ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ 2022: ಭಾರತಕ್ಕೆ ಎರಡನೇ ಚಿನ್ನ ತಂದ ಮಿಜೋರಾಂನ ಜರ್ಮಿ

Last Updated 31 ಜುಲೈ 2022, 12:55 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ನಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟ 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಲಭಿಸಿದೆ.

ಪುರುಷರ ವೇಟ್‌ಲಿಫ್ಟಿಂಗ್‌ನ 67 ಕೆ.ಜಿ ವಿಭಾಗದಲ್ಲಿ ಮಿಜೋರಾಂನ 19 ವರ್ಷದ ಜರ್ಮಿ ಲಾಲ್‌ರಿನುಂಗಾ ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಒಟ್ಟು 300ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಜರ್ಮಿ ಅವರು ಹೊಸ ದಾಖಲೆ ನಿರ್ಮಿಸಿದರು.

ಮೀರಾಬಾಯಿ ಚಾನು ಅವರು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿದ್ದರು.ಶನಿವಾರ ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ 49 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 201 ಕೆ.ಜಿ (88 ಕೆ.ಜಿ+ 113 ಕೆ.ಜಿ) ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದಿದ್ದರು.

ಇಲ್ಲಿವರೆಗೆಕಾಮನ್‌ವೆಲ್ತ್‌ ಕ್ರೀಡಾಕೂಟ 2022 ರಲ್ಲಿ ಭಾರತಕ್ಕೆ 5ಪದಕಗಳು ಲಭಿಸಿವೆ (2 ಚಿನ್ನ, 2 ಬೆಳ್ಳಿ 1ಕಂಚು).

ವೇಟ್‌ಲಿಫ್ಟಿಂಗ್‌ನಲ್ಲಿ ಸಂಕೇತ್ ಸರ್ಗರ್, ಬಿಂದ್ಯಾರಾಣಿ ಬೆಳ್ಳಿ ಗೆದ್ದಿದ್ಧಾರೆ. ಕರ್ನಾಟಕದ ಗುರುರಾಜ್ ಪೂಜಾರಿ ಕಂಚು ಗೆದ್ದಿದ್ದಾರೆ. ಈ ಎಲ್ಲ ಐವರೂ ಕ್ರೀಡಾಪಟುಗಳಿಗೆ ರಾಷ್ಟ್ರಪತಿ, ಪ್ರಧಾನಿ ಹಾಗೂ ಗಣ್ಯರು ಅಭಿನಂದಿಸಿದ್ದಾರೆ.

ಮೀರಾ ಅವರ ಸಾಧನೆಗೂ ಮುನ್ನ ಸಂಕೇತ್ ಮಹಾದೇವ್‌ ಸರ್ಗರ್‌ ಈ ಬಾರಿಯ ಕೂಟದಲ್ಲಿ ಭಾರತಕ್ಕೆ ಮೊದಲ ಪದಕದ ಸಿಹಿ ನೀಡಿದ್ದರು. ನೋವಿನ ನಡುವೆಯೂ ಮಿಂಚಿದ ಅವರು ಪುರುಷರ 55 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.

ಒಟ್ಟು 248 ಕೆ.ಜಿ ಭಾರ (113 ಸ್ನ್ಯಾಚ್‌ + 135 ಕ್ಲೀನ್ ಮತ್ತು ಜರ್ಕ್‌) ಎತ್ತಿದ ಸಂಕೇತ್‌, ಚಿನ್ನದ ಪದಕದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. 139 ಕೆಜಿ ಕ್ಲೀನ್ ಮತ್ತು ಜೆರ್ಕ್‌ ವಿಭಾಗದ ಭಾರ ಎತ್ತುವ ವೇಳೆ ಮೊಣಕೈ ನೋವಿನಿಂದ ಬಳಲಿದರು. ಹೀಗಾಗಿ ಅಗ್ರಸ್ಥಾನ ಕೇವಲ ಒಂದು ಕೆಜಿ ಅಂತರದಿಂದ ಕೈತಪ್ಪಿತು.

ಮಲೇಷ್ಯಾದ ಮೊಹಮ್ಮದ್ ಅನಿಕ್‌ (ಒಟ್ಟು 249; 107+142) ಕ್ಲೀನ್ ಮತ್ತು ಜರ್ಕ್‌ ವಿಭಾಗದ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಶ್ರೀಲಂಕಾದ ದಿಲಂಕಾ ಇಸುರು ಕುಮಾರ (225; 105 ಕೆಜಿ+ 120 ಕೆಜಿ) ಕಂಚಿನ ಪದಕ ಜಯಿಸಿದರು.

21 ವರ್ಷದ ಸಂಕೇತ್‌ ಮಹಾರಾಷ್ಟ್ರದ ಸಾಂಗ್ಲಿಯವರಾಗಿದ್ದಾರೆ. ಅವರ ಅಕ್ಕ ಕಾಜೋಲ್ ಕೂಡ ಅಥ್ಲೀಟ್ ಆಗಿದ್ದಾರೆ.

ಪಾನ್‌ಶಾಪ್ ಕೆಲಸ: ಸಂಕೇತ್‌ ಬಾಲ್ಯದ ದಿನಗಳಲ್ಲಿ ತಮ್ಮ ತಂದೆಯ ಪಾನ್‌ಶಾಪ್‌ನಲ್ಲಿ ಗ್ರಾಹಕರಿಗೆ ಚಹಾ ವಿತರಿಸುತ್ತಿದ್ದರು. ಅದರೊಂದಿಗೇ ವಿದ್ಯಾಭ್ಯಾಸ ಮತ್ತು ತರಬೇತಿಯನ್ನೂ ನಡೆಸುತ್ತಿದ್ದರು.

ಕಂಚು ಗೆದ್ದ ಗುರುರಾಜ್‌ ಪೂಜಾರಿ

ಪುರುಷರ 61 ಕೆಜಿ ವಿಭಾಗದ ವೇಟ್‌ಲೀಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಗುರುರಾಜ್‌ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT