ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2028ರ ಒಲಿಂಪಿಕ್ಸ್‌: ಬಾಕ್ಸಿಂಗ್‌ಗೆ ’ಗೇಟ್‌ಪಾಸ್‌’ ಅಪಾಯ

ಲಾಸ್‌ ಏಂಜೆಲ್ಸ್‌: ಮಾಡರ್ನ್ ಪೆಂಟಥ್ಲಾನ್‌, ವೇಟ್‌ಲಿಫ್ಟಿಂಗ್‌ ಸಂಸ್ಥೆಗಳಿಗೂ ಬಿಸಿ
Last Updated 10 ಡಿಸೆಂಬರ್ 2021, 8:31 IST
ಅಕ್ಷರ ಗಾತ್ರ

ಜಿನೇವಾ: ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌ ಮತ್ತು ಮಾಡರ್ನ್ ಪೆಂಟಥ್ಲಾನ್‌ ಸ್ಪರ್ಧೆಗಳು 2028ರ ಲಾಸ್‌ ಏಂಜಲ್ಸ್ ಕೂಟಕ್ಕೆ ಒಲಿಂಪಿಕ್‌ ಕ್ರೀಡೆಗಳ ಸ್ಥಾನಮಾನ ಉಳಿಸಿಕೊಳ್ಳಬೇಕಾದರೆ, ಸಂಬಂಧಿಸಿದ ಕ್ರೀಡಾ ಸಂಸ್ಥೆಗಳು ಅಗತ್ಯ ಬದಲಾವಣೆಗಳನ್ನು ತರಬೇಕು ಎಂದು 18 ತಿಂಗಳ ಗಡುವು ವಿಧಿಸಲಾಗಿದೆ.

ಈ ಕ್ರೀಡೆಗಳ ಆಡಳಿತ ನಿರ್ವಹಿಸುವ ಸಂಸ್ಥೆಗಳನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್‌ ಬಾಕ್‌ ಅವರು ‘ಸಮಸ್ಯೆಯ ಶಿಶುಗಳು’ ಎಂದು ಕರೆದಿದ್ದಾರೆ. ಭ್ರಷ್ಟಾಚಾರ ಮತ್ತು ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಹಗರಣಗಳಿಂದಾಗಿ ಈ ಕ್ರೀಡಾ ಸಂಸ್ಥೆಗಳ ವಿರುದ್ಧ ಅವರು ದೀರ್ಘ ಸಮಯದಿಂದ ಧ್ವನಿಯೆತ್ತುತ್ತಿದ್ದಾರೆ.

ಮಾಡರ್ನ್‌ ಪೆಂಟಥ್ಲಾನ್‌ನಿಂದ ಈಕ್ವೆಸ್ಟ್ರಿಯನ್‌ ಜಂಪಿಂಗ್‌ ತೆಗೆದುಹಾಕುವಂತೆ ಐಒಸಿ ಸ್ಪಷ್ಟಮಾತುಗಳಲ್ಲಿ ಹೇಳಿದೆ. ಆದರೆ ಇದರ ವಿರುದ್ಧ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೀರ್ಘ ಕಾಲದಿಂದ ಇದು ಒಲಿಂಪಿಕ್‌ ಕ್ರೀಡೆಯಾಗಿದೆ. ಟೋಕಿಯೊ ಒಲಿಂಪಿಕ್ಸ್‌ ವೇಳೆ ಅಶ್ವಾರೋಹಣ ಸ್ಪರ್ಧೆಗೆ ಕುದುರೆ ಸಹಕರಿಸಿಲ್ಲವೆಂದು ಜರ್ಮನಿಯ ತರಬೇತುಗಾರ್ತಿಯೊಬ್ಬರು ಹಿಂಸಾತ್ಮಕವಾಗಿ ಅದಕ್ಕೆ ಗುದ್ದು ಹೊಡೆದಿದ್ದು ವಿವಾದವಾಗಿತ್ತು. ಅವರ ಮೇಲೆ ಕ್ರಮವನ್ನೂ ಕೈಗೊಳ್ಳಲಾಗಿತ್ತು.

2028ರ ಒಲಿಂಪಿಕ್ಸ್‌ನಲ್ಲಿ 28 ಆಟಗಳ ಪಟ್ಟಿಯಿಂದ ಈ ಮೂರೂ ಸ್ಪರ್ಧೆಗಳನ್ನು ಕೈಬಿಡಲಾಗಿದೆ. ಪಟ್ಟಿಯಲ್ಲಿರುವ ಕ್ರೀಡೆಗಳಿಗೆ ಐಒಸಿ ಸದಸ್ಯರು ಫೆಬ್ರುವರಿಯಲ್ಲಿ ಸಮ್ಮತಿ ನೀಡಬೇಕಾಗಿದೆ.

ಅನುಮೋದನೆ ಹೊಂದಿರುವ ಕ್ರೀಡೆಗಳ ಪಟ್ಟಿಯಲ್ಲಿ ಸ್ಕೇಟ್‌ ಬೋರ್ಡಿಂಗ್‌, ಸರ್ಫಿಂಗ್‌ ಮತ್ತು ಕ್ರೀಡಾ ಚಾರಣ ಸೇರಿದೆ. ಈ ಮೂರೂ ಸ್ಪರ್ಧೆಗಳು ಈ ವರ್ಷದ ಜುಲೈ– ಆಗಸ್ಟ್‌ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಸೇರ್ಪಡೆಗೊಂಡಿದ್ದವು. ಯುವ ಪ್ರೇಕ್ಷಕರನ್ನು ಹೆಚ್ಚು ಒಳಗೊಳ್ಳುವ ದೃಷ್ಟಿಯಿಂದ ಈ ಕ್ರಮವನ್ನು ಐಒಸಿ ಕೈಗೊಂಡಿದೆ. 2024ರ ಒಲಿಂಪಿಕ್ಸ್‌ಗೆ ಬ್ರೇಕ್‌ ಡ್ಯಾನ್ಸ್‌ ಸೇರ್ಪಡೆಗೊಂಡಿದೆ.

ಫುಟ್‌ಬಾಲ್‌ ಆಟವು ಒಲಿಂಪಿಕ್ಸ್‌ನ 28ರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೂ, ಬಾಕ್‌ ಅದಕ್ಕೂ ‘ನೋಟಿಸ್‌’ ಕೊಟ್ಟಿದ್ದಾರೆ. ಈಗ ಫುಟ್‌ಬಾಲ್‌ನ ಆಡಳಿತ ಸಂಸ್ಥೆ ಫಿಫಾ, ವಿಶ್ವಕಪ್‌ಅನ್ನು ಪ್ರತಿ ನಾಲ್ಕು ವರ್ಷಗಳ ಬದಲು ಎರಡು ವರ್ಷಗಳಿಗೊಮ್ಮೆ ನಡೆಸುವ ಯೋಜನೆ ಹೊಂದಿದೆ. ಇದರಿಂದ ಒಲಿಂಪಿಕ್ಸ್‌ ವೇಳಾಪಟ್ಟಿ ಮತ್ತು ಫುಟ್‌ಬಾಲ್‌ ವಿಶ್ವಕಪ್ ಒಂದೇ ಸಮಯದಲ್ಲಿ ಬರುವ ಸಾಧ್ಯತೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT