ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತನ ಪ್ರೇರಣೆ; ಜಂಪ್‌ರೋಪ್‌ನಲ್ಲಿ ಸಾಧನೆ

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿದ ಕುಗ್ರಾಮದ ಪ್ರತಿಭೆ ವಿಜಯ ರಾಠೋಡ
Last Updated 21 ಆಗಸ್ಟ್ 2018, 13:01 IST
ಅಕ್ಷರ ಗಾತ್ರ

ವಿಜಯಪುರ: ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿಯಲ್ಲಿ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ್ದ ಪ್ರತಿಭೆ. ಬಿಪಿ.ಇಡಿಯಲ್ಲಿ ಸ್ನೇಹಿತನ ಪ್ರೇರಣೆಯಿಂದ ಜಂಪ್‌ರೋಪ್‌ ಕ್ರೀಡೆಯತ್ತ ಹೊರಳಿ, ಕಠಿಣ ಪರಿಶ್ರಮದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭವಿಷ್ಯದ ತಾರೆಯಾಗಿ ಹೊರ ಹೊಮ್ಮಿದ್ದಾರೆ.

ಬಸವನಬಾಗೇವಾಡಿ ತಾಲ್ಲೂಕು ಸಂಕನಾಳ ಗ್ರಾಮದ ವಿಜಯ ರಾಠೋಡ ಜಂಪ್‌ರೋಪ್‌ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಭವಿಷ್ಯದ ಪ್ರತಿಭೆ. ಪ್ರಾಥಮಿಕ, ಪ್ರೌಢಶಾಲೆಯಲ್ಲಿ 100 ಮೀಟರ್‌ ಓಟ, ಲಾಂಗ್‌ ಜಂಪ್‌, ಟ್ರಿಪ್ಪಲ್‌ ಜಂಪ್‌ನಲ್ಲಿ ಜಿಲ್ಲಾ ಮಟ್ಟ ಹಾಗೂ ಪಿಯುಸಿಯಲ್ಲಿ ರಾಜ್ಯ ಮಟ್ಟದವರೆಗೆ ಸಾಧನೆ ತೋರಿರುವ ಈತ ತಾನು ಕಲಿತ ಶಾಲೆ–ಕಾಲೇಜುಗಳಿಗೆ ಕೀರ್ತಿ ತಂದಿದ್ದಾರೆ.

ಕ್ರೀಡೆಯಲ್ಲಿನ ಆಸಕ್ತಿಯಿಂದ ಪದವಿ ನಂತರ ಬಿಪಿ.ಇಡಿ ಆಯ್ಕೆ ಮಾಡಿಕೊಂಡ ವಿಜಯ, ಈಗಾಗಲೇ ಜಂಪ್‌ರೋಪ್‌ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಸ್ನೇಹಿತ ಸೈಯದ್‌ ಭಾಷಾರ ಪ್ರೋತ್ಸಾಹ, ಪ್ರೇರಣೆಯಿಂದ ತಾನೂ ಕೂಡ ಆತನಂತೆ ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಗಂಗಾವತಿಯ ತರಬೇತುದಾರ ರಜಾಕ್ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮ ಪಟ್ಟು, ರಾಜ್ಯ ಜಂಪ್‌ರೋಪ್‌ (ಹಗ್ಗದ ಆಟ) ಸಂಸ್ಥೆ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, 15ನೇ ಸೀನಿಯರ್‌ ನ್ಯಾಷನಲ್ ಜಂಪ್‌ ರೋಪ್‌ ಚಾಂಪಿಯನ್‌ಷಿಪ್‌–2018ಕ್ಕೆ ಆಯ್ಕೆಯಾದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕ್ರೀಡಾಕೂಟದ ಎಂಡುರನ್ಸ್‌ 3 ನಿಮಿಷದ ಸ್ಪರ್ಧೆಯ ಎರಡು ಸುತ್ತಿನ ಸ್ಪರ್ಧೆಯ ಪೈಕಿ ಮೊದಲ ಸುತ್ತಿನಲ್ಲಿ ಟಾಪ್‌–10 ಬರುವಲ್ಲಿ ಯಶಸ್ವಿಯಾದರು. ಕೊನೆ ಸುತ್ತಿನಲ್ಲಿ ಪ್ರಶಸ್ತಿ ಗೆಲ್ಲಲು ಸೋತರೂ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರ, ಅಂತರರಾಷ್ಟೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಬೇಕೆಂಬ ಕನಸು ಹೊಂದಿರುವ ವಿಜಯ ರಾಠೋಡಗೆ ಬಡತನ ಮಗ್ಗಲು ಮುಳ್ಳಾಗಿ ಕಾಡುತ್ತಿದ್ದು, ಸಹಾಯದ ನಿರೀಕ್ಷೆಯಲ್ಲಿದ್ದಾರೆ.

‘ಈ ಭಾಗದಲ್ಲಿ ಜಂಪ್‌ರೋಪ್‌ ತರಬೇತುದಾರರಿಲ್ಲ. ಗಂಗಾವತಿ, ಬೆಂಗಳೂರು ಸೇರಿದಂತೆ ದೂರದ ಪ್ರದೇಶಗಳಲ್ಲಿರುವ ತರಬೇತಿದಾರರ ಬಳಿಗೆ ಹೋಗಬೇಕು. ಅಲ್ಲಿಗೆ ತೆರಳಿ ತರಬೇತಿ ಪಡೆಯಲು ತಿಂಗಳಿಗೆ ಕನಿಷ್ಠ ₹ 8000ದಿಂದ 10000 ಖರ್ಚಾಗುತ್ತದೆ. ಕೂಲಿಯನ್ನು ನಂಬಿ ಜೀವನ ನಡೆಸುತ್ತಿರುವ ನಮಗೆ ಅಷ್ಟೊಂದ್ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಆದರೂ ನಿತ್ಯ ಸ್ವತಃ ನಾನೇ ಅಭ್ಯಾಸ ಮಾಡುತ್ತಿದ್ದೇನೆ. 15ನೇ ಸೀನಿಯರ್‌ ನ್ಯಾಷನಲ್ ಜಂಪ್‌ ರೋಪ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಹಣದ ತೊಂದರೆ ಆಗಿತ್ತು’ ಎಂದು ವಿಜಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಥಮಿಕ ಶಾಲೆಯಲ್ಲಿಯೇ ವಿಜಯ ಉತ್ತಮ ಕ್ರೀಡಾಪಟು ಆಗಿ ಹೊರಹೊಮ್ಮಿದ್ದಾರೆ. ನಮ್ಮ ಪ್ರೌಢಶಾಲೆಯಲ್ಲಿಯೂ ಕೂಡ ಮೂರು ವರ್ಷ 100 ಮೀಟರ್‌ ಓಟ, ಲಾಂಗ್‌ ಜಂಪ್‌, ಟ್ರಿಪ್ಪಲ್‌ ಜಂಪ್‌ನಲ್ಲಿ ಜಿಲ್ಲಾ ಮಟ್ಟದವರೆಗೆ ಸಾಧನೆ ಮಾಡಿದ್ದಾನೆ. ಇದೀಗ ಜಂಪ್‌ರೋಪ್‌ನಲ್ಲಿ ಆಸಕ್ತಿ ತೋರಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿರುವುದು ಶಾಲೆಗೆ ಹೆಮ್ಮೆಯ ವಿಷಯ’ ಎನ್ನುತ್ತಾರೆ ಹೈಸ್ಕೂಲ್‌ ಶಿಕ್ಷಕ ಪಿ.ಎಸ್‌.ಅರಳಿಚಂಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT