ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games Archery: ರಿಕರ್ವ್ ವಿಭಾಗದಲ್ಲಿ ಪದಕ ಗೆದ್ದ ಭಾರತ ಪುರುಷ,ಮಹಿಳಾ ತಂಡ

Published 6 ಅಕ್ಟೋಬರ್ 2023, 10:10 IST
Last Updated 6 ಅಕ್ಟೋಬರ್ 2023, 10:10 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತ ಪುರುಷರ ಮತ್ತು ಮಹಿಳಾ ತಂಡಗಳು, ಏಷ್ಯನ್ ಕ್ರೀಡಾಕೂಟದ ಬಿಲ್ಗಾರಿಕೆ (ಆರ್ಚರಿ) ಸ್ಪರ್ಧೆಯ ರಿಕರ್ವ್ ವಿಭಾಗದಲ್ಲಿ ಶುಕ್ರವಾರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡವು.

2010ರ (ಗುವಾಂಗ್‌ಝೌ) ಕ್ರೀಡೆಗಳ ನಂತರ ಇದೇ ಮೊದಲ ಬಾರಿ ಭಾರತ ಈ ಸ್ಪರ್ಧೆಯಲ್ಲಿ ಪದಕ ಗೆದ್ದುಕೊಂಡಿದೆ.

ಐದನೇ ಶ್ರೇಯಾಂಕದ ಮಹಿಳಾ ತಂಡ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ 6–2 ರಿಂದ (56–52, 55–56, 57–50, 51–48) ವಿಯೆಟ್ನಾಂ ತಂಡವನ್ನು ಸೋಲಿಸಿದರು. ಅಂಕಿತಾ ಭಕ್ತ್, ಸಿಮ್ರಣಜೀತ್ ಕೌರ್ ಮತ್ತು ಭಜನ್ ಕೌರ್ ಅವರು ತಂಡದಲ್ಲಿದ್ದರು.

18 ವರ್ಷದ ಭಜನ್ ಭುಜದ ನೋವಿನಿಂದ ಬಳಲಿದ್ದರೂ ಸ್ಪರ್ಧಿಸಿದರು.

ಇದರ ಬೆನ್ನಿಗೇ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಅತನು ದಾಸ್‌, ತುಷಾರ್‌ ಶೆಲ್ಕೆ ಮತ್ತು ಧೀರಜ್ ಬೊಮ್ಮದೇವರ ಅವರನ್ನು ಒಳಗೊಂಡ ತಂಡ ಬೆಳ್ಳಿಯ ಪದಕ ಪಡೆಯಿತು.

ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿದ್ದ ಭಾರತ, ಚಿನ್ನದ ಪದಕಕ್ಕೆ ನಡೆದ ಪೈಪೋಟಿಯಲ್ಲಿ ಪ್ರಬಲ ದಕ್ಷಿಣ ಕೊರಿಯಾ ಎದುರು ಹೆಚ್ಚೇನೂ ಮಾಡಲಾಗಲಿಲ್ಲ. ಲೀ ವೂಸಿಯೊಕ್, ಒಹ್ ಜಿನ್‌ಹೈಕ್ ತ್ತು ಕಿಮ್‌ ಜೆ ಡಿಯೊಕ್ ಅವರನ್ನೊಳಗೊಂಡ ಕೊರಿಯಾ ತಂಡ 5–1 ರಿಂದ (60–55, 57–57, 56–55) ರಲ್ಲಿ ಸೋಲನುಭವಿಸಿತು.

ಪುರುಷರ ರೀಕರ್ವ್‌ ವಿಭಾಗದಲ್ಲಿ ಭಾರತ 2010ರಲ್ಲಿ ಕೊನೆಯ ಬಾರಿ ಪದಕ (ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ,  ಪುರುಷ, ಮಹಿಳಾ ತಂಡ ವಿಭಾಗದಲ್ಲಿ ಕಂಚು) ಗೆದ್ದುಕೊಂಡಿತ್ತು. 13 ವರ್ಷಗಳ ಬಿಲ್ಗಾರರ ಗುರಿಗೆ ಪದಕ ಒಲಿದಿದೆ.

ಭಾರತಕ್ಕೆ ಇದು ಆರ್ಚರಿಯಲ್ಲಿ ಒಟ್ಟಾರೆ ದಾಖಲೆಯ ಎಂಟನೇ ಪದಕ. ಈಗಾಗಲೇ ಒಲಿಂಪಿಕ್‌ಯೇತರ ಸ್ಪರ್ಧೆಯಾದ ಕಾಂಪೌಂಡ್‌ ತಂಡ ಪುರುಷರ ತಂಡ, ಮಹಿಳೆಯರ ತಂಡ ಮತ್ತು ಮಿಶ್ರ ವಿಭಾಗದಲ್ಲಿ ಮೂರು ಚಿನ್ನ ಗೆದ್ದುಕೊಂಡಿದೆ. ವೈಯಕ್ತಿಕ ಸ್ಪರ್ಧೆಯಲ್ಲಿ ಈಗಾಗಲೇ ಭಾರತದ ಅಭಿಷೇಕ್ ವರ್ಮಾ ಮತ್ತು ಓಜಸ್ ದೇವತಾಳೆ ಅವರು ಚಿನ್ನ–ಬೆಳ್ಳಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಜ್ಯೋತಿ ಸುರೇಖಾ ವೆನ್ನಂ ಅವರು ಮಹಿಳೆಯರ ಕಾಂಪಾಂಡ್‌ ವೈಯಕ್ತಿಕ ವಿಭಾಗದ ಫೈನಲ್‌ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT