ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾರಂಭ ಮಾಡಿದ ಶ್ರೀಜೇಶ್‌ ಪಡೆ

ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ನಾಲ್ಕು ‍ಫೀಲ್ಡ್‌ ಗೋಲು ದಾಖಲಿಸಿದ ಭಾರತ
Last Updated 23 ಜೂನ್ 2018, 20:12 IST
ಅಕ್ಷರ ಗಾತ್ರ

ಬ್ರೆಡಾ, ನೆದರ್‌ಲ್ಯಾಂಡ್ಸ್‌: ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಈ ಹಾದಿಯಲ್ಲಿ ಶುಭಾರಂಭ ಮಾಡಿದೆ. ಶನಿವಾರ ನಡೆದ ರೌಂಡ್‌ ರಾಬಿನ್‌ ಲೀಗ್‌ ಹಣಾಹಣಿಯಲ್ಲಿ ಪಿ.ಆರ್‌.ಶ್ರೀಜೇಶ್‌ ಬಳಗ 4–0 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪರಾಭವಗೊಳಿಸಿತು.

2016ರ ಏಷ್ಯಾ ಚಾಂಪಿಯನ್ಸ್‌ ಟ್ರೋಫಿ, 2017ರಲ್ಲಿ ನಡೆದಿದ್ದ ಹಾಕಿ ವಿಶ್ವ ಲೀಗ್‌ ಸೆಮಿಫೈನಲ್‌ ಮತ್ತು ಬಾಂಗ್ಲಾದೇಶದಲ್ಲಿ ಜರುಗಿದ್ದ ಏಷ್ಯಾಕಪ್‌ ಟೂರ್ನಿಗಳಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿತ್ತು.

ಹಿಂದಿನ ಈ ಗೆಲುವುಗಳ ಬಲದೊಂದಿಗೆ ಕಣಕ್ಕಿಳಿದಿದ್ದ ಶ್ರೀಜೇಶ್‌ ಪಡೆ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿ ಪಾಕಿಸ್ತಾನದ ರಕ್ಷಣಾ ವಿಭಾಗದ ಆಟಗಾರರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಭಾರತಕ್ಕೆ 13ನೇ ನಿಮಿಷದಲ್ಲಿ ಪೆನಾಲ್ಟಿ ಸಿಕ್ಕಿತ್ತು. ಈ ಅವಕಾಶದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಬಾರಿಸಿದ ಚೆಂಡನ್ನು ಎದುರಾಳಿ ತಂಡದ ಗೋಲ್‌ಕೀಪರ್‌ ಇಮ್ರಾನ್‌ ಬಟ್‌ ಸೊಗಸಾಗಿ ತಡೆದರು.

ಎರಡನೇ ಕ್ವಾರ್ಟರ್‌ನ ಆರಂಭದಲ್ಲೂ ಭಾರತಕ್ಕೆ ಪೆನಾಲ್ಟಿ ಸಿಕ್ಕಿತ್ತು. ಆದರೆ ಈ ಅವಕಾಶವನ್ನು ಸದುಪಯೋಗ‍ಪಡಿಸಿಕೊಳ್ಳಲು ಶ್ರೀಜೇಶ್‌ ಪಡೆಯ ಆಟಗಾರರು ವಿಫಲರಾದರು. 26ನೇ ನಿಮಿಷದಲ್ಲಿ ಡ್ರ್ಯಾಗ್‌ಫ್ಲಿಕ್‌ ಪರಿಣತ ಆಟಗಾರ ರಮಣದೀಪ್‌ ಸಿಂಗ್‌ ತಂಡದ ಖಾತೆ ತೆರೆದರು. ಸಿಮ್ರನ್‌ಜೀತ್‌ ಸಿಂಗ್‌ ಅವರ ರಿವರ್ಸ್‌ ಪಾಸ್‌ನಲ್ಲಿ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ರಮಣದೀಪ್ ಅದನ್ನು ಜಾಣ್ಮೆಯಿಂದ ಗುರಿ ತಲುಪಿಸಿದರು. ಮೊದಲಾರ್ಧದ ಆಟ ಮುಗಿಯಲು ಒಂದು ನಿಮಿಷ ಬಾಕಿ ಇದ್ದಾಗ ಭಾರತದ ವಿವೇಕ್‌ ಪ್ರಸಾದ್‌ ಬಾರಿಸಿದ ಚೆಂಡನ್ನು ಪಾಕಿಸ್ತಾನದ ಗೋಲ್‌ಕೀಪರ್‌ ಇಮ್ರಾನ್‌ ತಡೆದರು.

1-0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ಶ್ರೀಜೇಶ್‌ ಬಳಗ ದ್ವಿತೀಯಾರ್ಧದಲ್ಲೂ ಪಾರಮ್ಯ ಮೆರೆಯಿತು. ಮೂರನೇ ಕ್ವಾರ್ಟರ್‌ನ ಆರಂಭದಿಂದಲೇ ಭಾರತದ ಆಟಗಾರರು ಚೆಂಡಿನೊಂದಿಗೆ ಪಾಕಿಸ್ತಾನದ ಆವರಣ ಪ್ರವೇಶಿಸುವ ಪ್ರಯತ್ನ ನಡೆಸಿದರು. 32ನೇ ನಿಮಿಷದಲ್ಲಿ ಪಾಕಿಸ್ತಾನದ ಅಲಿ ಶಾನ್, ಚೆಂಡನ್ನು ಗುರಿ ತಲುಪಿಸಿ ಸಂಭ್ರಮಿಸಿದರು. ಅವರು ‘ಫೌಲ್‌’ ಮಾಡಿದ್ದರಿಂದ ಪಂದ್ಯದ ರೆ‍ಫರಿ, ಗೋಲು ಮಾನ್ಯ ಮಾಡಲಿಲ್ಲ. ಮರು ನಿಮಿಷದಲ್ಲಿ ತೋಸಿಕ್‌ ಅರ್ಶದ್‌ ಅವರ ಗೋಲು ಗಳಿಕೆಯ ಪ್ರಯತ್ನವನ್ನು ಭಾರತದ ಗೋಲ್‌ಕೀಪರ್‌ ಶ್ರೀಜೇಶ್‌ ವಿಫಲಗೊಳಿಸಿದರು. 43ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಪಾಕಿಸ್ತಾನ ಕೈಚೆಲ್ಲಿತು.

54ನೇ ನಿಮಿಷದಲ್ಲಿ ಭಾರತ ತಂಡ ಮುನ್ನಡೆ ಹೆಚ್ಚಿಸಿಕೊಂಡಿತು. ಸಿಮ್ರನ್‌ಜೀತ್, ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ 17ರ ಹರೆಯದ ಆಟಗಾರ ದಿಲ್‌ಪ್ರೀತ್‌ ಸಿಂಗ್‌ ಅದನ್ನು ಎದುರಾಳಿ ತಂಡದ ಗೋಲುಪೆಟ್ಟಿಗೆಯೊಳಗೆ ಸೇರಿಸಿದರು. 57ನೇ ನಿಮಿಷದಲ್ಲಿ ಮನದೀಪ್‌ ಸಿಂಗ್ ಗೋಲು ದಾಖಲಿಸಿ ಶ್ರೀಜೇಶ್‌ ಪಡೆಯ ಜಯದ ಹಾದಿ ಸುಗಮ ಮಾಡಿದರು.

60ನೇ ನಿಮಿಷದಲ್ಲಿ ಲಲಿತ್‌ ಉಪಾಧ್ಯಾಯ ಕೈಚಳ ತೋರಿದರು. ಅವರು ಬಾರಿಸಿದ ಚೆಂಡು ಪಾಕಿಸ್ತಾನದ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಭಾರತದ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ಮುಂದಿನ ಪಂದ್ಯದಲ್ಲಿ ಶ್ರೀಜೇಶ್‌ ಪಡೆ, ಅರ್ಜೆಂಟೀನಾ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT