ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತದ ಬಿಲ್ಗಾರರ ಸವಾಲು ಅಂತ್ಯ

ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ ದೀಪಿಕಾ ಕುಮಾರಿ
Published 3 ಆಗಸ್ಟ್ 2024, 16:16 IST
Last Updated 3 ಆಗಸ್ಟ್ 2024, 16:16 IST
ಅಕ್ಷರ ಗಾತ್ರ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಭಾರತದ ಆರ್ಚರಿಪಟುಗಳ ಸವಾಲು ಶನಿವಾರ ಅಂತ್ಯಗೊಂಡಿದೆ. ಕೊನೆಯ ಭರವಸೆಯಾಗಿದ್ದ ಅನುಭವಿ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿದ್ದರು.

ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ದೀಪಿಕಾ 6–4ರ ಅಂತರದಲ್ಲಿ ಜರ್ಮನಿಯ ಮಿಷೆಲ್‌ ಕ್ರೊಪ್ಪೆನ್ ವಿರುದ್ಧ ಜಯ ಸಾಧಿಸಿ ಎಂಟರ ಘಟ್ಟ ತಲುಪಿ ಚೊಚ್ಚಲ ಪದಕದ ಭರವಸೆ ಮೂಡಿಸಿದ್ದರು. ಆದರೆ, ಅಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ ಅವರು 4–6ರಿಂದ ದಕ್ಷಿಣ ಕೊರಿಯಾದ ಸುಹ್ಯೆನ್ ನಾಮ್ ಅವರಿಗೆ ಶರಣಾದರು. ಹೀಗಾಗಿ, ಪದಕದ ಕನಸು ಈ ಬಾರಿಯೂ ನನಸಾಗಲಿಲ್ಲ.

ಮೊದಲ ಮೂರು ಸೆಟ್‌ ಅಂತ್ಯಕ್ಕೆ 4–2ರ ಮುನ್ನಡೆ ಪಡೆದಿದ್ದ 30 ವರ್ಷ ವಯಸ್ಸಿನ ದೀಪಿಕಾ, ಸೆಮಿಫೈನಲ್‌ ಪ್ರವೇಶಿಸುವ ಹೊಸ್ತಿಲಲ್ಲಿದ್ದರು. ಆದರೆ, ನಾಲ್ಕನೇ ಸೆಟ್‌ನ ಎರಡನೇ ಬಾಣ ಗುರಿ ತಪ್ಪಿದ್ದು ಅವರಿಗೆ ದುಬಾರಿಯಾಯಿತು. ನಾಲ್ಕು ಸೆಟ್‌ಗಳ ಮುಕ್ತಾಯಕ್ಕೆ ಉಭಯ ಸ್ಪರ್ಧಿಗಳು 4–4 ಸಮಬಲ ಹೊಂದಿದ್ದರು. ನಿರ್ಣಾಯಕ ಸೆಟ್‌ನಲ್ಲಿ ದೀಪಿಕಾ ಮುನ್ನಡೆ ಪಡೆಯಲು ವಿಫಲವಾದರು. ನಿಖರವಾಗಿ ಗುರಿಯಿಟ್ಟ 19 ವರ್ಷ ವಯಸ್ಸಿನ ನಾಮ್ ಮುಂದಿನ ಸುತ್ತು ಪ್ರವೇಶಿಸಿದರು.

ಈ ಹಿಂದೆ ಶಾಂಘೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ನಾಮ್ ಅವರನ್ನು ಸೆಮಿಫೈನಲ್‌ಲ್ಲಿ ದೀಪಿಕಾ ಪರಾಭವಗೊಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ, ಇಲ್ಲಿ ಅದು ಪುನರಾವರ್ತನೆಯಾಗಲಿಲ್ಲ.

ತಂಡ ವಿಭಾಗದ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕಾಗಿ ದೀಪಿಕಾ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಆದರೆ, ವೈಯಕ್ತಿಕ ಸ್ಪರ್ಧೆಯಲ್ಲಿ ಸುಧಾರಿತ ಪ್ರದರ್ಶನ ನೀಡಿ ಗಮನ ಸೆಳೆದರು.

ಭಜನ್‌ಗೆ ನಿರಾಸೆ: ಭಾರತದ 18 ವರ್ಷ ವಯಸ್ಸಿನ ಭಜನ್‌ ಕೌರ್‌ ಅವರು 16ರ ಘಟ್ಟದ ಪಂದ್ಯದಲ್ಲಿ ಇಂಡೊನೇಷ್ಯಾದ ದಯಾನಂದ ಚೊಯಿರುನಿಸಾ ವಿರುದ್ಧ ಶೂಟ್ ಆಫ್‌ನಲ್ಲಿ ಪರಾಭವಗೊಂಡರು.

ನಿಗದಿತ ಐದು ಸೆಟ್‌ನಲ್ಲಿ ಭಜನ್‌ 28–29, 27–25, 26–28, 28–28, 27–26 ಸಮಬಲ ಸಾಧಿಸಿದ್ದರು. ಆದರೆ, ಶೂಟ್‌ ಆಫ್‌ನಲ್ಲಿ ಎಡವಿದರು. ಅಲ್ಲಿ ಭಾರತದ ಬಿಲ್ಗಾರ್ತಿ 8 ಅಂಕ ಪಡೆದರೆ, ಎದುರಾಳಿ ಆಟಗಾರ್ತಿ 9 ಸ್ಕೋರ್‌ ಪಡೆದು ಮುಂದಿನ ಸುತ್ತು ಪ್ರವೇಶಿಸಿದರು.

ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರನ್ನು ಒಳಗೊಂಡ ಮಿಶ್ರ ತಂಡವು ಶುಕ್ರವಾರ ನಾಲ್ಕನೇ ಸ್ಥಾನ ಪಡೆದಿತ್ತು. ಇದು ಆರ್ಚರಿಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.

ಲಿಮ್ ಸಿಹ್ಯೆನ್‌ಗೆ ಚಿನ್ನ: ಮಹಿಳೆಯರ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳು ದಕ್ಷಿಣ ಕೊರಿಯಾ ಪಾಲಾದವು. ಫೈನಲ್‌ನಲ್ಲಿ ಲಿಮ್ ಸಿಹ್ಯೆನ್‌ ಮತ್ತು ಸುಹ್ಯೆನ್ ನಾಮ್ ಮುಖಾಮುಖಿಯಾಗಿದ್ದು, 7–3 ಅಂತರದಿಂದ ಲಿಮ್‌ ಗೆದ್ದರು. ಕಂಚಿನ ಪದಕವನ್ನು ಆತಿಥೇಯ ಫ್ರಾನ್ಸ್‌ನ ಲಿಸಾ ಬಾರ್ಬೆಲಿನ್ ಗೆದ್ದುಕೊಂಡರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT