ಪಡೆದಿದ್ದ ಪನಾಮಾ ಪರ ಯೊಮಿರಾ ಪಿಂಜಾನ್ ಮತ್ತು ಲಿನೆತ್ ಸೆಡೆನೊ ವಿರಾಮ ನಂತರ ಉಳಿದೆರಡು ಗೋಲು ಗಳಿಸಿದರು.

ಇಟಲಿಗೆ ಆಘಾತ (ಎಪಿ ವರದಿ): ವೆಲಿಂಗ್ಟನ್‌ನಲ್ಲಿ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3–2 ಗೋಲುಗಳಿಂದ ಇಟಲಿ ತಂಡಕ್ಕೆ ಆಘಾತ ನೀಡಿತು. ಸೋಲಿನೊಡನೆ ಟೂರ್ನಿಯಿಂದ ಹೊರಬಿದ್ದ   ಇಟಲಿ ಆಟಗಾರ್ತಿಯರು ಕ್ರೀಡಾಂಗಣದಲ್ಲಿ ಮಂಡಿಯೂರಿ ಕೆಲಕಾಲ ಕಣ್ಣೀರಾದರು.

ದಕ್ಷಿಣ ಆಫ್ರಿಕಾ ಫಿಫಾ ರ‍್ಯಾಂಕಿಂಗ್‌ನಲ್ಲಿ 54ನೇ ಸ್ಥಾನದಲ್ಲಿದ್ದರೆ, ಇಟಲಿ 16ನೇ ಸ್ಥಾನದಲ್ಲಿದೆ. ಸ್ವೀಡನ್‌ ಎದುರೂ ಇಟಲಿ ಮುಖಭಂಗ ಅನುಭವಿಸಿತ್ತು. ಹೀಗಾಗಿ ಇಲ್ಲಿ ಗೆಲುವು ಅನಿವಾರ್ಯ ಆಗಿತ್ತು.

ಜಮೈಕಾ ಮುನ್ನಡೆ:

(ಎಪಿ ವರದಿ): ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಜಮೈಕಾ ತಂಡ, ಬ್ರೆಜಿಲ್ ತಂಡದ ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡು, ಇದೇ ಮೊದಲ ಬಾರಿ ಪ್ರಿಕ್ವಾರ್ಟರ್‌ಫೈನಲ್‌ಗೆ ಸ್ಥಾನ ಕಾದಿರಿಸಿತು.

1995ರ ನಂತರ ಮೊದಲ ಬಾರಿ ಬ್ರೆಜಿಲ್‌ ತಂಡ ನಾಕೌಟ್‌ ಹಂತ ತಲುಪಲು ವಿಫಲವಾಗಿದೆ. ಗುಂಪಿನಲ್ಲಿ ಬ್ರೆಜಿಲ್‌ ಮತ್ತು ಫ್ರಾನ್ಸ್‌ಗಳಿಗಿಂತ ಕೆಳಕ್ರಮಾಂಕದಲ್ಲಿದ್ದ ಜಮೈಕಾ ಅನಿರೀಕ್ಷಿತ ಫಲಿತಾಂಶಗಳನ್ನು ನೀಡಿ ಗಮನ ಸೆಳೆಯಿತು. ಫ್ರಾನ್ಸ್‌ ಜೊತೆಯೂ ಗೋಲಿಲ್ಲದೇ ಡ್ರಾ ಮಾಡಿಕೊಂಡಿತು. ಪನಾಮಾ ಮೇಲೆ 4–0 ಜಯಪಡೆದಿತ್ತು.

ಮಹಿಳಾ ಫುಟ್‌ಬಾಲ್‌ ಕಂಡ ಶ್ರೇಷ್ಠ ಆಟಗಾರ್ತಿ ಎನಿಸಿರುವ ಬ್ರೆಜಿಲ್‌ ತಂಡದ ಮಾರ್ತಾ ಅವರು ನಿರಾಶೆಯ ನಡುವೆ ವಿಶ್ವಕಪ್‌ಗೆ ವಿದಾಯ ಹೇಳಿದರು. ‘ವಿಶ್ವಕಪ್‌ನಲ್ಲಿ ಇಂಥ ದುಃಸ್ವಪ್ನವನ್ನು ನಿರೀಕ್ಷಿಸಿರಲಿಲ್ಲ’ ಎಂದು 37 ವರ್ಷದ ಆಟಗಾರ್ತಿ ಪ್ರತಿಕ್ರಿಯಿಸಿದರು. ಅವರು ವಿಶ್ವಕಪ್‌ನಲ್ಲಿ ಇದುವರೆಗೆ 17 ಗೋಲುಗಳೊಡನೆ ಸರ್ವಾಧಿಕ ಸ್ಕೋರರ್ ಎನಿಸಿದ್ದಾರೆ.

ಸತತ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಅಮೆರಿಕ ತಂಡ, 16ರ ಘಟ್ಟದ ಪಂದ್ಯದಲ್ಲಿ ಸ್ವೀಡನ್ ಎದುರು ಆಡಲಿದೆ. ಫೆವರೀಟ್‌ ಹಣೆಪಟ್ಟಿಯೊಡನೆ ಟೂರ್ನಿಗೆ ಬಂದಿದ್ದ ಅಮೆರಿಕ ನಾಕೌಟ್‌ಗೇರಲು ಏದುಸಿರು ಬಿಡಬೇಕಾಯಿತು.

ಸಂಕಷ್ಟದ ನಡುವೆ ಜಮೈಕಾ ಸಾಧನೆ

ಅನೇಕ ಸಂಕಷ್ಟಗಳ ನಡುವೆಯೂ ಬಡ ರಾಷ್ಟ್ರ ಜಮೈಕಾ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಈ ತಂಡಕ್ಕೆ ದೇಶದ  ಫೆಡರೇಷನ್‌ನ ಬೆಂಬಲವೂ ಅಷ್ಟಕ್ಕಷ್ಟೇ ಇತ್ತು. ಆರ್ಥಿಕ ಮುಗ್ಗಟ್ಟೂ ಕಾಡಿತ್ತು. ಆದರೆ ಅಭಿಮಾನಿಗಳು ಕೈಬಿಡಲಿಲ್ಲ. ಎರಡು ಬಾರಿ ‘ಕ್ರೌಡ್‌ ಫಂಡಿಂಗ್‌’ (ವಂತಿಗೆ ಸಂಗ್ರಹ) ಮೂಲಕ ₹82.75 ಲಕ್ಷ ಸಂಗ್ರಹವಾಯಿತು. ತಂಡ ವಿಶ್ವಕಪ್‌ನಲ್ಲಿ ಭಾಗವಹಿಸಿತು ಮಾತ್ರವಲ್ಲ, ಮೊದಲ ಬಾರಿ ನಾಕೌಟ್‌ಗೂ ಲಗ್ಗೆಯಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT