ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಗ್ ಮಾಸ್ಟರ್ಸ್‌ ಚೆಸ್ ಟೂರ್ನಿ: ಡ್ರಾ ಪಂದ್ಯದಲ್ಲಿ ಗುಕೇಶ್– ಪ್ರಜ್ಞಾನಂದ

Published 6 ಮಾರ್ಚ್ 2024, 15:45 IST
Last Updated 6 ಮಾರ್ಚ್ 2024, 15:45 IST
ಅಕ್ಷರ ಗಾತ್ರ

ಪ್ರಾಗ್‌: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ, ಪ್ರಾಗ್‌ ಮಾಸ್ಟರ್ಸ್ ಚೆಸ್‌ ಟೂರ್ನಿಯ ಏಳನೇ ಸುತ್ತಿನ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ, ಸ್ವದೇಶದ ಡಿ.ಗುಕೇಶ್ ವಿರುದ್ಧ ಅದನ್ನು ಗೆಲುವನ್ನಾಗಿ ಪರಿವರ್ತಿಸಲು ವಿಫಲರಾದರು. ಬುಧವಾರ ಈ ದೀರ್ಘ ಪಂದ್ಯ 91 ನಡೆಗಳ ನಂತರ ‘ಡ್ರಾ’ ಆಯಿತು.

ಕಪ್ಪು ಕಾಯಿಗಳಲ್ಲಿ ಆಡಿದ ಗುಕೇಶ್ ಸೋಲಿನಿಂದ ತಪ್ಪಿಸಿಕೊಂಡರನ್ನೆಬಹುದು. ಇನ್ನೊಂದೆಡೆ, ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ (5) ಅವರು ಜರ್ಮನಿಯ ವಿನ್ಸೆಂಟ್ ಕೀಮರ್ (3) ಅವರನ್ನು ಸೋಲಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. 

10 ಆಟಗಾರರ ಟೂರ್ನಿಯಲ್ಲಿ ಇನ್ನೆರಡು ಸುತ್ತಿನ ಪಂದ್ಯಗಳು ಉಳಿದಿವೆ. ವಿದಿತ್ ಗುಜರಾತಿ (2) ಹಿನ್ನಡೆ ಕಂಡರು. ಅವರು ಇರಾನ್‌ನ ಪರ್ಹಾಮ್ ಮಘಸೂಡ್ಲು ಎದುರು ಸೋಲನುಭವಿಸಿದರು. ಮಘಸೂಡ್ಲು (4.5) ಎರಡನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ ಮತ್ತು ಎನ್ಗುಯೆನ್ ಥಾ ದೈ ವಾನ್‌ (ಝೆಕ್ ರಿಪಬ್ಲಿಕ್) ತಲಾ ನಾಲ್ಕು ಪಾಯಿಂಟ್ಸ್ ಕಲೆಹಾಕಿದ್ದಾರೆ. ಗುಕೇಶ್ (3) ಅವರಿಗಿಂತ ಹಿಂದಿದ್ದಾರೆ.

ರುಮೇನಿಯಾದ ರಿಚರ್ಡ್‌ ರ್‍ಯಾಪೋರ್ಟ್ ಮತ್ತು ಸ್ಥಳೀಯ ಆಟಗಾರ ಡೇವಿಡ್‌ ನವಾರ ಅವರು ತಲಾ 3.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ನವಾರ (3.5) ಮತ್ತು ಪೋಲೆಂಡ್‌ನ ಮ್ಯಾಥ್ಯೂಸ್‌ ಬಾರ್ಟೆಲ್ (2.5) ನಡುವಣ ಪಂದ್ಯ ‘ಡ್ರಾ’ ಆಯಿತು. ರ‍್ಯಾಪೋರ್ಟ್‌ (3.5), ಎನ್ಗುಯೆನ್‌ ಎದುರು ಸೋಲನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT