ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ಭಾರತ ತಂಡದ ಗೆಲುವಿನ ಓಟ

ಜರ್ಮನಿ ವಿರುದ್ಧ 6–3ರಲ್ಲಿ ಜಯ
Published : 13 ಮಾರ್ಚ್ 2023, 23:37 IST
ಫಾಲೋ ಮಾಡಿ
Comments

ರೂರ್ಕೆಲಾ: ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನಲ್ಲಿ ಭಾರತ ತಂಡದ ಅಮೋಘ ಪ್ರದರ್ಶನ ಮುಂದುವರಿದಿದ್ದು, ಜರ್ಮನಿ ವಿರುದ್ಧ ಸತತ ಎರಡನೇ ಗೆಲುವು ಸಾಧಿಸಿದೆ.

ಸೋಮವಾರ ನಡೆದ ಪಂದ್ಯವನ್ನು ಭಾರತ 6–3 ಗೋಲುಗಳಿಂದ ಗೆದ್ದಿತು. ಮೂರು ದಿನಗಳ ಹಿಂದೆ ಇದೇ ತಂಡವನ್ನು 3–2ರಿಂದ ಸೋಲಿಸಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ ಮತ್ತೊಮ್ಮೆ ಆಕ್ರಮಣಕಾರಿ ಆಟ ವಾಡಿತು. ಈ ಗೆಲುವಿನೊಂದಿಗೆ 7 ಪಂದ್ಯಗಳಿಂದ 17 ಪಾಯಿಂಟ್ಸ್‌ಗಳೊಂದಿಗೆ ಭಾರತ ಅಗ್ರಸ್ಥಾನಕ್ಕೇರಿತು.

ತಲಾ ಎರಡು ಗೋಲುಗಳನ್ನು ಗಳಿಸಿದ ಕಾರ್ತಿ ಸೆಲ್ವಂ (23 ಮತ್ತು 45ನೇ ನಿ.) ಹಾಗೂ ಅಭಿಷೇಕ್‌ (21 ಮತ್ತು 50ನೇ ನಿ.) ಅವರು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತರ ಗೋಲುಗಳನ್ನು ಜುಗರಾಜ್‌ ಸಿಂಗ್‌ (20) ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ (25) ತಂದಿತ್ತರು. ಆತಿಥೇಯ ತಂಡ ನಾಲ್ಕು ಫೀಲ್ಡ್‌ ಗೋಲುಗಳನ್ನು ಗಳಿಸಿದರೆ, ಇನ್ನೆರಡು ಗೋಲುಗಳು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಬಂದವು.

ಎರಡನೇ ನಿಮಿಷದಲ್ಲಿ ಟಾಮ್‌ ಗ್ರಾಂಬುಷ್‌ ಗಳಿಸಿದ ಗೋಲಿನ ನೆರವಿನಿಂದ ಮುನ್ನಡೆ ಸಾಧಿಸಿದ್ದ ಜರ್ಮನಿ, ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು. ಗೊಂಜಾಲೊ ಪೆಲಟ್‌ (22) ಮತ್ತು ಮಾಲ್ಟೆ ಹೆಲ್ವಿಗ್‌ (30) ಅವರ ಗೋಲುಗಳು ಸೋಲಿನ ಅಂತರವನ್ನು ತಗ್ಗಿಸಿದವು.

ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ ತಂಡ ಮೇಲುಗೈ ಸಾಧಿಸಿತು. ಭಾರತ ತಂಡಕ್ಕೆ ಸಮಬಲದ ಗೋಲು ಗಳಿಸಲು 20ನೇ ನಿಮಿಷದವರೆಗೆ ಕಾಯ ಬೇಕಾಯಿತು. ಪೆನಾಲ್ಟಿ ಕಾರ್ನರ್‌ನಲ್ಲಿ ಜುಗ್ರಾಜ್ ಚೆಂಡನ್ನು ಗುರಿ ಸೇರಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಒಟ್ಟು ನಾಲ್ಕು ಗೋಲುಗಳನ್ನು ಗಳಿಸಿತು.

3ನೇ ಕ್ವಾರ್ಟರ್‌ ಕೊನೆಗೊಂಡಾಗ ಆತಿಥೇಯ ತಂಡ 4–3 ರಲ್ಲಿ ಮುನ್ನಡೆಯಲ್ಲಿತ್ತು. ಕೊನೆಯ ಕ್ವಾರ್ಟರ್‌ನಲ್ಲಿ ಅಭಿಷೇಕ್ ಮತ್ತು ಕಾರ್ತಿ ಅವರ ನೆರವಿನಿಂದ ಮತ್ತೆರಡು ಗೋಲು ಗಳನ್ನು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT