ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Father's Day 2024: ಅಪ್ಪನ ಮಗಳು ಸಿಂಧು...!

Published 15 ಜೂನ್ 2024, 0:20 IST
Last Updated 15 ಜೂನ್ 2024, 0:20 IST
ಅಕ್ಷರ ಗಾತ್ರ

ಭಾರತದ ಕ್ರೀಡಾ ಇತಿಹಾಸದ ಪುಸ್ತಕದ ಪುಟಗಳನ್ನು ತಿರುವಿಹಾಕಿದರೆ, ಕಳೆದೊಂದು ದಶಕದ ಸಾಧನೆಗಳು ಸುವರ್ಣಸದೃಶ. ಅದರಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆಗಳೇ ಸಿಂಹಪಾಲು. ಅದರಲ್ಲೂ ಪ್ರಮುಖವಾಗಿ  ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರದ್ದು ಆಗಸದೆತ್ತರದ ಸಾಧನೆ.  

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಎರಡು ಕಂಚು ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಅವರ ಮನೆಯ ವಿಶಾಲವಾದ ಪ್ರಶಸ್ತಿ ಸಂಗ್ರಹಾಲಯದಲ್ಲಿವೆ.  ಅವುಗಳ ಹಿಂದೆ ಸಿಂಧು ಅವರ ಪರಿಶ್ರಮ, ಛಲ ಮತ್ತು ಪ್ರತಿಭೆಯಷ್ಟೇ ಇಲ್ಲ. ಅವರ ಅಪ್ಪ ಪಿ.ವಿ. ರಮಣ ಅವರ ನಿರಂತರ ಬೆಂಬಲವೂ ಇದೆ. 11ನೇ ವಯಸ್ಸಿನಲ್ಲಿ ಮೊದಲ ಬಾರಿ ಸಿಂಧು ಬ್ಯಾಡ್ಮಿಂಟನ್ ರೆಕೆಟ್‌ ಹಿಡಿದು ಅಂಕಣಕ್ಕೆ ಕಾಲಿಟ್ಟ ದಿನದಿಂದ ಇಲ್ಲಿಯವರೆಗೆ ರಮಣ ಅವರು ಸಿಂಧುಗೆ ನೆರಳಿನಂತೆ ಇದ್ದಾರೆ. 

ಸ್ವತಃ ವಾಲಿಬಾಲ್ ಆಟಗಾರರಾಗಿದ್ದ ರಮಣ ತಮ್ಮ ಮಗಳ ಸೋಲು, ಗೆಲುವು, ನೋವು, ನಲಿವುಗಳಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ತಾನು ವಿಶ್ವಮಟ್ಟದ ತಾರಾ ಕ್ರೀಡಾಪಟು ಎಂಬ ಅಹಂಕಾರವನ್ನು ಸಿಂಧು ತಮ್ಮ ಬಳಿ ಬಿಟ್ಟುಕೊಂಡಿಲ್ಲ. 

‘ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬರುವ ಯಶಸ್ಸು, ಅದನ್ನು ಹಿಂಬಾಲಿಸಿ ಬರುವ ಸಂಪತ್ತುಗಳನ್ನು ನಿಭಾಯಿಸುವುದು ಸುಲಭವಲ್ಲ. ಅಹಂಕಾರವು ದಾರಿ ತಪ್ಪಿಸುವ ಅಪಾಯ ಇರುತ್ತದೆ. ಆದರೆ ಅದೆಲ್ಲವನ್ನೂ ನಿಭಾಯಿಸುವ ಮತ್ತು ಸೋಲು,  ದುಃಖ, ಒತ್ತಡಗಳನ್ನು ಮೀರಿ ನಿಲ್ಲುವುದನ್ನು ಕಲಿತದ್ದು ಮನೆಯ ವಾತಾವರಣದಿಂದಲೇ. ಅದೆಷ್ಟೋ ಬಾರಿ ಅಪ್ಪನ ಮಾತುಗಳು ನನಗೆ ಹೊಸ ದಿಕ್ಕು ತೋರಿವೆ. ಅವರೇ ನನ್ನ ಆದರ್ಶ’ ಎಂದು ಸಿಂಧು ಹೇಳುತ್ತಾರೆ.  

ಇವತ್ತಿನ ಡಿಜಿಟಲ್ ಯುಗದಲ್ಲಿ ಮಕ್ಕಳ ಏಕಾಗ್ರತೆಯನ್ನು ಭಂಗಗೊಳಿಸುವ ಹಲವು ದಾರಿಗಳು ಇವೆ. ಮೊಬೈಲ್ ಗೀಳಿಗೆ ಮಕ್ಕಳು ಬೀಳುತ್ತಿದ್ದಾರೆ. ಮಕ್ಕಳಲ್ಲಿ ಈ ಗೀಳು ಬೆಳೆಯದಂತೆ ಉತ್ತಮ ಹವ್ಯಾಸಗಳನ್ನು ರೂಢಿಸುವುದು ಪಾಲಕರದ್ದೇ ಜವಾಬ್ದಾರಿ ಎನ್ನುತ್ತಾರೆ ರಮಣ.

‘ಸಿಂಧು ಈ ಹಂತಕ್ಕೆ ಬರಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಅವರಲ್ಲಿ ಪ್ರತಿಭೆ ಇತ್ತು ನಿಜ. ಆದರೆ ಅದನ್ನು ತೋರಿಸಿಕೊಡಬೇಕಾಗಿದ್ದು ನಮ್ಮ ಕರ್ತವ್ಯವಾಗಿತ್ತು. ಅವರನ್ನು ಸರಿದಾರಿಯಲ್ಲಿ ನಡೆಸಲು ನಾವೂ ಶ್ರಮಪಡಬೇಕಾಯಿತು. ಬೆಳಗಿನ ಜಾವ 3.30ಕ್ಕೆ ನಾವು ಮೊದಲು ಎದ್ದು ಮಕ್ಕಳನ್ನು ಎಬ್ಬಿಸಬೇಕಿತ್ತು. ಅವರ ಜೀವನಶೈಲಿಗೆ ತಕ್ಕಂತೆ ನಮ್ಮದೂ ಇರಬೇಕಿತ್ತು. ನಮ್ಮ ವೃತ್ತಿಯ ಜೊತೆಗೆ ಆಕೆಯ ಸಾಧನೆಗೂ ನಾವು ಒತ್ತಾಸೆಯಾಗಿ ನಿಲ್ಲುವುದು ಕಠಿಣ ಸವಾಲಾಗಿತ್ತು. ಆದರೆ ಒಂದಂತೂ ನಿಜ. ಮಕ್ಕಳು ಯಾವಾಗಲೂ ಅಪ್ಪ, ಅಮ್ಮನನ್ನು ಅನುಕರಿಸುವುದು ಹೆಚ್ಚು. ಬುದ್ಧಿವಾದ, ಉಪದೇಶಗಳನ್ನು ಮಕ್ಕಳು ಇಷ್ಟಪಡುವುದಿಲ್ಲ. ಆದ್ದರಿಂದ ನಾವು ಪ್ರಾಕ್ಟಿಕಲ್ ಆಗಿ ಮಾಡಿ ತೋರಿದಾಗ ಅವರೂ ಮಾಡುತ್ತಾರೆ‘ ಎಂದು ರಮಣ ಹೇಳುವ ಮಾತುಗಳು ಎಷ್ಟೊಂದು ಅರ್ಥಗರ್ಭಿತವಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT