ಹಾಂಗ್‌ಕಾಂಗ್: ಭಾರತದ ಚಿರಾಗ್ ಸೇನ್ ಮತ್ತು ಮಾನವ್ ಚೌಧರಿ ಅವರು ಮಂಗಳವಾರ ಹಾಂಗ್‌ಕಾಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನ ಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದರು. ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಮಹಿಳಾ ಡಬಲ್ಸ್ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಸೂಪರ್ 500 ಟೂರ್ನಿಯ ಡಬಲ್ಸ್‌ನಲ್ಲಿ ಜೋಳಿ ಮತ್ತು ಗಾಯತ್ರಿ 32ರ ಸುತ್ತಿನ ಪಂದ್ಯದಲ್ಲಿ 21–14, 21–13 ರಿಂದ ಉಕ್ರೇನ್‌ನ ಪೊಲಿನಾ ಬುಹ್ರೊವಾ– ಯೆವೆನಿಯಾ ಕಂಟೆಮಿರ್ ಜೋಡಿಯನ್ನು ಸೋಲಿಸಿದರು. ಋತುಪರ್ಣಾ– ಶ್ವೇತಪರ್ಣಾ ಪಂಡಾ ಸೋದರಿಯರ ಜೋಡಿ 11–21, 8–21 ರಲ್ಲಿ ಚೀನಾ ತೈಪಿಯ ಸಿಯಾ ಪೀ ಶಾನ್– ಹುಂಗ್ ಎನ್–ತ್ಸು ಅವರನ್ನು ಸೋಲಿಸಿದರು.
ಚಿರಾಗ್ ಸೇನ್ ಪುರುಷರ ಸಿಂಗಲ್ಸ್ ಕ್ವಾಲಿಫಿಕೇಷನ್ ಸುತ್ತಿನ ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಶೆಂಗ್ ಷಿಯಾವೊಡಾಂಗ್ ಅವರಿಗೆ 12–21, 21–13, 14–21 ರಿಂದ ಮಣಿದರು. ಮಾನವ್ ಚೌಧರಿ ತಮ್ಮ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಂಗ್‌ಕಾಂಗ್‌ನ ಚಾನ್ ಯಿನ್ ಚಾಖ್ ಅವರಿಗೆ 6–21, 10–21ರಲ್ಲಿ ಸೋತರು.