ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್‌ವೇ ಬೆಂಗಳೂರು ಬೇಸಿಗೆ ಡರ್ಬಿ: ಸೂಪರ್‌ನ್ಯಾಚುರಲ್‌ಗೆ ರೋಚಕ ಗೆಲುವು

ರೇಸ್‌ಪ್ರಿಯರ ಮನತಣಿಸಿದ ‘ಬೆಟ್‌ವೇ ಬೆಂಗಳೂರು ಬೇಸಿಗೆ ಡರ್ಬಿ’
Last Updated 17 ಜುಲೈ 2022, 18:03 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಯ ಕೆಲವು ಮೀಟರ್‌ಗಳು ಇದ್ದಾಗ ಮಿಂಚಿನ ವೇಗದಲ್ಲಿ ಓಡಿದ ‘ಸೂಪರ್‌ ನ್ಯಾಚುರಲ್‌’, ಭಾನುವಾರ ಇಲ್ಲಿ ನಡೆದ ‘ಬೆಟ್‌ವೇ ಬೆಂಗಳೂರು ಬೇಸಿಗೆ ಡರ್ಬಿ’ಯಲ್ಲಿ ಅನಿರೀಕ್ಷಿತ ಗೆಲುವು ಪಡೆಯಿತು.

ಪಿ.ಶ್ರಾಫ್‌ ಅವರಿಂದ ತರಬೇತಿ ಪಡೆದಿರುವ, ಟ್ರೆವರ್‌ ಪಟೇಲ್‌ ಅವರು ಜಾಕಿಯಾಗಿದ್ದ ಈ ಕುದುರೆ 2,000 ಮೀ. ದೂರದ ಓಟವನ್ನು 2 ನಿಮಿಷ 9.96 ಸೆಕೆಂಡುಗಳಲ್ಲಿ ಕ್ರಮಿಸಿತು. ಗೆದ್ದ ಕುದುರೆ ₹ 3 ಲಕ್ಷ ಮೌಲ್ಯದ ಟ್ರೋಫಿಯ ಜತೆಗೆ ₹ 1.18 ಕೋಟಿ ಬಹುಮಾನ ಮೊತ್ತ ತನ್ನದಾಗಿಸಿಕೊಂಡಿತು.

ಪಿ.ಶ್ರಾಫ್‌ ಅವರಿಂದಲೇ ತರಬೇತುಗೊಂಡಿರುವ ಕಿಂಗ್ಸ್‌ ರಾನ್ಸಮ್‌ ಎರಡನೇ ಸ್ಥಾನ ಪಡೆದರೆ, ಮೊಜಿಟೊ ಮೂರನೇ ಸ್ಥಾನ ಗಳಿಸಿತು. ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಕಿಕ್ಕಿರಿದ್ದು ನೆರೆದಿದ್ದ ರೇಸ್‌ ಪ್ರಿಯರಿಗೆ ಡರ್ಬಿ ಸಾಕಷ್ಟು ರಸದೌತಣ ಉಣಬಡಿಸಿತು.

ಡರ್ಬಿಯ ಹಿಂದಿನ ದಿನದವರೆಗೂ ‘ಫಿಲಾಸಫಿ’ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿತ್ತು. ಆದರೆ ಬೆಟ್ಟಿಂಗ್‌ ಪ್ರಾರಂಭವಾದಾಗ ಹಲವಾರು ಬದಲಾವಣೆಗಳಾಗಿ ‘ರೇಸ್‌’ ಮುಕ್ತವಾಗಿ ಕಂಡಿತು. ಯಾವುದೇ ಕುದುರೆಯೂ ಗೆಲ್ಲಬಹುದು ಎಂಬ ನಿರೀಕ್ಷೆ ಮೂಡಿಸಿತು.

‘ಒನ್ಸ್‌ ಯು ಗೋ ಬ್ಲ್ಯಾಕ್‌’ ಕುದುರೆ, ರೇಸ್‌ ಪ್ರಾರಂಭಕ್ಕೂ ಮುನ್ನ ಗೇಟ್‌ ಬಳಿ ಗಾಯಗೊಂಡಿತು. ಇದರಿಂದ ಸ್ಪರ್ಧೆಯಿಂದ ಹಿಂದೆ ಸರಿಯಿತು. ಕಣದಲ್ಲಿ 12 ಕುದುರೆಗಳು ಉಳಿದುಕೊಂಡವು.

ರೇಸ್‌ನ ಆರಂಭದಿಂದ ಕೊನೆಯ ತಿರುವಿನವರೆಗೂ ಪ್ರಾಗ್‌ (ಜಾಕಿ–ಆಶಾದ್‌ ಅಸ್ಬರ್‌) ಮುನ್ನಡೆಯಲ್ಲಿತ್ತು. ಸಿರೇನಿಯಸ್‌ (ಜಾಕಿ– ಪಿ.ಪಿ.ದೆಬೆ) ಮತ್ತು ಸಕ್ಸಸ್‌ (ಜಾಕಿ–ಸಿ.ಎಸ್‌.ಜೋಧ) ಬಳಿಕದ ಸ್ಥಾನದಲ್ಲಿದ್ದವು. ಸೂಪರ್ ನ್ಯಾಚುರಲ್‌ ಸೇರಿದಂತೆ ಇತರ ಕುದುರೆಗಳು ಅಲ್ಪ ಹಿಂದ್ದಿದ್ದವು.

ಕೊನೆಯ 400 ಮೀ. ಗಳು ಇದ್ದಾಗ ರೇಸ್‌ನ ಚಿತ್ರಣ ಬದಲಾಯಿತು. ಎಲ್ಲ ಜಾಕಿಗಳು ಅಂತಿಮ 400 ಮೀ. ನಲ್ಲಿ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿದರು. ವೇಗ ಹೆಚ್ಚಿಸುವಂತೆ ಕುದುರೆಗಳಿಗೆ ಸೂಚನೆ ನೀಡಿದರು.

ಗುರಿ ತಲುಪಲು ಕೊನೆಯ 200 ಮೀ. ಇರುವಾಗಲೂ ಪ್ರಾಗ್‌ ಮುನ್ನಡೆ ಕಾಪಾಡಿಕೊಂಡಿತ್ತು. ಆದರೆ ಭಾರತದ ಅತ್ಯಂತ ಶ್ರೇಷ್ಠ ಜಾಕಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಟ್ರೆವರ್‌, ಅತಿಯಾದ ಒತ್ತಡದ ನಡುವೆಯೂ ತಮ್ಮ ಕುದುರೆ ‘ಸೂಪರ್‌ನ್ಯಾಚುರಲ್‌’ನ ವೇಗವನ್ನು ಹೆಚ್ಚಿಸಲು ಯಶಸ್ವಿಯಾದರು.

ಕೊನೆಯ 100 ಮೀಟರ್ಸ್ ಇರುವಂತೆಯೇ ಶರವೇಗದಲ್ಲಿ ಓಡಿ ಎರಡೂ ಕಾಲು ಲೆಂಗ್ತ್‌ ಅಂತರದಿಂದ ಗೆಲುವು ಪಡೆಯಿತು. ಕಿಂಗ್ಸ್‌ ರಾನ್ಸಮ್‌ ಕೂಡಾ ಹಿಂದಿನಿಂದ ವೇಗವಾಗಿ ಮುನ್ನುಗ್ಗಿ ಎರಡನೇ ಸ್ಥಾನ ಗಳಿಸಿತು. ಮೊಜಿಟೊ ಕೂಡಾ ವೇಗ ಹೆಚ್ಚಿಸಿ, ಪ್ರಾಗ್‌ಅನ್ನು ಹಿಂದಿಕ್ಕಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.

‘ಕುದುರೆಯ ವರ್ತನೆ ಮತ್ತು ಸಾಮರ್ಥ್ಯ ನಾವು ಚೆನ್ನಾಗಿ ಅರ್ಥಮಾಡಿ ಕೊಂಡಿದ್ದೇವೆ. ನಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ಇಳಿಸಿದೆವು. ಕುದುರೆ ಕೂಡಾ ಸ್ಪಂದಿಸಿತು’ ಎಂದರು ಶ್ರಾಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT