ಯೊಕೊಹಾಮ, ಜಪಾನ್: ಭಾರತದ ಅಶ್ಮಿತಾ ಚಲಿಹಾ ಮತ್ತು ಮಾಳವಿಕಾ ಬಾನ್ಸೊದ್ ಅವರು ಮಂಗಳವಾರ ಆರಂಭವಾದ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದರು.
ಅಷ್ಮಿತಾ ಅವರು 16–21, 12–21 ರಿಂದ ಚೈನಿಸ್ ತೈಪೆಯ ತೈ ಝು ಯಿಂಗ್ ವಿರುದ್ಧ ಮಣಿದರು.
ಇನ್ನೊಂದು ಪಂದ್ಯದಲ್ಲಿ ಮಾಳವಿಕಾ ಅವರು 21–23, 19–21ರ ಗೇಮ್‌ಗಳಲ್ಲಿ ಉಕ್ರೇನ್‌ನ ಪೊಲಿನಾ ಬುಹರೊವಾ ವಿರುದ್ಧ ಸೋಲನುಭವಿಸಿದರು.
ನಂತರದ ಪಂದ್ಯದಲ್ಲಿ ಭಾರತದ ಇನ್ನೊಬ್ಬ ಆಟಗಾರ್ತಿ ಆಕರ್ಷಿ ಕಶ್ಯಪ್ ಕೂಡ ನಿರಾಶೆ ಅನುಭವಿಸಿದರು. ಆಕರ್ಷಿ 13–21, 12–21ರಿಂದ ಕೊರಿಯಾದ ಕಿಮ್ ಗಾ ಯೂನ್ ವಿರುದ್ಧ ಪರಾಭವಗೊಂಡರು.
ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸತೀಶ್ ಕುಮಾರ್ ಕರುಣಕರನ್ ಮತ್ತು ಆದ್ಯಾ ವರಿಯಾತ್ ಅವರು ಮೊದಲ ಸುತ್ತಿನಲ್ಲಿ 10–21–, 18–21ರಿಂದ ಇಂಡೊನೇಷ್ಯಾದ ರೆಹಾನ್ ನೌಫಲ್ ಕುಶಾರ್‌ಜಾಂತೊ ಮತ್ತು ಲೀಸಾ ಆಯು ಕುಸುಮಾವತಿ ಜೋಡಿಯ ಎದುರು ಮಣಿದರು.
ಈಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿಲ್ಲ. ವಿಶ್ರಾಂತಿ ಪಡೆದಿದ್ದಾರೆ.