ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಆಕ್ಸೆಲ್ಸನ್‌ಗೆ ಮಣಿದ ಲಕ್ಷ್ಯ: ಇಂದು ಕಂಚಿನ ಪದಕಕ್ಕೆ ಹಣಾಹಣಿ

Published 4 ಆಗಸ್ಟ್ 2024, 23:30 IST
Last Updated 4 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಚಿನ್ನ ಗೆಲ್ಲುವ ಭಾರತದ ಕನಸು ಈ ಬಾರಿ ಈಡೇರಲಿಲ್ಲ. ಲಕ್ಷ್ಯ ಸೇನ್ ಅವರು ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ವಿಕ್ಟರ್‌ ಆಕ್ಸೆಲ್ಸನ್ ಅವರಿಗೆ ಭಾನುವಾರ ನೇರ ಗೇಮ್‌ಗಳಲ್ಲಿ ಸೋತರು.

ಉತ್ತರಾಖಂಡದ ಅಲ್ಮೋರಾದ ಆಟಗಾರ ಮೊದಲ ಗೇಮ್‌ನಲ್ಲಿ 20–17ರಲ್ಲಿ ಮೂರು ಪಾಯಿಂಟ್‌ಗಳ ನಿರ್ಣಾಯಕ ಮುನ್ನಡೆ ಮತ್ತು ಎರಡನೇ ಗೇಮ್‌ನಲ್ಲಿ 7–0 ಮುನ್ನಡೆ ಬಿಟ್ಟುಕೊಟ್ಟು 20–22, 14–21 ರಲ್ಲಿ ಡೆನ್ಮಾರ್ಕ್ ಆಟಗಾರನಿಗೆ ಶರಣಾದರು. ಎರಡು ಬಾರಿಯ ವಿಶ್ವ ಚಾಂಪಿಯನ್ ಆಕ್ಸೆಲ್ಸನ್‌ 54 ನಿಮಿಷಗಳಲ್ಲಿ ಪಂದ್ಯ ಗೆದ್ದರು.

ಸೇನ್ ಅವರಿಗೆ ಕಂಚಿನ ಪದಕ ಗೆಲ್ಲಲು ಅವಕಾಶವಿದ್ದು, ಅದಕ್ಕಾಗಿ ಸೋಮವಾರ ಸಂಜೆ ನಡೆಯುವ ಪ್ಲೇ ಆಫ್‌ ಪಂದ್ಯದಲ್ಲಿ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಎದುರಿಸಲಿದ್ದಾರೆ. ಭಾರತದ ಪುರುಷರ ಸಿಂಗಲ್ಸ್‌ನಲ್ಲಿ ಇದುವರೆಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿಲ್ಲ. ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು ಒಮ್ಮೆ ಬೆಳ್ಳಿ (2016), ಒಮ್ಮೆ ಕಂಚಿನ ಪದಕ (2020) ಹಾಗೂ ಸೈನಾ ನೆಹ್ವಾಲ್‌ ಒಮ್ಮೆ (2012) ಕಂಚಿನ ಪದಕ ವಿಜೇತರಾಗಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಸೇನ್‌ ಇದುವರೆಗಿನ ಒಂಬತ್ತು ಮುಖಾಮುಖಿಗಳಲ್ಲಿ ಎಂಟು ಬಾರಿ ಆಕ್ಸೆಲ್ಸನ್‌ಗೆ ಸೋತಿದ್ದಾರೆ. 2022ರ ಜರ್ಮನ್ ಓಪನ್ ಫೈನಲ್‌ನಲ್ಲಿ ಮಾತ್ರ ಲಕ್ಷ್ಯ ಗೆದ್ದಿದ್ದರು.

‘ಮೊದಲ ಗೇಮನ್ನು 20–17ರಲ್ಲಿ ಮುಂದಿದ್ದು ಸೋತಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ‘ಪಂದ್ಯ ಮುಂದುವರಿದಂತೆ ಅವರು ಆಕ್ರಮಣಕಾರಿಯಾದರು. ನಾನು ಏನೂ ಮಾಡದಾದೆ. ಬರೇ ರಕ್ಷಣೆಯನ್ನಷ್ಟೇ ಮಾಡಬೇಕಾಯಿತು. ನಾನೂ ಅವಕಾಶಕ್ಕೆ ಹೋಗಿ ಆಕ್ರಮಣಕಾರಿಯಾಗಬೇಕಿತ್ತು’ ಎಂದರು.

ಸತತ ಎರಡು ಬಾರಿ ಒಲಿಂಪಿಕ್ಸ್‌ ಚಿನ್ನ ಗೆದ್ದಿರುವ ಚೀನಾದ ದಂತಕತೆ ಲಿನ್‌ ದಾನ್‌ ಅವರ ಸಾಧನೆ ಸರಿಗಟ್ಟುವ ಹಾದಿಯಲ್ಲಿ ಆಕ್ಸೆಲ್ಸನ್‌ ದಿಟ್ಟಹೆಜ್ಜೆಯಿಟ್ಟಿದ್ದಾರೆ.

ಈ ಹಿಂದಿನ ಎಲ್ಲ ಸೋಲುಗಳಿಗಿಂತ ಈ ಬಾರಿಯ ಸೋಲು ಸೆನ್‌ ಅವರನ್ನು ಹೆಚ್ಚು ಕಾಡಲಿದೆ. ಮೊದಲ ಸೆಟ್‌ ಗೆದ್ದು, ಎದುರಾಳಿಯ ಮೇಲೆ ಒತ್ತಡ ಹೇರುವ ಅವಕಾಶವನ್ನು ಅವರು ಕಳೆದುಕೊಂಡ ಮೇಲೆ ಒತ್ತಡಕ್ಕೆ ಒಳಗಾದರು. ಇದರ ಲಾಭವನ್ನು ಆಕ್ಸೆಲ್ಸನ್‌ ಪಡೆದರು. ಸರ್ವ್‌ ಮಾಡುವಾಗ ಸ್ವಲ್ಪ ವಿಳಂಬ ಮಾಡುವ ಅವರ ತಂತ್ರವೂ ಸೆನ್‌ ಅವರನ್ನು ಕೆಲಮಟ್ಟಿಗೆ ವಿಚಲಿತಗೊಳಿಸಿತು.

‘ನನ್ನ ಪೋಷಕರು, ಸೋದರ (ಚಿರಾಗ್ ಸೇನ್‌) ಅವರು ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದು ಬೆಂಬಲಿಸಿದರು.  ಪ್ರೇಕ್ಷಕರಿಂದಲೂ ಒಳ್ಳೆಯ ಬೆಂಬಲ ದೊರೆಯಿತು. ಕಂಚಿನ ಪದಕದ ಪಂದ್ಯಕ್ಕೂ ಜನರು ಬಂದು ಬೆಂಬಲಿಸುವರೆಂಬ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT