ಅಥೆನ್ಸ್: ನಿಷೇಧಿತ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಗ್ರೀಕ್ ಅಥ್ಲೀಟ್ ಸಿಕ್ಕಿಬಿದ್ದಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರ ಹಾಕಲಾಗಿದೆ.
ಅಥ್ಲೀಟ್ ಅನ್ನು ಕ್ರೀಡಾಕೂಟದಿಂದ ಹೊರ ಹೋಗುವಂತೆ ಸೂಚಿಸಲಾಗಿದೆ ಎಂದು ಗ್ರೀಸ್‌ನ ಒಲಿಂಪಿಕ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಥ್ಲೀಟ್ ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಗ್ರೀಸ್‌ನ ಉದ್ದೀಪನ ಮದ್ದು ವಿರೋಧಿ ಏಜೆನ್ಸಿಯಿಂದ ಮಾಹಿತಿ ಸಿಕ್ಕಿದೆ ಎಂದು ಪ್ಯಾರಿಸ್ ಒಲಿಂಪಿಕ್ದ್ ಸಮಿತಿ ತಿಳಿಸಿದೆ.
ಆದರೆ, ಅಥ್ಲೀಟ್ ಹೆಸರು ಮತ್ತು ಪಾಲ್ಗೊಳ್ಳಲು ಆಗಮಿಸಿದ್ದ ಕ್ರೀಡೆ ಯಾವುದು ಎಂಬ ಬಗ್ಗೆ ಸಮಿತಿ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಅಥ್ಲೀಟ್ ವಿರುದ್ಧದ ತಾತ್ಕಾಲಿಕ ನಿಷೇಧ ಸ್ವಯಂಚಾಲಿತವಾಗಿ ಜಾರಿಗೆ ಬಂದಿದ್ದು, ಕ್ರೀಡೆಯಿಂದ ಹೊರಗಿಡಲಾಗಿದೆ.
ಪ್ರಸಕ್ತ ಒಲಿಂಪಿಕ್ ಕೂಟದಲ್ಲಿ ಒಂದೆರಡು ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಕಂಡುಬಂದಿವೆ.
ನೈಜೀರಿಯಾ ಮೂಲದ ಬಾಕ್ಸರ್, ಕಾಮನ್ವೆಲ್ತ್ ಗೇಮ್ಸ್‌ನ ಕಂಚಿನ ಪದಕ ವಿಜೇತ ಮತ್ತು ಆಫ್ರಿಕನ್ ಗೇಮ್ಸ್ ಬಾಕ್ಸಿಂಗ್ ಚಾಂಪಿಯನ್ ಲಿಂತಿಯ ಒಗುನ್‌ಸೆಮಿಲೋರ್ ಸಹ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು.
ಒಲಿಂಪಿಕ್ ಕ್ರೀಡಾಕೂಟ ಆರಂಭಕ್ಕೂ ಒಂದು ದಿನ ಮೊದಲು ಇರಾಕಿನ ಜುಡೋಕೊ ಸಜ್ಜಾದ್ ಅವರ ಪ್ರಯೋಗಾಲಯದ ಮಾದರಿಯ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು.