ಅಥೆನ್ಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಟರ್ಧಿಸುತ್ತಿರುವ ಗ್ರೀಸ್ ದೇಶದ ಕ್ರೀಡಾಪಟು ಒಬ್ಬರು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ (ಡೋಪಿಂಗ್) ಸಿಕ್ಕಿಬಿದ್ದಿದ್ದಾರೆ. ಒಲಿಂಪಿಕ್ ಕ್ರೀಡಾಗ್ರಾಮ ತೊರೆಯುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಗ್ರೀಸ್ ಒಲಿಂಪಿಕ್ ಸಮಿತಿ ಪ್ರಕಟಣೆ ತಿಳಿಸಿದೆ.
ಪರಿಕ್ಷೆಯಲ್ಲಿ ಉದ್ದೀಪನ ಮದ್ದು ಸೇವನೆ ದೃಢಪಟ್ಟಿರುವ ಕುರಿತು ಗ್ರೀಸ್‌ನ ಉದ್ದೀಪನ ಮದ್ದುಸೇವನೆ ತಡೆ ಘಟಕ ಮಾಹಿತಿ ನೀಡಿದೆ. ಆ ಕ್ರೀಡಾಪಟು ತಕ್ಷಣದಿಂದಲೇ ತಾತ್ಕಾಲಿಕ ನಿಷೇಧಕ್ಕೆ ಒಳಗಾಗುತ್ತಾರೆ ಎಂದು ಅಲ್ಲಿನ ಒಲಿಂಪಿಕ್ ಸಮಿತಿ ತಿಳಿಸಿದೆ.
ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದು, ನಿಷೇಧಕ್ಕೆ ಒಳಗಾಗಿರುವ ಅಥ್ಲೀಟ್ ಯಾರು ಮತ್ತು ಯಾವ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು ಎಂಬ ಮಾಹಿತಿಯನ್ನು ಸಂಸ್ಥೆಯು ಬಹಿರಂಗಪಡಿಸಿಲ್ಲ.