ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂಪರ್ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌–ಚಿರಾಗ್‌ ಮೇಲೆ ನಿರೀಕ್ಷೆ

ಇಂಡಿಯಾ ಓಪನ್‌ ಸೂಪರ್ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ
Published 15 ಜನವರಿ 2024, 21:59 IST
Last Updated 15 ಜನವರಿ 2024, 21:59 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಂಗಳವಾರ ಇಲ್ಲಿ ಆರಂಭವಾಗುವ ಇಂಡಿಯಾ ಓಪನ್‌ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ಹೊಸ ಋತುವಿನ ಮೊದಲ ಟೂರ್ನಿ ಮಲೇಷ್ಯಾ ಓಪನ್‌ನಲ್ಲಿ ಭಾನುವಾರ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿರುವ ಭಾರತದ ಜೋಡಿಯು ತವರಿನಲ್ಲಿ ಮತ್ತೆ ಚಾಂಪಿಯನ್‌ ಆಗುವ ಹುಮ್ಮಸ್ಸಿನಲ್ಲಿದೆ. 2022ರ ಆವೃತ್ತಿಯಲ್ಲಿ ಸಾತ್ವಿಕ್‌– ಚಿರಾಗ್‌ ಅವರು ಇಲ್ಲಿ ‍ಪ್ರಶಸ್ತಿ ಗೆದ್ದಿದ್ದರು.

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಆಯೋಜನೆಯ ಇಂಡಿಯಾ ಓಪನ್‌ ಟೂರ್ನಿಯನ್ನು ಕಳೆದ ವರ್ಷ ‘ಸೂಪರ್‌ 500’ರಿಂದ ‘ಸೂಪರ್‌ 750’ಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಭಾರತದ ಆಟಗಾರರು ಯಾವುದೇ ವಿಭಾಗದಲ್ಲಿ ಎರಡನೇ ಸುತ್ತು ದಾಖಲು ಸಾಧ್ಯವಾಗದೆ ನಿರಾಸೆ ಅನುಭವಿಸಿದ್ದರು.

ಕಳೆದ ಆವೃತ್ತಿಯಲ್ಲಿ ಗಾಯದ ಕಾರಣದಿಂದ ಎರಡನೇ ಸುತ್ತಿನಿಂದ ಹಿಂದೆ ಸರಿದಿದ್ದ ಸಾತ್ವಿಕ್ ಮತ್ತು ಚಿರಾಗ್ ಅವರು ಪ್ರಸ್ತುತ ಉತ್ತಮ ಲಯದಲ್ಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಅವರು, ಆರಂಭಿಕ ಸುತ್ತಿನಲ್ಲಿ 25ನೇ ಶ್ರೇಯಾಂಕದ ಫಾಂಗ್ ಜೆನ್ ಲೀ ಮತ್ತು ಫಾಂಗ್ ಚಿಹ್ ಲೀ (ಚೀನಾ ತೈಪೆ) ಅವರ ಸವಾಲನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಏಷ್ಯನ್‌ ಕ್ರೀಡಾಕೂಟದ ಕಂಚಿನ ಪದಕ ವಿಜೇತ ಎಚ್‌.ಎಸ್. ಪ್ರಣಯ್, ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರೀಕಾಂತ್ ಅವರು ಭಾರತದ ಸವಾಲನ್ನು ಮುನ್ನಡೆಸಲಿದ್ದು, ಅವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮೊಣಕಾಲಿನ ಗಾಯದಿಂದಾಗಿ ಟೂರ್ನಿಯಿಂದ ದೂರ ಉಳಿದಿದ್ದಾರೆ.

ಮಲೇಷ್ಯಾ ಓಪನ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ವಿಶ್ವದ 8ನೇ ಕ್ರಮಾಂಕದ ಪ್ರಣಯ್‌ ಮತ್ತು 17ನೇ ಕ್ರಮಾಂಕದ ಲಕ್ಷ್ಯ ಸೇನ್‌ ಅವರು ಇಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅದೇ ಟೂರ್ನಿಯಲ್ಲಿ 5ನೇ ಕ್ರಮಾಂಕದ ಜೊನಾಟನ್ ಕ್ರಿಸ್ಟಿಗೆ (ಇಂಡೊನೇಷ್ಯಾ) ಆಘಾತ ನೀಡಿದ್ದ ಶ್ರೀಕಾಂತ್‌ ಕೊಂಚ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ‌

ಪ್ರಣಯ್ ಮತ್ತು ಸೇನ್ ಅವರು ಮೊದಲ ಸುತ್ತಿನಲ್ಲಿ ಕ್ರಮವಾಗಿ ಚೀನಾ ತೈಪೆಯ ಚೌ ಟಿಯೆನ್ ಚೆನ್ ಮತ್ತು ಸ್ವದೇಶದ ಪ್ರಿಯಾಂಶು ರಾಜಾವತ್ ಅವರ ವಿರುದ್ಧ ಸೆಣಸಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಅವರು ಹಾಂಗ್ ಕಾಂಗ್‌ನ ಲೀ ಚೆಯುಕ್ ಯಿಯು ಅವರನ್ನು ಎದುರಿಸುವರು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಇವರೆಲ್ಲರಿಗೆ ಇದು ಮಹತ್ವದ ಟೂರ್ನಿಯಾಗಿದೆ.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ ಜೋಡಿಯು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ರವಿಂಡ ಪ್ರಜೊಂಗ್‌ಜೈ ಮತ್ತು ಜೊಂಗ್‌ಕೋಲ್ಫಾನ್ ಕಿಟಿತಾರಾಕುಲ್ ಅವರನ್ನು; ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿಯು ಜಪಾನ್‌ನ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ ಅವರನ್ನು ಎದುರಿಸಲಿದೆ.

ವಿಕ್ಟರ್‌ ಅಲಭ್ಯ: ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ವಿಕ್ಟರ್ ಅಕ್ಸೆಲ್ಸೆನ್ (ಡೆನ್ಮಾರ್ಕ್‌) ಅವರು ಮಲೇಷ್ಯಾ ಓಪನ್‌ ಟೂರ್ನಿಯಲ್ಲಿ ಆಡುವಾಗ ಅನಾರೋಗ್ಯಕ್ಕೆ ಒಳಗಾದ ನಂತರ ಇಂಡಿಯಾ ಓಪನ್‌ನಿಂದ ಹಿಂದೆ ಸರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT