ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games 2023: ಆರ್ಚರಿಯಲ್ಲಿ ಓಜಸ್‌, ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

Published 7 ಅಕ್ಟೋಬರ್ 2023, 13:43 IST
Last Updated 7 ಅಕ್ಟೋಬರ್ 2023, 13:43 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತದ ಆರ್ಚರಿ ಸ್ಪರ್ಧಿಗಳಾದ ಓಜಸ್‌ ದೇವತಾಳೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರು ‘ಹ್ಯಾಟ್ರಿಕ್‌’ ಚಿನ್ನದ ಪದಕ ಗೆದ್ದು ಏಷ್ಯನ್‌ ಕ್ರೀಡಾಕೂಟವನ್ನು ಸ್ಮರಣೀಯ‌ವಾಗಿಸಿಕೊಂಡರು.

ಕಾಂಪೌಂಡ್‌ ಆರ್ಚರಿಯಲ್ಲಿ ದಕ್ಷಿಣ ಕೊರಿಯಾದ ಪ್ರಾಬಲ್ಯವನ್ನು ಕೊನೆಗೊಳಿಸಲು ಭಾರತದ ಬಿಲ್ಲುಗಾರರು ಯಶಸ್ವಿಯಾದರು. ಕಾಂಪೌಂಡ್‌ ಮತ್ತು ರಿಕರ್ವ್‌ ವಿಭಾಗದಲ್ಲಿ ಭಾರತ ಒಟ್ಟು ಒಂಬತ್ತು ಪದಕಗಳನ್ನು ಗೆದ್ದುಕೊಂಡಿತು. 2018ರ ಜಕಾರ್ತಾ ಕೂಟದ ಆರ್ಚರಿಯಲ್ಲಿ ಎರಡು ಬೆಳ್ಳಿ ಪದಕ ಮಾತ್ರ ಜಯಿಸಿತ್ತು.

ಕಾಂಪೌಂಡ್‌ ವಿಭಾಗದಲ್ಲಿ ಪಣಕ್ಕಿಟ್ಟಿದ್ದ ಎಲ್ಲ ಐದೂ ಚಿನ್ನದ ಪದಕಗಳನ್ನು ಭಾರತದ ಬಿಲ್ಲುಗಾರರು ಬಾಚಿಕೊಂಡರು.

ಶನಿವಾರ ನಡೆದ ಮಹಿಳೆಯರ ಕಾಂಪೌಂಡ್‌ ವಿಭಾಗದ ಫೈನಲ್‌ನಲ್ಲಿ ಜ್ಯೋತಿ, 149–145 ರಿಂದ ಕೊರಿಯಾದ ಸೊ ಚೆವೊನ್‌ ಅವರನ್ನು ಮಣಿಸಿ ಬಂಗಾರದ ಪದಕಗಳ ಹ್ಯಾಟ್ರಿಕ್‌ ಪೂರೈಸಿದರು. ಇದಕ್ಕೂ ಮೊದಲು ಅವರು ಮಿಶ್ರ ತಂಡ ವಿಭಾಗ ಮತ್ತು ಮಹಿಳೆಯರ ತಂಡ ವಿಭಾಗದ ಚಿನ್ನ ಗೆದ್ದಿದ್ದರು.

ಮೊದಲ ಸುತ್ತಿನ ಕೊನೆಯಲ್ಲಿ ಒಂದು ಪಾಯಿಂಟ್ಸ್‌ ಕಳೆದುಕೊಂಡ ಜ್ಯೋತಿ 29–30 ರಿಂದ ಹಿನ್ನಡೆ ಅನುಭವಿಸಿದ್ದರು. ಆ ಬಳಿಕ ನಿಖರ ಪ್ರದರ್ಶನ ನೀಡಿ ನಾಲ್ಕು ಪಾಯಿಂಟ್ಸ್‌ಗಳ ಅಂತರದಿಂದ ಪಂದ್ಯ ತಮ್ಮದಾಗಿಸಿಕೊಂಡರು.

‘ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಈ ಸಂತಸದ ಅಲೆಯಿಂದ ಹೊರಬರಲು ಅಲ್ಪ ಸಮಯ ಬೇಕು’ ಎಂದು ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ಜ್ಯೋತಿ ಪ್ರತಿಕ್ರಿಯಿಸಿದರು.

ಇದೇ ವಿಭಾಗದ ಕಂಚಿನ ಪದಕ ಅದಿತಿ ಸ್ವಾಮಿ ಕೊರಳಿಗೇರಿಸಿಕೊಂಡರು. 17 ವರ್ಷದ ಅವರು ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ 146–140 ರಿಂದ ಇಂಡೊನೇಷ್ಯಾದ ರತೀಹ್ ಝಿಲಿಝತಿ ಫದ್ಲಿ ಅವರನ್ನು ಮಣಿಸಿದರು. ಎರಡು ತಿಂಗಳ ಹಿಂದೆ ಬರ್ಲಿನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅದಿತಿ ಚಿನ್ನ ಗೆದ್ದಿದ್ದರು.

ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ನಡೆದ ’ಆಲ್‌ ಇಂಡಿಯನ್‌ ಫೈನಲ್‌’ನಲ್ಲಿ ಓಜಸ್‌ ಅವರ ಕೈಮೇಲಾಯಿತು. ನಿಖರ ಗುರಿ ಸಾಧಿಸಿದ ಅವರು 149–147 ರಿಂದ ಅಭಿಷೇಕ್‌ ವರ್ಮಾ ವಿರುದ್ಧ ಗೆದ್ದರು. ಬರ್ಲಿನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ಅನ್ನು ಗೆದ್ದುಕೊಂಡಿದ್ದ 21 ವರ್ಷದ ಓಜಸ್‌ ಕೇವಲ ಒಂದು ಪಾಯಿಂಟ್ಸ್‌ ಮಾತ್ರ ಕಳೆದುಕೊಂಡರು. ಓಜಸ್‌ ಅವರು ಮಿಶ್ರ ಡಬಲ್ಸ್‌ ಮತ್ತು ಪುರುಷರ ತಂಡ ವಿಭಾಗದಲ್ಲೂ ಚಿನ್ನ ಜಯಿಸಿದ್ದರು.

‘ಇದು ನನ್ನ ಮೊದಲ ಏಷ್ಯನ್‌ ಗೇಮ್ಸ್‌ ಆಗಿದ್ದು, ಕಾಂಪೌಂಡ್‌ ವಿಭಾಗದ ಎಲ್ಲ ಮೂರೂ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದೇನೆ. ಇದಕ್ಕಿಂತ ಹೆಚ್ಚಿನದ್ದು ಇನ್ನೇನು ಬೇಕು? ಕನಸಿನ ಲೋಕದಲ್ಲಿರುವಂತೆ ಭಾಸವಾಗುತ್ತಿದೆ’ ಎಂದು ದೇವತಾಳೆ ಹೇಳಿದರು.

ಜ್ಯೋತಿ ಸುರೇಖಾ ವೆನ್ನಂ –ಎಎಫ್‌ಪಿ ಚಿತ್ರ
ಜ್ಯೋತಿ ಸುರೇಖಾ ವೆನ್ನಂ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT