ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌, ರಿಶೋನ್‌, ಇಶಾನ್ ಪಾರಮ್ಯ

ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಷಿಪ್‌
Last Updated 12 ಜನವರಿ 2021, 13:16 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ನಗರದ ಅರ್ಜುನ್ ಮೈನಿ, ರಿಶೋನ್ ರಾಜೀವ್ ಮತ್ತು ಇಶಾನ್ ಮಾದೇಶ್ ಅವರು ಮೈಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗಳನ್ನು ಜಯಿಸಿದರು.

ಕೋವಿಡ್‌ –19 ಪಿಡುಗಿನ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಒಂದೇ ತಾಣದಲ್ಲಿ ಮೂರು ಸುತ್ತುಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾರತದ ಮೊದಲ ಫಾರ್ಮುಲಾ ಒನ್‌ ಡ್ರೈವರ್ ಎನ್ನುವ ಹಿರಿಮೆ ಹೊಂದಿರುವ ನರೇನ್ ಕಾರ್ತಿಕೇಯನ್ ಅತಿಥಿ ಚಾಲಕರಾಗಿ ಪಾಲ್ಗೊಂಡು ಕೆಲ ರೇಸ್‌ನಲ್ಲಿ ಭಾಗವಹಿಸಿದ್ದರು.

ಫಾರ್ಮುಲಾ 2 ಚಾಲಕ ಅರ್ಜುನ್ ಮೈನಿ (ಎನ್‌ಕೆ ರೇಸಿಂಗ್ ಅಕಾಡೆಮಿ) ರೋಟಾಕ್ಸ್ ಮ್ಯಾಕ್ಸ್‌ ವಿಭಾಗದಲ್ಲಿ ಗರಿಷ್ಠ ಪಾಯಿಂಟ್ಸ್ ಕಲೆಹಾಕಿ ಪ್ರಶಸ್ತಿಗೆ ಮುತ್ತಿಟ್ಟರು. ಅವರು ಒಟ್ಟು 421 ಪಾಯಿಂಟ್ಸ್ ಗಳಿಸಿದರು. ಅವರ ಕಿರಿಯ ಸಹೋದರ ಖುಷ್ (ಎನ್‌ಕೆ ರೇಸಿಂಗ್ ಅಕಾಡೆಮಿ), ತಾವು ಕಣಕ್ಕಿಳಿದಿದ್ದ ಎಲ್ಲ ಮೂರು ಸುತ್ತುಗಳಲ್ಲಿ ಅಗ್ರಸ್ಥಾನ ಗಳಿಸಿದರು. ಆದರೆ 2ನೇ ಹಾಗೂ 5ನೇ ಸುತ್ತಿನಲ್ಲಿ ಖುಷ್ ಸ್ಪರ್ಧಿಸದ ಕಾರಣ ಅವರ ಸಹೋದರ ಅರ್ಜುನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಅನುಕೂಲವಾಯಿತು.

ಈ ವಿಭಾಗದಲ್ಲಿ ಆಗ್ರಾದ ಶಹಾನ್ ಅಲಿ ಮೊಹಿಸಿನ್‌ (ಎಂಸ್ಪೋರ್ಟ್) 400 ಅಂಕಗಳೊಂದಿಗೆ 2ನೇ ಸ್ಥಾನ ಗಳಿಸಿದರೆ, ಬೆಂಗಳೂರಿನವರೇ ಆದ ಮಿಹಿರ್ ಸುಮನ್ (ಬಿರೆಲ್ ಆರ್ಟ್) ಕೇವಲ 4 ಅಂಕಗಳಿಂದ ಹಿಂದೆ ಬಿದ್ದು 3ನೇ ಸ್ಥಾನ ಪಡೆದರು.

ರಿಶೋನ್ ರಾಜೀವ್ (ಬಿರೆಲ್ ಆರ್ಟ್)ಕಿರಿಯರ ಮ್ಯಾಕ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅವರು ಒಟ್ಟು 436 ಪಾಯಿಂಟ್ಸ್ ಕಲೆಹಾಕಿದರು. ತಮ್ಮ ಸ್ಥಿರ ಪ್ರದರ್ಶನಕ್ಕೆ ವರ್ಷದ ಶ್ರೇಷ್ಠ ಚಾಲಕ ಪ್ರಶಸ್ತಿಯನ್ನೂ ಸಹ ಗಳಿಸಿದರು.ರುಹಾನ್ ಆಳ್ವಾ (ಎಂಸ್ಪೋರ್ಟ್, 410) ಹಾಗೂ ರೋಹನ್ ಮಾದೇಶ್ (ಪೆರಿಗ್ರೈನ್ ರೇಸಿಂಗ್ ಇಂಟರ್‌ನ್ಯಾಷನಲ್, 399) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ರೋಹನ್‌ರ ಕಿರಿಯ ಸಹೋದರ ಇಶಾನ್ ಮಾದೇಶ್ (ಪೆರಿಗ್ರೈನ್ ರೇಸಿಂಗ್ ಇಂಟರ್‌ನ್ಯಾಷನಲ್) ಮೈಕ್ರೊ ಮ್ಯಾಕ್ಸ್ ವಿಭಾಗದಲ್ಲಿ ಟ್ರೋಫಿಗೆ ಮುತ್ತಿಟ್ಟರು. ಒಟ್ಟು 445 ಪಾಯಿಂಟ್ಸ್ ಕಲೆಹಾಕಿದ ಇಶಾನ್, 2ನೇ ಸ್ಥಾನ ಪಡೆದ ಆದಿತ್ಯ ಸುರೇಶ್ ಕಾಮತ್ (ಬಿರೆಲ್ ಆರ್ಟ್ ರೇಸಿಂಗ್; 413) ಹಾಗೂ ಅರಾಫತ್ ಶೇಖ್ ಅವರನ್ನು (ಎಂಸ್ಪೋರ್ಟ್; 413)ಹಿಂದಿಕ್ಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT