ನವದೆಹಲಿ: ಭಾರತ ಚೆಸ್ ತಂಡಗಳು, ಬುಡಾಪೆಸ್ಟ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಒಲಿಂಪಿಯಾಡ್‌ನಲ್ಲಿ ಅವಳಿ ಸ್ವರ್ಣಗಳನ್ನು ಗೆದ್ದು ಇತಿಹಾಸ ಸ್ಥಾಪಿಸಿವೆ. ಆದರೆ ಈ ಸುವರ್ಣ ಯುಗವನ್ನು ರೂಪಿಸುವಲ್ಲಿ ದೇಶದ ಮೊದಲ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಪ್ರಭಾವ ಗಣನೀಯ.
ವಿಶ್ವ ಚಾಂಪಿಯನ್‌ಷಿಪ್ ಚಾಲೆಂಜರ್ ಡಿ.ಗುಕೇಶ್, ಆರ್.ಪ್ರಜ್ಞಾನಂದ, ಅರ್ಜುನ್ ಇರಿಗೇಶಿ ಮತ್ತು ವಿದಿತ್ ಗುಜರಾತಿ ಅವರಿದ ಪಡೆ ಎದುರಾಳಿ ತಂಡಗಳನ್ನು ಸದೆಬಡಿಯುತ್ತ ಹೋಗಿ ಒಂದು ಸುತ್ತು ಮೊದಲೇ ಸ್ವರ್ಣ ಪದಕ ಖಚಿತಪಡಿಸಿಕೊಂಡಿತ್ತು. ಅಗ್ರ ಶ್ರೇಯಾಂಕದ ಅಮೆರಿಕ ಮತ್ತು ಪ್ರಬಲ ಉಜ್ಬೇಕಿಸ್ತಾನ ತಂಡಗಳನ್ನೂ ಹಿಂದೆಹಾಕಿದರು.
ಹಾರಿಕಾ, ಆರ್.ವೈಶಾಲಿ, ದಿವ್ಯಾ ದೇಶಮುಖ್, ವಂತಿಕಾ ಅಗರವಾಲ್ ಮತ್ತು ತಾನಿಯಾ ಸಚ್‌ದೇವ್ ಅವರಿದ್ದ ಮಹಿಳಾ ತಂಡ, ಕಜಕಸ್ತಾನ ತಂಡವನ್ನು ಹಿಂದೆಹಾಕಿ ಚಿನ್ನಗೆದ್ದಿತು.
ತಮ್ಮ ತವರು ಚೆನ್ನೈನಲ್ಲಿ ನಡೆದ ಈ ಮೊದಲಿನ ಒಲಿಂಪಿಯಾಡ್‌ನಲ್ಲಿ ಭಾರತದ ತಂಡಗಳು ಚಿನ್ನ ಗೆಲ್ಲಬಹುದೆಂದು ಆನಂದ್ ಗ್ರಹಿಸಿದ್ದರು. ಆದರೆ ಎರಡು ತಂಡಗಳು ಕಂಚಿನ ಪದಕ ಗೆದ್ದಿದ್ದವು.
54 ವರ್ಷ ವಯಸ್ಸಿನ ಈ ಚೆಸ್ ದಿಗ್ಗಜ ಒಲಿಂಪಿಯಾಡ್‌ಗೆ ಮೊದಲು ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಭಾರತ ತಂಡಗಳ ಸಾಮರ್ಥ್ಯದ ಮೇಲೆ ವಿಶ್ವಾಸ ಇರಿಸಿದ್ದರು. ಇದಕ್ಕೆ ಕಲಶಪ್ರಾಯವೆಂಬಂತೆ, ಹಂಗರಿಯ ರಾಜಧಾನಿಯಲ್ಲಿ ಭಾರತ ತಂಡಗಳು ಗೆದ್ದಾಗ ಅವರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಗುಕೇಶ್, ಪ್ರಜ್ಞಾನಂದ, ಅರ್ಜುನ್ ಮತ್ತು ವೈಶಾಲಿ ಅವರು ಆನಂದ್ ಅವರು ವೆಸ್ಟ್‌ಬ್ರಿಜ್ ಆನಂದ್ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಚೆನ್ನೈನಲ್ಲಿ ಅವರು ಈ ಅಕಾಡೆಮಿ ಆರಂಭಿಸಿದ್ದರು.
‘ವಿಶಿ ಸರ್ ಅವರ ಮಾರ್ಗದರ್ಶನ ಇಲ್ಲದೇ ಹೋಗಿದ್ದಲ್ಲಿ ನಾವು ಈ ಹಂತ ತಲುಪುತ್ತಿರಲಿಲ್ಲ’ ಎಂದು 18 ವರ್ಷ ವಯಸ್ಸಿನ ಗುಕೇಶ್ ಮತ್ತು 19 ವರ್ಷ ವಯಸ್ಸಿನ ಪ್ರಜ್ಞಾನಂದ ಹಲವು ಬಾರಿ ಹೇಳಿದ್ದಾರೆ.
‘ಭಾರತದ ಚೆಸ್ ಸುಗ್ಗಿಯ ಜನಕ’ ಎಂದು ಆನಂದ್ ಅವರನ್ನು ವಿಶ್ವ ಚೆಸ್ ಫೆಡರೇಷನ್ (ಫಿಡೆ) ಬಣ್ಣಿಸಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ‘ಆನಂದ್ ಅವರ ಮಾರ್ಗದರ್ಶನದ ಮಕ್ಕಳು ಈಗ ದಂಡಯಾತ್ರೆಯಲ್ಲಿದ್ದಾರೆ...’ ಎಂದು ಗುಕೇಶ್ ಅವರು ಏಪ್ರಿಲ್‌ನಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದ ನಂತರ ಇನ್ನೊಬ್ಬ ಮಹಾನ್ ಆಟಗಾರ ಗ್ಯಾರಿ ಕ್ಯಾಸ್ಪರೋವ್ ಹೇಳಿದ್ದರು.
ಆಟಗಾರರ ಈ ಯಶಸ್ಸಿನ ಶ್ರೇಯವನ್ನು ಆನಂದ್ ಅವರು ಪೋಷಕರು ಮತ್ತು ಮೊದಲ ಕೋಚ್‌ಗಳಿಗೆ ಅರ್ಪಿಸುತ್ತಾರೆ. ಆದರೆ ತಮ್ಮ ಶಾಲಾ ಮಾದರಿಯ ತಮ್ಮ ಅಕಾಡೆಮಿಯ ಪಾತ್ರವನ್ನೂ ಅವರು ಉಲ್ಲೇಖಿಸುತ್ತಾರೆ. ಸೋವಿಯತ್ ಯೂನಿಯನ್‌ನಲ್ಲಿ ಮೂರು ದಶಕಗಳ ಹಿಂದೆ ಅವರು ಇಂಥ ಚೆಸ್ ಶಾಲೆಗಳಿಂದ ಸ್ಪೂರ್ತಿ ಪಡೆದಿದ್ದರು.
‘ನಮ್ಮ ಗುರಿ ತುಂಬಾ ಸರಳ. ಆಟಗಾರರಿಗೆ ನೆರವಾಗುವುದು. ಭಾರತದ ಆಟಗಾರರು ವಿಶ್ವದ ಮೊದಲ 200ರಲ್ಲಿ ಸ್ಥಾನ ಪಡೆಯುತ್ತಿದ್ದರು. ಆದರೆ ಅವರು 100ರಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದರು. ಈ ಪ್ರತಿಭಾನ್ವಿತ ಎಳೆಯರಿಗೆ ಸಹಾಯ ಮಾಡುವುದು ನಮ್ಮ ಯೋಚನೆಯಾಗಿತ್ತು. ಈಗ ನಾವು ಯಶಸ್ಸು ಪಡೆದಿದ್ದೇವೆ ಎನಿಸುತ್ತದೆ’ ಎಂದು ಅವರು ಒಲಿಂಪಿಯಾಡ್‌ಗೆ ಮೊದಲು ಹೇಳಿದ್ದರು.
ಫಿಡೆ ಜೊತೆಗಿ ಸಂವಾದದ ವೇಳೆ ಆನಂದ್ ಅವರು ಗುಕೇಶ್ ಮತ್ತು ಪ್ರಜ್ಞಾನಂದ ಅವರು ಸಾಧಿಸಿದ ಪ್ರಗತಿಯ ವೇಗ ತಮಗೆ ಅಚ್ಚರಿ ಮೂಡಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
14 ವರ್ಷಕ್ಕಿಂತ ಮೊದಲು ಗ್ರ್ಯಾಂಡ್‌ಮಾಸ್ಟರ್‌ಗಳಾದ ಆಟಗಾರರನ್ನು ಅಕಾಡೆಮಿಗೆ ಪಡೆದೆ. ಅಗ್ರ ಜೂನಿಯರ್ ಆಟಗಾರರ ಹಂತದಿಂದ ವಿಶ್ವ ವಿಜೇತರಾಗಲು ಅವರಿಗೆ ನೆರವಾಗುವುದು ಯೋಜನೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.