ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಮಿಯಲ್ಲಿ ಸೋತ ಗಾಯತ್ರಿ–ತ್ರಿಶಾ

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌
Published : 18 ಮಾರ್ಚ್ 2023, 12:38 IST
ಫಾಲೋ ಮಾಡಿ
Comments

ಬರ್ಮಿಂಗ್‌ಹ್ಯಾಮ್‌: ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌ ಅವರ ಗೆಲುವಿನ ಓಟಕ್ಕೆ ತಡೆ ಬಿದ್ದಿದೆ. ಇದರೊಂದಿಗೆ ಭಾರತದ ಸವಾಲೂ ಅಂತ್ಯವಾಗಿದೆ.

ಶನಿವಾರ ನಡೆದ ಮಹಿಳಾ ಡಬಲ್ಸ್ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು 10–21, 10–21ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿರುವ ಕೊರಿಯಾದ ಬೇಕ್‌ ನ ಹಾ ಮತ್ತು ಲೀ ಸೋ ಹೀ ಎದುರು ಸೋತರು. ಕೇವಲ 46 ನಿಮಿಗಳಲ್ಲಿ ತ್ರಿಶಾ– ಗಾಯತ್ರಿ ಸೋಲುವುದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ನಾಲ್ಕರ ಘಟ್ಟದಲ್ಲಿ ಎಡವಿದರು.

ಗಾಯತ್ರಿ ಅವರ ತಂದೆ, ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರು 2001ರಲ್ಲಿ ಇಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ನಾಲ್ಕರ ಘಟ್ಟದ ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲೇ ಗಾಯತ್ರಿ–ತ್ರಿಶಾ 0–4ರಿಂದ ಹಿನ್ನಡೆ ಅನುಭವಿಸಿದರು. ದೀರ್ಘ ರ‍್ಯಾಲಿಗಳ ಮೂಲಕ ಮಿಂಚಿದ ಕೊರಿಯಾ ಜೋಡಿ, ಭಾರತದ ಆಟಗಾರ್ತಿಯರ ತಪ್ಪುಗಳ ಲಾಭ ಪಡೆದು 11–5ರಿಂದ ಮುನ್ನಡೆ ಸಾಧಿಸಿತು. ಬಳಿಕ ಗಾಯತ್ರಿ–ತ್ರಿಶಾ 9–13ರಿಂದ ಹಿನ್ನಡೆ ತಗ್ಗಿಸಿಕೊಂಡರು. ಆದರೆ ಸತತ ಏಳು ಪಾಯಿಂಟ್ಸ್ ಬಲದಿಂದ ಬೇಕ್‌–ಲೀ ಗೇಮ್ ಗೆದ್ದರು.

ಎರಡನೇ ಗೇಮ್‌ನ ಮೊದಲಾರ್ಧದ ವೇಳೆಗೆ ಬೇಕ್‌– ಲೀ 11–2ರಿಂದ ಭಾರಿ ಮುನ್ನಡೆ ಸಾಧಿಸಿತು. ಭಾರತದ ಆಟಗಾರ್ತಿಯರು ಒಂದು ಹಂತದಲ್ಲಿ 5–11ರಿಂದ ಹಿನ್ನಡೆ ತಗ್ಗಿಸಿಕೊಂಡರೂ ಸೋಲು ತಪ್ಪಿಸಿಕೊಳ್ಳಲು ಆಗಲಿಲ್ಲ. ದೊಡ್ಡ ಅಂತರದಿಂದ ಗೇಮ್ ಜಯಿಸಿದ ಕೊರಿಯಾ ಆಟಗಾರ್ತಿಯರು ಫೈನಲ್‌ಗೆ ಲಗ್ಗೆಯಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT