ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಲ್‌ಸನ್‌ಗೆ ವಿಶ್ವ ರ‍್ಯಾಪಿಡ್‌ ಚೆಸ್‌ ಕಿರೀಟ

ಮಹಿಳಾ ವಿಭಾಗದಲ್ಲಿ ಕೋನೇರು ಹಂಪಿ ರನ್ನರ್‌ ಅಪ್‌
Published 29 ಡಿಸೆಂಬರ್ 2023, 18:05 IST
Last Updated 29 ಡಿಸೆಂಬರ್ 2023, 18:05 IST
ಅಕ್ಷರ ಗಾತ್ರ

ಸಮರ್‌ಖಂಡ್‌ (ಉಜ್ಬೇಕಿಸ್ತಾನ): ಕೊನೆಯ ಸುತ್ತಿನಲ್ಲಿ ಭಾರತದ ಪ್ರಜ್ಞಾನಂದ ಆರ್‌. ಅವರ ಜೊತೆ ‘ಡ್ರಾ’ ಮಾಡಿಕೊಂಡ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಐದನೇ  ಬಾರಿ ಚಾಂಪಿಯನ್ ಕಿರೀಟ ಧರಿಸಿದರು.

ಅವರು 13 ಸುತ್ತುಗಳಿಂದ 10 ಪಾಯಿಂಟ್ಸ್‌ ಸಂಗ್ರಹಿಸಿ ಸ್ಪಷ್ಟವಾಗಿ ಅಗ್ರಸ್ಥಾನ ಪಡೆದರು. ಸ್ಲೊವೇನಿಯಾದ ಗ್ರ್ಯಾಂಡ್‌ಮಾಸ್ಟರ್ ವ್ಲಾದಿಮಿರ್‌ ಫೆಡೊಸೀವ್‌ 9.5 ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನ ಪಡೆದರು. 33 ವರ್ಷದ ಕಾರ್ಲ್‌ಸನ್‌ 2014, 2015, 2019, 2022ರಲ್ಲೂ ಈ ಟೂರ್ನಿಯಲ್ಲಿ ವಿಜೇತರಾಗಿದ್ದರು.

10 ಮತ್ತು 11ನೇ ಸುತ್ತಿನಲ್ಲಿ ಬೆನ್ನುಬೆನ್ನಿಗೆ ಜಯಗಳಿಸಿದ ಭಾರತದ ವಿದಿತ್‌ ಗುಜರಾತಿ ಕೂಡ 12ನೇ ಸುತ್ತಿಗೆ ಮೊದಲು ಕಾರ್ಲ್‌ಸನ್‌ ಅವರಿಗಿಂತ ಅರ್ಧ ಪಾಯಿಂಟ್‌ ಹಿಂದೆಯಿದ್ದರು. ಆದರೆ ಫೆಡೊಸೀವ್ ಜೊತೆ ಒಂದು ಪಾನ್‌ ಮುಂದೆಯಿದ್ದು, ಹಿಡಿತ ಸಾಧಿಸಿದ್ದರೂ, ಪ್ರಮಾದ ಎಸಗಿ ಪಂದ್ಯ ಸೋತರು. ಅಂತಿಮವಾಗಿ ಅವರು 9 ಪಾಯಿಂಟ್‌ ಗಳಿಸಿ ಒಟ್ಟು 12 ಆಟಗಾರರೊದಿಗೆ ಮೂರನೇ ಸ್ಥಾನದಲ್ಲಿದ್ದರೂ, ಟೈಬ್ರೇಕ್ ಆಧಾರದಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿಯಬೇಕಾಯಿತು. ಪ್ರಜ್ಞಾನಂದ (9) ಎಂಟನೇ ಸ್ಥಾನ ಪಡೆದರು.

‘ಇದು ಹೆಮ್ಮೆಯ ಕ್ಷಣ. ಫೆಡೊಸೀವ್ ವಿರುದ್ಧ ಇಂದಿನ (ಗುರುವಾರದ) ಮೊದಲ ಪಂದ್ಯ (10ನೇ ಸುತ್ತು) ನಿರ್ಣಾಯಕವಾಗಿತ್ತು. ಅವರೊಬ್ಬರಿಗೇ ನನ್ನನ್ನಜು ಹಿಂದೆಹಾಕಲು ಅವಕಾಶವಿತ್ತು’ ಎಂದು ಕಾರ್ಲ್‌ಸನ್‌ ‘ಫಿಡೆ’ ಪ್ರತಿಕ್ರಿಯಿಸಿರುವುದನ್ನು ಫಿಡೆ ವೆಬ್‌ಸೈಟ್‌ ಉಲ್ಲೇಖಿಸಿದೆ.

ನಾರ್ವೆಯ ಆಟಗಾರ ಪ್ರಶಸ್ತಿ ಜೊತೆ 49.50 ಲಕ್ಷ ಬಹುಮಾನ ಪಡೆದರು. 150 ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು.

ಅನಸ್ತೇಸಿಯಾ ಚಾಂಪಿಯನ್‌:

ರಷ್ಯದ ಅನಸ್ತೇಸಿಯಾ ಬಡ್ನಾರುಕ್ ಅವರು ಮಹಿಳೆಯರ ವಿಭಾಗದ ವಿಶ್ವ ರ‍್ಯಾಪಿಡ್ ಚಾಂಪಿಯನ್‌ ಪಟ್ಟಕ್ಕೇರಿದರು. ಅವರು ಭಾರತದ ಕೋನೇರು ಹಂಪಿ ಜೊತೆ ಟೈಬ್ರೇಕ್‌ ಪಂದ್ಯವನ್ನು 2.5–1.5 ರಿಂದ ಗೆದ್ದುಕೊಂಡರು. 2019ರಲ್ಲಿ ಚಾಂಪಿಯನ್‌ ಆಗಿದ್ದ ಹಂಪಿ ಈ ಬಾರಿ ರನ್ನರ್‌ ಅಪ್‌ ಆದರು.

11 ಸುತ್ತುಗಳ ನಂತರ ಬಡ್ನಾರುಕ್, ಹಂಪಿ ಮತ್ತು ಲೀ ಟಿಂಗ್ಜಿ ತಲಾ ಎಂಟೂವರೆ ಪಾಯಿಂಟ್ಸ್‌ ಸಂಗ್ರಹಿಸಿದ್ದರು. ಟೈಬ್ರೇಕರ್‌ನಲ್ಲಿ ಟಿಂಗ್ಜಿ ಮೂರನೇ ಸ್ಥಾನಕ್ಕೆ ಸರಿದರು. ಆದರೆ ಟೈಬ್ರೇಕ್‌ ಒಂದೇ ಸಮ ಆಗಿದ್ದರಿಂದ ಬಡ್ನಾರುಕ್ ಮತ್ತು ಹಂಪಿ ಅಲ್ಪಾವಧಿಯ ಟೈಬ್ರೇಕ್‌ ಪಂದ್ಯಗಳಲ್ಲಿ ಆಡಬೇಕಾಯಿತು. ಚಾಂಪಿಯನ್‌ ಆದ ಅನಸ್ತೇಸಿಯಾ ಅವರು ₹33 ಲಕ್ಷ ಬಹುಮಾನ ಹಣ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT