ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Namma Kambala: ಬೆಂಗಳೂರು ಕಂಬಳಕ್ಕೆ ಹರಿದಬಂದ ಜನಸಾಗರ

Published 26 ನವೆಂಬರ್ 2023, 14:20 IST
Last Updated 26 ನವೆಂಬರ್ 2023, 14:20 IST
ಅಕ್ಷರ ಗಾತ್ರ

ಬೆಂಗಳೂರು: ಕರೆಯಲ್ಲಿ ಆಳೆತ್ತರಕ್ಕೆ ನೀರು ಚಿಮ್ಮಿಸಿಕೊಂಡು ವೇಗವಾಗಿ ಓಡುತ್ತಿರುವ ಕೋಣಗಳು, ಜನರಿಂದ ಶಿಳ್ಳೆ, ಚಪ್ಪಾಳೆ, ಮೊಳಗುತ್ತಿರುವ ಚೆಂಡೆ, ವಾದ್ಯ, ಕಹಳೆಗಳ ಸದ್ದು, ಕೋಣಗಳನ್ನು ಸಿಂಗರಿಸಿ ಓಟಕ್ಕೆ ತಯಾರಿ ಮಾಡುತ್ತಿರುವ ಮಾಲೀಕರು, ಸೋತು ನಿರಾಸೆಯಿಂದ ಮರಳುತ್ತಿರುವವರು, ಮೊದಲ ಬಾರಿಗೆ ಕೋಣಗಳ ಓಟವನ್ನು ನೋಡಲು ಆಸೆಗಣ್ಣಿನಿಂದ ಬರುತ್ತಿರುವ ಮಂದಿ.....

– ಇದು ನಗರದ ಅರಮನೆ ಮೈದಾನದಲ್ಲಿ ನಡೆದ ‘ಬೆಂಗಳೂರು ಕಂಬಳ ನಮ್ಮ ಕಂಬಳ’ದ ಎರಡನೇ ಹಾಗೂ ಅಂತಿಮ ದಿನವಾದ ಭಾನುವಾರ ಕಂಡು ಬಂದ ದೃಶ್ಯಾವಳಿ.

ಮೊದಲ ಬಾರಿ ಬೆಂಗಳೂರಿನಲ್ಲಿ ನಡೆದ ಕಂಬಳ ವೀಕ್ಷಿಸಲು ನಗರದ ವಿವಿಧ ದಿಕ್ಕುಗಳಿಂದ ಅರಮನೆ ಮೈದಾನಕ್ಕೆ ಜನಸ್ತೋಮವೇ ಹರಿದುಬಂತು.

ಜನಜಂಗುಳಿಯಲ್ಲಿ ಕಂಬಳ ಕಣ್ತುಂಬಿಕೊಳ್ಳಲಾಗದೆ ಸಪ್ಪೆ ಮೋರೆ ಹಾಕಿಕೊಂಡು ಮರಳುತ್ತಿರುವವರು, ಜನರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಸ್ವಯಂಸೇವಕರು, ಇವೆಲ್ಲವುಗಳ ನಡುವೆ ‘ಅಲೆ ಬುಡ್ತೆರಿಯೇ…’ (ಅಗೋ ಬಿಟ್ಟರು...) ಎಂದು ಮೈಕ್‌ನಲ್ಲಿ ಹೇಳುವಾಗ ಮುಗಿಲು ಮುಟ್ಟುವ ಹರ್ಷೋದ್ಗಾರ, ಲಾರಿ ಸಮೀಪವೇ ಹಾಕಿದ್ದ ಟೆಂಟ್‌ಗಳಲ್ಲಿ ವಿಶ್ರಮಿಸುತ್ತಿದ್ದ ಕೋಣಗಳ ಜೊತೆ ಫೊಟೊ ಹೊಡೆಸಿಕೊಳ್ಳುತ್ತಿದ್ದ ದೃಶ್ಯಗಳೂ ಸಾಮಾನ್ಯ ಎನಿಸಿದವು.

ರಜಾ ದಿನವಾಗಿದ್ದರಿಂದ ಭಾನುವಾರ ಬೆಳಿಗ್ಗೆಯಿಂದಲೇ ಜನ ಅರಮನೆ ಮೈದಾನಕ್ಕೆ ತಂಡತಂಡವಾಗಿ ಬರತೊಡಗಿದರು. ಪರಿಣಾಮ ಜಯಮಹಲ್ ರಸ್ತೆ, ಮೇಕ್ರಿ ಸರ್ಕಲ್, ಸಿ.ವಿ ರಾಮನ್ ರಸ್ತೆ, ಪ್ಯಾಲೇಸ್ ಗುಟ್ಟಹಳ್ಳಿ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು. ವಾಹನ ನಿಲುಗಡೆಗೆ ಇದ್ದ ಗೇಟ್ ನಂಬರ್ 1 ರಲ್ಲಿ ಕೂಡ ವಾಹನಗಳ ತುಂಬಿದ್ದವು. ಹಲವು ಮಂದಿ ದೂರದಲ್ಲೇ ವಾಹನ ನಿಲ್ಲಿಸಿ ನಡೆದುಕೊಂಡೇ ಕಂಬಳಕ್ಕೆ ಬರುತ್ತಿದ್ದ ದೃಶ್ಯ ಕಂಡುಬಂತು.

ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಕಂಬಳ ನಡೆದಿದ್ದರಿಂದ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.  ಕಾಂತಾರ ಚಿತ್ರದಲ್ಲಿ ಕಂಬಳ ನೋಡಿ ಪ್ರಭಾವಿತರಾದವರು, ಏನಿದು ಕಂಬಳ ಎಂದು ಕುತೂಹಲದಿಂದ ನೋಡಲು ಬಂದವರ ಸಂಖ್ಯೆಯೂ ಹೇರಳವಾಗಿತ್ತು. ಎರಡು ದೊಡ್ಡ ಪರದೆಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ನೋಡುತ್ತಿದ್ದವರು ಕಡಿಮೆ.

ಕಂಬಳ ಕರೆಯ ಸುತ್ತಮುತ್ತ ಅಪಾರ ಜನಸ್ತೋಮ ಇದ್ದಿದ್ದರಿಂದ, ಹಲವು ಮಂದಿ ಸ್ಪರ್ಧೆ ನೋಡಲಾಗದೆ ನಿರಾಶೆಯಿಂದ ಮರಳಿದರು. ಕೆಲವರು ಹರಸಾಹಸ ಪಟ್ಟು ಕಂಬಳವನ್ನು ಕಣ್ತುಂಬಿಕೊಂಡರು. ಪಾಸ್‌ ವ್ಯವಸ್ಥೆ ಅಸಮರ್ಪಕವಾಗಿದ್ದರಿಂದ ಸಂಘಟಕರು ಹಾಗೂ ಪ್ರೇಕ್ಷಕರ ಮಧ್ಯೆ ಮಾತಿನ ಚಕಮಕಿ ಕಂಡುಬಂತು.

ಕೋಣಗಳ ಸಂಚಾರಕ್ಕೆಂದು ನಿರ್ಮಿಸಲಾಗಿದ್ದ ಪಥದಲ್ಲಿ ಜನರು ಸೇರಿದ್ದರಿಂದ, ಕರೆಗೆ ಕೋಣಗಳನ್ನು ಕರೆತರುವುದು ತ್ರಾಸವಾಯಿತು.

‘ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆದಿದ್ದರಿಂದ ಉತ್ಸಾಹದಿಂದ ಭಾಗವಹಿಸಿದ್ದೇವೆ. ನಮಗೆ ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಕಂಬಳ ನಡೆಯಬೇಕು ಎನ್ನುವುದು ನಮ್ಮ ಬಯಕೆ’ ಎಂದು ಸುರಬಿ ಗ್ರೂಪ್ ತುಳುನಾಡು ಕೋಣದ ಮಾಲೀಕ ಅಜಯ್ ಪೂಜಾರಿ ಹೇಳಿದರು.

ಕಂಬಳ ವೀಕ್ಷಣೆಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಬೇಕಿತ್ತು, ಮಹಿಳೆಯರಿಗೆ ಪ್ರತ್ಯೇಕ ವ್ಯಸ್ಥೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು. ಜನಜಂಗುಳಿ ವಿಪರೀತವಾಗಿ ನೆಟ್‌ವರ್ಕ್ ಸಮಸ್ಯೆಯಿಂದ ಜನ ಪರದಾಡಿದರು.

ಕರಾವಳಿಯ ಹುಲಿಕುಣಿತ, ಯಕ್ಷಗಾನ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಕೂಡ ಗಮನ ಸೆಳೆದವು. ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಜನ ಆಸಕ್ತಿಯಿಂದ ವೀಕ್ಷಿಸಿದರು. ಕಂಬಳದ ಪ್ರತಿಕೃತಿ, ಕೋಟಿ -ಚನ್ನಯ ಹಾಗೂ ಭಗವಾನ್ ಬಾಹುಬಲಿ ಮೂರ್ತಿ, ವೀರಗಾಸೆಯ ಪ್ರತಿಮೆಯ ಮುಂದೆ ನಿಂತು ಜನ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಆಹಾರ ಮೇಳ

ಆಹಾರ ಮೇಳದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಖಾದ್ಯಗಳನ್ನು ಜನ ಸವಿದರು. ಕೋರಿ ರೊಟ್ಟಿ, ನೀರು ದೋಸೆ, ಗೋಳಿಬಜೆ, ಬನ್ಸ್‌, ಶ್ಯಾವಿಗೆ ಮುಂತಾದ ಕರಾವಳಿ ಭಾಗದ ತಿನಿಸುಗಳು ಹಾಗೂ ರಾಜ್ಯದ ವಿವಿಧ ಭಾಗಗಳ ಆಹಾರಗಳೂ ಲಭ್ಯವಿದ್ದವು. ಆದರೆ ಮಳಿಗೆಗಳಲ್ಲಿ ಆಹಾರದ ದರ ದುಬಾರಿಯಾಗಿತ್ತು.


ಊಟದ ವ್ಯವಸ್ಥೆ

ಕರಾವಳಿ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಕುಚಲಕ್ಕಿ ಅನ್ನ, ವೈಟ್ ರೈಸ್, ಕಡಲೆ ಹಾಗೂ ಬಟಾಣಿ ಸಾರು, ತಿಳಿಸಾರು, ಮೊಸರು ಹಾಗೂ ಚಿಕನ್ ಸಾರು ಇತ್ತು. ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಕೌಂಟರ್‌ಗಳಿದ್ದವು. ಕಂಬಳ ನೋಡಲು ಬಂದವರಿಗೆ, ಕೋಣಗಳೊಂದಿಗೆ ಬಂದವರಿಗೆ, ಪೊಲೀಸರಿಗೆ, ಪತ್ರಕರ್ತರಿಗೆ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿದ್ದರಿಂದ ಅಲ್ಲಿಯೂ ನೂಕುನುಗ್ಗಲು ಉಂಟಾಯಿತು. ಉದ್ದದ ಸಾಲಿನಲ್ಲಿ ನಿಂತು ಜನ ಹೈರಾಣಾದರು.

ನಾನು ಕಂಬಳ ನೋಡುತ್ತಿರುವುದು ಇದೇ ಮೊದಲ ಬಾರಿ. ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ನೋಡಿದ್ದೆ. ಕೆಲದಿನಗಳ ಹಿಂದಷ್ಟೇ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದೇನೆ. ಈಗ ಕಂಬಳ ನೋಡಿ ರೋಮಾಂಚಿತನಾಗಿದ್ದೇನೆ.
–ರಶೀದ್ ಅಹ್ಮದ್, ಚಕ್ಕಮಕ್ಕಿ (ಮೂಡಿಗೆರೆ)
ನಮ್ಮ ಊರಿನ ಸಂಸ್ಕೃತಿ ಇಲ್ಲಿ ಅನಾವರಣಗೊಂಡಿದೆ. ಇಷ್ಟು ಹತ್ತಿರದಿಂದ ಕಂಬಳ ನೋಡುತ್ತಿರುವುದು ಇದೇ ಮೊದಲ ಬಾರಿ. ಕಂಬಳದಲ್ಲಿ ಈ ಪ್ರಮಾಣದ ಜನ ನೋಡಿದ್ದಿಲ್ಲ. ಇಲ್ಲಿನ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಇಷ್ಟವಾಯಿತು.
–ಅಪರ್ಣಾ ಶೈಲೇಶ್, ಉಜಿರೆ
ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಕಂಬಳವನ್ನು ಸರಿಯಾಗಿ ನೋಡಲಾಗಲಿಲ್ಲ ಎನ್ನುವ ನಿರಾಸೆಯಿದೆ. ಕರಾವಳಿ ಭಾಗದ ನನ್ನ ಸ್ನೇಹಿತರು ಕಂಬಳ, ಯಕ್ಷಗಾನದ ಬಗ್ಗೆ ಹೇಳುತ್ತಿದ್ದರು. ಈಗ ಖುದ್ದು ನೋಡಿ ಸಂಸತಗೊಂಡಿದ್ದೇನೆ. ಕೋರಿ ರೊಟ್ಟಿ, ನೀರುದೋಸೆ ಸವಿದೆ.
–ಚೈತ್ರಾ ಬೆಂಗಳೂರು, ಐಟಿ ಉದ್ಯೋಗಿ
ನಮ್ಮ ಊರಿನ ಎಲ್ಲಾ ವಿಧದ ಅಹಾರ ಸವಿದಿದ್ದು ಖುಷಿಯಾಗಿದೆ. ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದಾರೆ.  ಸ್ನೇಹಿತರ ಪುನರ್‌ಮಿಲನವೂ ಆಯಿತು.
–ಸುಪ್ರೀತಾ ಶೆಟ್ಟಿ, ಕಾರ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT