ಗುರುವಾರ , ಅಕ್ಟೋಬರ್ 29, 2020
26 °C
ಸೂಕ್ತ ಬೀಳ್ಕೊಡುಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭ

ಧೋನಿ, ರೈನಾ ನಿವೃತ್ತಿ: ವಿದಾಯ ಪಂದ್ಯಕ್ಕೆ ಅಭಿಮಾನಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕ್ರಿಕೆಟ್‌ನಲ್ಲಿ ಉನ್ನತ ಸಾಧನೆ ಮಾಡಿ ನಿವೃತ್ತರಾಗುವ ಆಟಗಾರರಿಗೆ ಗೌರವಯುತ ಬೀಳ್ಕೊಡುಗೆಯನ್ನು ಬಿಸಿಸಿಐ ಕೊಡುತ್ತಿಲ್ಲ  ಎಂಬ ಆರೋಪಕ್ಕೆ ಈಗ ಮತ್ತೆ ಬಲ ಬಂದಿದೆ.

ಶನಿವಾರ ತಮ್ಮ ಹದಿನಾರು ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ಮಹೇಂದ್ರ ಸಿಂಗ್‌ ಧೋನಿ ವಿದಾಯ ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದರು.  ಕ್ರಿಕೆಟ್‌ಗೆ ಇವರಿಬ್ಬರ ಕಾಣಿಕೆ ಬಹಳ ದೊಡ್ಡದು. ಅವರಿಗೆ ಸೂಕ್ತ ಬೀಳ್ಕೊಡುಗೆ ನೀಡಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

ನಿವೃತ್ತರಾಗಿರುವ 11 ಜನ ಆಟಗಾರರ ತಂಡವನ್ನೇ ರಚಿಸಿ ‘ಇದೋ ಪಂದ್ಯಕ್ಕೆ ತಂಡ ಸಿದ್ಧವಿದೆ. ನೀವೂ ತಂಡ ರಚಿಸಿ, ಎರಡೂ ತಂಡಗಳ ನಡುವೆ ಪಂದ್ಯ ನಡೆಸಿ’ ಎಂದು ಅಭಿಮಾನಿಗಳು ಬಿಸಿಸಿಐ ಟ್ಯಾಗ್‌ ಮಾಡಿ ಟ್ವೀಟಿಸಿದ್ದಾರೆ. ಸಚಿನ್‌ ನಂತರ ದೇಶದ ಯಾವುದೇ ಪ್ರಮುಖ ಆಟಗಾರರಿಗೆ ಸರಿಯಾದ ಬೀಳ್ಕೊಡುಗೆ ನೀಡಿಲ್ಲ ಎಂದು ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ.

ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ಯುವರಾಜ್‌ ಸಿಂಗ್‌, ಗೌತಮ್‌ ಗಂಭೀರ್‌, ಜಹೀರ್‌ ಖಾನ್‌ ಹಾಗೂ ವೀರೇಂದ್ರ ಸೆಹ್ವಾಗ್‌ ಸೇರಿದಂತೆ ಹಲವು ಆಟಗಾರರಿಗೆ ಸೂಕ್ತ ರೀತಿಯಲ್ಲಿ ವೃತ್ತಿ ಬದುಕಿನಿಂದ ಬೀಳ್ಕೊಡುಗೆ ನೀಡಲಾಗಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ‘ವಿದಾಯ ಪಂದ್ಯ‘ ಬೇಕು ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.

ಐಸಿಸಿ ಶ್ಲಾಘನೆ:   ಧೋನಿ ಅವರು ಕ್ರಿಕೆಟ್‌ನಲ್ಲಿ ಇಡೀ ಒಂದು ಪೀಳಿಗೆಗೇ ಪ್ರೇರಣೆಯಾಗಿದ್ದಾರೆ. ಅವರು ನಿವೃತ್ತಿ ಘೋಷಿಸಿದ್ದು ಕ್ರಿಕೆಟ್‌ಗೆ ದೊಡ್ಡ ನಷ್ಟ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹೇಳಿದೆ.

‘ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರದು ದೊಡ್ಡ ಹೆಸರು. 2011ರ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಅವರು ಹೊಡೆದ ಗೆಲುವಿನ ರನ್ ವಿಶ್ವದ ಎಲ್ಲ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸಾನ್ವಿ ಹೇಳಿದ್ದಾರೆ.

ಮಾಧ್ಯಮಗಳ ಟೀಕೆಗಳಿಂದ ನಿವೃತ್ತಿ–ಸಂದೇಹ: ‘ಹೋದ ವರ್ಷದ ವಿಶ್ವಕಪ್ ಟೂರ್ನಿಯ ನಂತರ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯದಲ್ಲಿ  ಆಡದಿದ್ದರೂ ಧೋನಿ ಅದು ಹೇಗೆ ಭಾರತ ತಂಡಕ್ಕೆ ಮರಳುತ್ತಾರೆ ಎಂದು ತಮ್ಮ ಕುರಿತು ಮಾಧ್ಯಮಗಳು  ಪ್ರಶ್ನೆ ಎತ್ತಿದ್ದವು. ಆದ್ದರಿಂದಲೇ ಧೋನಿ ಇಂತಹ ನಿರ್ಧಾರ ಮಾಡಿರಬಹುದು’ ಎಂದು ಮಹಿಯ ಬಾಲ್ಯದ ಕೋಚ್ ಕೇಶವ್ ರಂಜನ್ ಬ್ಯಾನರ್ಜಿಯವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಧೋನಿ ಅರ್ಹರು: ಶಾಂತಾ ರಂಗಸ್ವಾಮಿ

ಧೋನಿ ಅವರ ಜೆರ್ಸಿಗೆ ವಿದಾಯ ಹೇಳುವ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ ಅಪೆಕ್ಸ್‌ ಕೌನ್ಸಿಲ್‌ ಸದಸ್ಯೆ ಶಾಂತಾ ರಂಗಸ್ವಾಮಿ ಅವರು ‘ಈ ಗೌರವಕ್ಕೆ ಧೋನಿ ಅರ್ಹರು’ ಎಂದಿದ್ದಾರೆ.

‘ನಿವೃತ್ತಿ ಕುರಿತು ಮಾತುಗಳು ಕೇಳಿಬರುತ್ತಿರುವಾಗಲೇ ಧೋನಿ ವಿದಾಯ ಪ್ರಕಟಿಸಿದ್ದಾರೆ ಎಂಬುದು ಖುಷಿಯ ಸಂಗತಿ. ಆಟಗಾರ ಹಾಗೂ ನಾಯಕನಾಗಿ ಅವರ ಕೊಡುಗೆ ಅಪಾರವಾಗಿದೆ. ಇದನ್ನು ಪರಿಗಣಿಸಿ ಜೆರ್ಸಿಗೆ ವಿದಾಯ ಹೇಳಿದರೆ ಅವರಿಗೆ ಸೂಕ್ತ ಗೌರವ ದೊರೆತಂತಾಗುತ್ತದೆ‘ ಎಂದು ಶಾಂತಾ ಹೇಳಿದ್ದಾರೆ.

ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ನಿವೃತ್ತಿಯೊಂದಿಗೆ ಅವರು ಜೆರ್ಸಿಗೂ ವಿದಾಯ ಹೇಳಲಾಗಿದೆ. ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಸಚಿನ್‌ ಅವರಿಗೆ ಮಾತ್ರ ಈ ಗೌರವ ಲಭಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಮಿಥಾಲಿ ರಾಜ್, ‘ಸಂಖ್ಯೆ 7ರ ಜರ್ಸಿಯು ಧೋನಿಗೆ ಮಾತ್ರ ಸಲ್ಲುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು