ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಅಥ್ಲೆಟಿಕ್ಸ್: ಮಿಕ್ಸೆಡ್‌ ರಿಲೆಯಲ್ಲಿ ಭಾರತಕ್ಕೆ ಚಿನ್ನ–ಶ್ರೀಶಂಕರ್‌ಗೆ ಬೆಳ್ಳಿ

Published 15 ಜುಲೈ 2023, 19:56 IST
Last Updated 15 ಜುಲೈ 2023, 19:56 IST
ಅಕ್ಷರ ಗಾತ್ರ

ಬ್ಯಾಂಕಾಕ್: ಭಾರತದ ಲಾಂಗ್‌ಜಂಪ್‌ ತಾರೆ ಮುರಳಿ ಶ್ರೀಶಂಕರ್‌, ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಪದಕ ಗೆಲ್ಲುವ ಮೂಲಕ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆಯನ್ನೂ ಪಡೆದರು. ಅವರು 8.37 ಮೀ. ದೂರ ಜಿಗಿದು ಎರಡನೇ ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು.

ಕೂಟದ ನಾಲ್ಕನೇ ದಿನ ಭಾರತ ಒಂದು ಚಿನ್ನ, ಮೂರು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದುಕೊಂಡಿತು. 4x400 ಮೀ. ಮಿಕ್ಸೆಡ್‌ ರಿಲೇ ಓಟದಲ್ಲಿ ರಾಜೇಶ್ ರಮೇಶ್, ಐಶ್ವರ್ಯಾ ಮಿಶ್ರಾ, ಅಮೋಜ್ ಜಾಕೋಬ್ ಮತ್ತು ಶುಭಾ ವೆಂಕಟೇಶನ್ ಅವರನ್ನೊಳಗೊಂಡ ತಂಡ ಚಿನ್ನ(ಕಾಲ: 3ನಿ.14.70 ಸೆ.) ಗೆದ್ದಿತು. ಉಳಿದಂತೆ– ಪುರುಷರ ಹೈಜಂಪ್‌ನಲ್ಲಿ ಸರ್ವೇಶ್ ಅನಿಲ್‌ ಕುಶಾರೆ (ಎತ್ತರ: 2.26 ಮೀ) ಮತ್ತು ಹೆಪ್ಟಾಥ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್‌ (5840 ಪಾಯಿಂಟ್ಸ್‌) ಅವರದ್ದು ಬೆಳ್ಳಿಯ ಸಾಧನೆ. 400 ಮೀ. ಹರ್ಡಲ್ಸ್‌ನಲ್ಲಿ ಸಂತೋಷ್‌ ಕುಮಾರ್‌ ಕಂಚಿನ ಪದಕ ಗೆದ್ದುಕೊಂಡರು.

ಭಾರತದ ಸ್ಪರ್ಧಿಗಳು ಇದುವರೆಗೆ 14 ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಇವುಗಳಲ್ಲಿ ಆರು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳು ಒಳಗೊಂಡಿವೆ.

24 ವರ್ಷದ ಶ್ರೀಶಂಕರ್‌ ಅಂತಿಮ ಸುತ್ತಿನ ಯತ್ನದಲ್ಲಿ 8.37 ಮೀ. ಜಿಗಿದರು. ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಗೆ 8.27 ಮೀ. ನಿಗದಿಪಡಿಸಲಾಗಿತ್ತು. ಚೀನಾ ತೈಪೆಯ ಯು ತಾಂಗ್‌ ಲಿನ್‌ ನಾಲ್ಕನೇ ಸುತ್ತಿನಲ್ಲಿ 8.40 ಮೀ. ಜಿಗಿದು ಚಿನ್ನದ ಪದಕ ಖಚಿತಪಡಿಸಿಕೊಂಡರು. ಈ ವರ್ಷ ದಾಖಲಾದ ಮೂರನೇ ಅತ್ಯುತ್ತಮ ಜಿಗಿತ ಇದಾಗಿದೆ.

ಇದು ಶ್ರೀಶಂಕರ್‌ ಅವರಿಗೆ ಎರಡನೇ ಒಲಿಂಪಿಕ್ಸ್‌ ಆಗಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಅರ್ಹತಾ ಸುತ್ತಿನಲ್ಲಿ ಹೊರಬಿದ್ದಿದ್ದರು.

ಕಳೆದ ತಿಂಗಳು ಭುವನೇಶ್ವರದ ರಾಷ್ಟ್ರೀಯ ಅಂತರ ರಾಜ್ಯ ಕೂಟದಲ್ಲಿ ವಿಶ್ವದ ಎರಡನೇ ಅತ್ಯುತ್ತಮ ಜಿಗಿತ (8.41 ಮೀ.) ದಾಖಲಿಸಿ ಅವರು ವಿಶ್ವ ಚಾಂಪಿಯನ್‌ಷಿಪ್‌ಗೂ ಅರ್ಹತೆ ಪಡೆದಿದ್ದಾರೆ.

ಕುಶಾರೆ ಅವರಿಗೆ ಇದು ಮೊದಲ ಪ್ರಮುಖ ಅಂತರರಾಷ್ಟ್ರೀಯ ಕೂಟದ ಪದಕ ಎನಿಸಿತು. ಈ ಹಿಂದೆ 2019ರ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಪುರುಷರ 400 ಮೀ. ಹರ್ಡಲ್ಸ್‌ ಓಟವನ್ನು 49.09 ಸೆ.ಗಳಲ್ಲಿ ಓಡಿ ಕಂಚಿನ ಪದಕ ಗೆಲ್ಲುವ ಹಾದಿಯಲ್ಲಿ ಸಂತೋಷ್‌ ಕುಮಾರ್‌ ತಮ್ಮ ಶ್ರೇಷ್ಠ ವೈಯಕ್ತಿಕ ಸಾಧನೆ ದಾಖಲಿಸಿದರು. ಕತಾರ್‌ನ ಮೊಹಮ್ಮದ್ ಹಮೀದ ಬಾಸ್ಸೆಮ್ (48.64 ಸೆ.) ಚಿನ್ನ ಮತ್ತು ಜಪಾನ್‌ನ ಯುಸಾಕು ಕೊಡಮ (48.96 ಸೆ.) ಬೆಳ್ಳಿಯ ಪದಕ ಗಳಿಸಿದರು. ಕಳೆದ ವರ್ಷ 49.49 ಸೆ.ಗಳಲ್ಲಿ ಓಡಿದ್ದೇ, 25 ವರ್ಷದ ಸಂತೋಷ್‌ ಅವರ ಈ ಹಿಂದಿನ ಉತ್ತಮ ಸಾಧನೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT