ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿಯುವ ಮುನ್ನ ವಿನೇಶ್ ಫೋಗಟ್ ಅವರ ಮನವಿ ಕುರಿತಾದ ಆದೇಶವನ್ನು ಪ್ರಕಟಿಸುವುದಾಗಿ ಕ್ರೀಡಾ ಸಂಬಂಧಿತ ಪ್ರಕರಣಗಳ ವಿಚಾರಣಾ ನ್ಯಾಯಾಲಯ(ಸಿಎಎಸ್) ಹೇಳಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಹೀಗಾಗಿ, ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದ ಫೈನಲ್‌ನಲ್ಲಿ ಅನರ್ಹಗೊಂಡು ನಿರಾಸೆ ಅನುಭವಿಸಿರುವ ಭಾರತದ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಬೆಳ್ಳಿ ಪದಕವನ್ನಾದರೂ ಪಡೆಯುವ ಆಶಾಭಾವನೆ ಜೀವಂತವಾಗಿರಿಸಿದೆ.
ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯ ಕ್ವಾರ್ಟರ್, ಸೆಮಿಫೈನಲ್‌ನಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿ ಫೈನಲ್ ತಲುಪಿದ್ದ ವಿನೇಶಾ ಅವರಿಗೆ ನಿಗದಿಗಿಂತ 100 ಗ್ರಾಂ ಹೆಚ್ಚು ತೂಕವಿದ್ದಾರೆ ಎಂಬ ಕಾರಣಕ್ಕೆ ಫೈನಲ್‌ನಲ್ಲಿ ಆಡಲು ಅವಕಾಶ ಕೊಡದೆ ಅನರ್ಹಗೊಳಿಸಲಾಗಿತ್ತು. ಅದರಿಂದ ಅವರು ಫೈನಲ್‌ಗೇರುವ ಅವಕಾಶ ಕಳೆದುಕೊಂಡಿದ್ದಷ್ಟೇ ಅಲ್ಲ. ಪದಕವಿಲ್ಲದೆ ಬರಿಗೈಯಲ್ಲಿ ದೇಶಕ್ಕೆ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ, ನಿಯಮಗಳ ಪ್ರಕಾರ, ಅನರ್ಹಗೊಂಡ ಕ್ರೀಡಾಪಟುವಿಗೆ ಪದಕ ಪಡೆಯುವ ಅರ್ಹತೆ ಇರುವುದಿಲ್ಲ.
ಫೈನಲ್ ಪಂದ್ಯದಲ್ಲಿ ಆಡಲು ತಮಗೆ ಅವಕಾಶ ನೀಡಬೇಕೆಂಬ ವಿನೇಶ್ ಮನವಿಯನ್ನು ನಾವು ಪರಿಗಣಿಸುವುದಿಲ್ಲ ಎಂದು ಹೇಳಿರುವ ಸಿಎಎಸ್, ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಕೋರಿರುವ ಅವರ ಮನವಿಯನ್ನು ವಿಚಾರಣೆಗೆ ಪುರಸ್ಕರಿಸಲಾಗಿದೆ ಎಂದು ಹೇಳಿದೆ. ಸಿಎಎಸ್‌ನ ಈ ನಿರ್ಣಯವು ವಿನೇಶ್ ಅವರ ಪದಕದ ಆಸೆಯನ್ನು ಜೀವಂತವಾಗಿರಿಸಿದೆ.
ಇದೇ ಭಾನುವಾರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರ ಬೀಳಲಿದ್ದು, ಅಷ್ಟರೊಳಗೆ ವಿನೇಶ್ ಪೋಗಟ್ ಮನವಿ ಕುರಿತಾದ ಆದೇಶವನ್ನು ಸಿಎಎಸ್ ಪ್ರಕಟಿಸುವ ಸಾಧ್ಯತೆ ಇದೆ.
ಆಗಸ್ಟ್ 7 ರಂದೇ ಭಾರತೀಯ ಕುಸ್ತಿ ಪಟು ಮನವಿ ಸಲ್ಲಿಸಿದ್ದು, ವಿನೇಶ್ ಮತ್ತು ವಿಶ್ವ ಕುಸ್ತಿ ಒಕ್ಕೂಟಕ್ಕೆ ವಿಚಾರಣೆಗೆ ಸಮಯ ನೀಡಿ ಸಿಎಎಸ್ ಶುಕ್ರವಾರ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.