ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಹಾಕಿ ಆಟಗಾರ ವರುಣ್ ಕುಮಾರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published 6 ಫೆಬ್ರುವರಿ 2024, 13:04 IST
Last Updated 6 ಫೆಬ್ರುವರಿ 2024, 13:04 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿಯೊಬ್ಬರಿಗೆ ಅವರ ಬಾಲ್ಯದ ದಿನಗಳಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಭಾರತ ಸೀನಿಯರ್ ಹಾಕಿ ತಂಡದ ಆಟಗಾರ ವರುಣ್ ಕುಮಾರ್ (28) ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ತೆಲಂಗಾಣ ನಿವಾಸಿಯಾಗಿರುವ 22 ವರ್ಷದ ಯುವತಿ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾರೆ. ಅತ್ಯಾಚಾರ (ಐಪಿಸಿ 376), ವಂಚನೆ (420) ಆರೋಪ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ವರುಣ್‌ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಆರೋಪಿ ವರುಣ್ ಸದ್ಯ ಪಂಜಾಬ್‌ನಲ್ಲಿದ್ದಾರೆ. ಜ್ಞಾನಭಾರತಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಕೃತ್ಯ ನಡೆದಿದೆ. ಹೀಗಾಗಿ, ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲು ವಿಶೇಷ ತಂಡವೊಂದನ್ನು ಪಂಜಾಬ್‌ಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ಹಿಮಾಚಲ ಪ್ರದೇಶದ ವರುಣ್, 2017ರಲ್ಲಿ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದರು. ಟೋಕಿಯೊ ಒಲಿಂಪಿಕ್‌ನಲ್ಲಿ ಕಂಚು ಗೆದ್ದ ಹಾಗೂ 2022ರ ಬರ್ಮಿಂಗ್‌ಹ್ಯಾಮ್‌ನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡದಲ್ಲಿ ಆಡಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಕೂಡ.

ದೂರಿನ ವಿವರ: ‘ನಾನು 16ನೇ ವಯಸ್ಸಿನಲ್ಲಿ ವಾಲಿಬಾಲ್ ತರಬೇತಿಗೆಂದು ಸಾಯ್‌ ಕೇಂದ್ರಕ್ಕೆ (2016–17) ಸೇರಿದ್ದೆ. ವಸತಿ ನಿಲಯದಲ್ಲಿ ವಾಸವಿದ್ದೆ. ಅದೇ ಕೇಂದ್ರಕ್ಕೆ ಹಾಕಿ ತರಬೇತಿಗಾಗಿ ವರುಣ್‌ಕುಮಾರ್ ಸಹ 2018ರಲ್ಲಿ ಬಂದಿದ್ದ. ಇನ್‌ಸ್ಟಾಗ್ರಾಂ ಮೂಲಕ ನನಗೆ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಂಡಿದ್ದ. ನಾನು ಬಾಲಕಿ ಎಂಬುದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸಂದೇಶ ಕಳುಹಿಸಲಾರಂಭಿಸಿದ್ದ. ನಾನು ಅದಕ್ಕೆ ಪ್ರತಿಕ್ರಿಯಿಸದೇ ಸುಮ್ಮನಾಗಿದ್ದೆ’ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ.

‘ಪದೇ ಪದೇ ಸಂದೇಶ ಕಳುಹಿಸಲಾರಂಭಿಸಿದ್ದ ವರುಣ್, ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಇಲ್ಲದಿದ್ದರೆ ಸಾಯುವುದಾಗಿ ದುಂಬಾಲು ಬಿದ್ದಿದ್ದ. ಅದಕ್ಕೆ ನಾನು ಒಪ್ಪಿರಲಿಲ್ಲ. ಆತನ ಸ್ನೇಹಿತರು ನನ್ನ ಬಳಿ ಬಂದು ಪ್ರೀತಿಸುವಂತೆ ಹೇಳಿದ್ದರು. ವರುಣ್ ಸಹ ನಮ್ಮ ಮನೆಯಲ್ಲಿ ಒಪ್ಪಿಸಿ ಮದುವೆಯಾಗುವುದಾಗಿ ತಿಳಿಸಿದ್ದ. ಹೀಗಾಗಿ, ವರುಣ್‌ನನ್ನು ಪ್ರೀತಿಸಲಾರಂಭಿಸಿದ್ದೆ.’

‘2019ನೇ ಜುಲೈನಲ್ಲಿ ರಾತ್ರಿ ಊಟಕ್ಕೆಂದು ಜಯನಗರ 4ನೇ ಹಂತದ ಹೋಟೆಲ್‌ವೊಂದಕ್ಕೆ ನನ್ನನ್ನು ಕರೆದೊಯ್ದಿದ್ದ. ಊಟದ ನಂತರ, ಅಲ್ಲಿಯೇ ಕೊಠಡಿಯಲ್ಲಿ ನನ್ನನ್ನು ಉಳಿಸಿಕೊಂಡಿದ್ದ. ಅಲ್ಲಿಯೇ ನನ್ನ ಮೇಲೆ ಒತ್ತಾಯಪೂರ್ವಕವಾಗಿ ಅತ್ಯಾಚಾರ ಎಸಗಿದ್ದ. ಮದುವೆಯಾಗು ತ್ತಾನೆಂಬ ಕಾರಣಕ್ಕೆ ಯಾರಿಗೂ ವಿಷಯ ತಿಳಿಸದೇ ಸುಮ್ಮನಾಗಿದ್ದೆ. ಇದಾದ ನಂತರವೂ ವರುಣ್, ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ’ ಎಂದೂ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ವರ್ಷದ ಹಿಂದೆ ನನ್ನ ತಂದೆ ತೀರಿಕೊಂಡಾಗ ಮನೆಗೆ ಬಂದಿದ್ದ ವರುಣ್, ಸಾಂತ್ವನ ಹೇಳಿ ಹೋಗಿದ್ದ. ಆದರೆ, ಕೆಲ ತಿಂಗಳಿನಿಂದ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ. ಮದುವೆಯಾಗಲು ಒಪ್ಪಿರಲಿಲ್ಲ. ಠಾಣೆಗೆ ದೂರು ಕೊಡುವುದಾಗಿ ಹೇಳಿದಾಗ, ಚೆನ್ನಾಗಿ ಮಾತನಾಡುತ್ತಿದ್ದ. ಇದೀಗ ನನ್ನನ್ನು ದೂರ ಮಾಡುತ್ತಿದ್ದಾನೆ. ಕರೆಗಳನ್ನು ಸ್ವೀಕರಿಸುತ್ತಿಲ್ಲ. ನನ್ನ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಯುವತಿ ದೂರಿನಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT