ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿಯಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ

ಏಷ್ಯನ್ ಪ್ಯಾರಾ ಕ್ರೀಡಾಕೂಟ: ಐದನೇ ದಿನ ಎಂಟು ಪದಕಗಳು ಭಾರತದ ಬಗಲಿಗೆ
Last Updated 10 ಅಕ್ಟೋಬರ್ 2018, 19:01 IST
ಅಕ್ಷರ ಗಾತ್ರ

ಜಕಾರ್ತ: ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಹರವಿಂದರ್ ಸಿಂಗ್ ಬುಧವಾರ ಮಿಂಚಿದರು. ಆರ್ಚರಿಯಲ್ಲಿ ಅವರು ಭಾರತಕ್ಕೆ ಚೊಚ್ಚಲ ಚಿನ್ನ ಗಳಿಸಿಕೊಟ್ಟರು. ಪುರುಷರ ವೈಯಕ್ತಿಕ ರಿಕರ್ವ್‌ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಐದನೇ ದಿನವಾದ ಬುಧವಾರ ಭಾರತ ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನೂ ಬಗಲಿಗೆ ಹಾಕಿಕೊಂಡಿತು.

ಬುಧವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಹರವಿಂದರ್ ಸಿಂಗ್‌ ಚೀನಾದ ಜೋ ಲಿಕ್ಸಿ ಅವರನ್ನು 6–0ಯಿಂದ ಮಣಿಸಿದರು. ಇದು ಕೂಟದಲ್ಲಿ ಭಾರತ ಗೆದ್ದ ಏಳನೇ ಚಿನ್ನವಾಗಿದೆ.

ಬೆಳ್ಳಿ ಗೆದ್ದ ಮೋನು ಗಂಗಾಸ್‌: ಭಾರತಕ್ಕೆ ದಿನದ ಮೊದಲ ಪದಕ ಗೆದ್ದುಕೊಟ್ಚವರು ಮೋನು ಗಂಗಾಸ್‌. ಅವರು ಪುರುಷರ ಡಿಸ್ಕಸ್‌ ಥ್ರೋ ಎಫ್‌ 11 ವಿಭಾಗದಲ್ಲಿ 35.89 ಮೀಟರ್‌ ದೂರ ಎಸೆದು ಬೆಳ್ಳಿ ಗಳಿಸಿದರು. ಇರನಾನ್‌ ಒಲಾದ್‌ ಮಹದಿ ಕೂಟ ದಾಖಲೆಯೊಂದಿಗೆ (42.37 ಮೀಟರ್ಸ್‌) ಚಿನ್ನದ ಪದಕ ತಮ್ಮದಾಗಿಸಿಕೊಂಡರು. ವಿಜಯ್‌ ಕುಮಾರ್‌ ಪುರುಷರ ಲಾಂಗ್ ಜಂಪ್‌ನಲ್ಲಿ 5.05 ಮೀಟರ್ ಜಿಗಿದು ಬೆಳ್ಳಿ ಗೆದ್ದರು. ಈ ವಿಭಾಗದ ಚಿನ್ನ ಶ್ರೀಲಂಕಾದ ಚರಿತಾ ನಿರ್ಮಲ ಬುದ್ದಿಕ ಅವರ ಪಾಲಾಯಿತು.

ಶಾಟ್‌ಪಟ್‌ನಲ್ಲಿ ಮೊಹಮ್ಮದ್‌ ಯಾಸಿರ್‌ (14.22 ಮೀಟರ್ಸ್‌) ಕಂಚಿನ ಪದಕ ತಮ್ಮದಾಗಿಸಿಕೊಂಡರು. ಟೇಬಲ್ ಟೆನಿಸ್‌ನ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಭಾವಿನಾಬೆನ್‌ ಪಟೇಲ್ ಮತ್ತು ಸೊನಾಲ್‌ಬೆನ್‌ ಪಟೇಲ್‌ ಜೋಡಿ ಇಂಡೊನೇಷ್ಯಾ ಜೋಡಿ ಅಸಾಯತ್‌ ಮತ್ತು ಪತ್ತರವಾಡಿ ಜೋಡಿ ವಿರುದ್ಧ 4–11, 12–14ರಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ಚೆಸ್‌ನಲ್ಲಿ ಜೆನಿತಾ ಆ್ಯಂಟೊ ಅವರು ಪಿ1 ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ಪ್ರೇಮಾ ಕನಿಶ್ರೀ ಮತ್ತು ಜನಿತಾ ತಂಡ ವಿಭಾಗದಲ್ಲಿ ಕಂಚು ಗೆದ್ದಿತು. ಮತ್ತೊಂದು ತಂಡ ವಿಭಾಗದಲ್ಲಿ ಮೃಣಾಲಿ ಪ್ರಕಾಶ್‌, ಮೇಘಾ ಚಕ್ರವರ್ತಿ ಮತ್ತು ತೈಜನ್‌ ಕಂಚು ಗೆದ್ದರು. ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ್ ಕಂಚು ಗಳಿಸಿದರು. ಭಾರತ ಒಟ್ಟು 37 ಪದಕಗಳೊಂದಿಗೆ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. 100 ಚಿನ್ನ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT