ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics: ಭಾರತ ಹಾಕಿ ತಂಡ ಪ್ರಕಟ; ಹರ್ಮನ್‌ಪ್ರೀತ್ ಸಿಂಗ್ ನಾಯಕ

Published 26 ಜೂನ್ 2024, 10:50 IST
Last Updated 26 ಜೂನ್ 2024, 10:50 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾರಿಸ್‌ನಲ್ಲಿ ನಡೆಯಲಿರುವ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಹಾಕಿ ತಂಡವನ್ನು ಹರ್ಮನ್‌ಪ್ರೀತ್ ಸಿಂಗ್ ಅವರು ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ಹಾರ್ದಿಕ್ ಸಿಂಗ್‌ ಆಯ್ಕೆಯಾಗಿದ್ದಾರೆ.

ಜುಲೈನಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ 16 ಜನರ ಹಾಕಿ ತಂಡವನ್ನು ಬುಧವಾರ ಘೋಷಿಸಲಾಗಿದೆ. ಹಿರಿಯರು ಹಾಗೂ ಕಿರಿಯರನ್ನೊಳಗೊಂಡ ತಂಡ ಇದಾಗಿದೆ. 2020ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿ ಪೂಲ್ ಬಿ ಪಟ್ಟಿಯಲ್ಲಿ ಭಾರತ ತಂಡವಿದ್ದು, ಹಾಲಿ ಚಾಂಪಿಯನ್‌ ಬೆಲ್ಜಿಯಂ, ರನ್ನರ್‌ಅಪ್‌ ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ ತಂಡಗಳಿವೆ. ಈ ಗುಂಪಿನಲ್ಲಿ ಅತಿ ಹೆಚ್ಚು ಅಂಕ ಗಳಿಸುವ ನಾಲ್ಕು ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. 

ಭಾರತ ತಂಡದ ಆಟಗಾರರು ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಯಾಂಪ್‌ನಲ್ಲಿ ಅಭ್ಯಾಸದಲ್ಲಿ ತಲ್ಲೀನರಾಗಿದ್ದಾರೆ.

ಈ ಬಾರಿ ತಂಡದಲ್ಲಿ ಗೋಲ್‌ಕೀಪರ್ ಆಗಿರುವ ಪಿ.ಆರ್.ಶ್ರೀಜೆಶ್ ಹಾಗೂ ಮಿಡ್‌ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್ ಅವರಿಗೆ ಇದು ನಾಲ್ಕನೇ ಒಲಿಂಪಿಕ್ ಆಗಿದೆ. ನಾಯಕ ಹರ್ಮನ್‌ಪ್ರೀತ್ ಅವರು ಒಟ್ಟು ಮೂರು ಬಾರಿ ಒಲಿಂಪಿಕ್‌ನಲ್ಲಿ ಆಡಿದ್ದಾರೆ. ಜರ್ಮನ್‌ಪ್ರೀತ್ ಸಿಂಗ್‌, ಸಂಜಯ್‌, ರಾಜ್‌ ಕುಮಾರ್ ಪಾಲ್‌, ಅಭಿಷೇಕ್ ಹಾಗೂ ಸುಖಜೀತ್ ಸಿಂಗ್ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡಲಿದ್ದಾರೆ.

ಭಾರತ ತಂಡದ ಮೇಲೆ ನಿರೀಕ್ಷೆಯ ಭಾರ

ಟೊಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ 41 ವರ್ಷಗಳ ಬಳಿಕ ಪದಕ ಜಯಿಸಿತು. ಇದಾದ ನಂತರ ತಂಡದ ಮೇಲಿನ ನಿರೀಕ್ಷೆಯ ಭಾರತ ಹೆಚ್ಚಾಗಿದೆ. ಭಾರತದ ಡಿಫೆಂಡರ್ ರುಪೀಂದರ್‌ಪಾಲ್ ಸಿಂಗ್‌ ಹಾಗೂ ವೀರೇಂದ್ರ ಲಾಕ್ರಾ ಅವರು ನಿವೃತ್ತರಾಗಿದ್ದಾರೆ. ಸುರೇಂದರ್ ಕುಮಾರ್ ಅವರು ತಂಡದಲ್ಲಿ ಇಲ್ಲ. ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ತಂಡದಲ್ಲಿದ್ದ ನೀಲಕಂಠ ಶರ್ಮಾ ಅವರನ್ನು ಈ ಬಾರಿ ಬದಲಿ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ದಿಲ್‌ಪ್ರೀತ್ ಸಿಂಗ್ ಈ ಬಾರಿ ಅಲಭ್ಯರಾಗಿದ್ದಾರೆ.

ಗೋಲ್‌ಕೀಪರ್ ಕೃಷ್ಣನ್ ಪಾಠಕ್ ಅವರು ಈ ಬಾರಿ ಒಲಿಂಪಿಕ್ಸ್‌ನಲ್ಲೂ ಬದಲಿ ಆಟಗಾರರ ಪಟ್ಟಿಯಲ್ಲಿದ್ದಾರೆ. ಡಿಫೆನ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್‌, ಅಮಿತ್ ರೋಹಿದಾಸ್, ಸುಮಿತ್ ಹಾಗೂ ಸಂಜಯ್‌ ಆಡಲಿದ್ದಾರೆ. ಮಿಡ್‌ಫೀಲ್ಡ್‌ನಲ್ಲಿ ಪಾಲ್, ಶಮ್‌ಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್‌ ಹಾಗೂ ವಿವೇಕ್ ಸಾಗರ್ ಪ್ರಸಾದ್ ಆಡಲಿದ್ದಾರೆ.

ಅಭಿಷೇಕ್, ಸುಖಜೀತ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್‌ ಸಿಂಗ್ ಹಾಗೂ ಗುರ್ಜಂತ್ ಸಿಂಗ್‌ ತಂಡದಲ್ಲಿ ಮುಂಚೂಣಿಯಲ್ಲಿ ನಿಂತು ಎದುರಾಳಿ ತಂಡದ ಮೇಲೆ ಆಕ್ರಮಣ ನಡೆಸಲಿದ್ದಾರೆ. ಜುಗರಾಜ್ ಸಿಂಗ್ ಅವರು ಬದಲಿ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ತಂಡದ ಪ್ರತಿಯೊಬ್ಬರೂ ಅತ್ಯುತ್ತಮ ಆಯ್ಕೆ ಎಂದ ಕೋಚ್

ತಂಡದ ಮುಖ್ಯ ಕೋಚ್ ಕ್ರೇಗ್ ಫುಲ್ಟನ್‌ ಅವರು ಈ ಕುರಿತು ಪ್ರತಿಕ್ರಿಯಿಸಿ, ‘ಪ್ರತಿಭಾವಂತ ಆಟಗಾರರೇ ತುಂಬಿರುವಲ್ಲಿ ಒಲಿಂಪಿಕ್ಸ್‌ಗೆ ಭಾರತ ತಂಡದ ಆಯ್ಕೆ ಬಹಳ ಕಷ್ಟಕರವಾಗಿತ್ತು. ಪ್ಯಾರಿಸ್‌ನಲ್ಲಿ ಭಾರತ ತಂಡದ ಪರ ಆಡುವ ಪ್ರತಿಯೊಬ್ಬರೂ ಅತ್ಯುತ್ತಮ ಆಯ್ಕೆ ಎಂದೆನಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ನನ್ನದು’ ಎಂದಿದ್ದಾರೆ.

‘ತಂಡಕ್ಕೆ ಆಯ್ಕೆಯಾದ ಪ್ರತಿಯೊಬ್ಬ ಆಟಗಾರನೂ ಕೌಶಲ, ಬದ್ಧತೆ ಹಾಗೂ ನಮ್ಮ ಕಠಿಣ ತರಬೇತಿಯಿಂದ ಪಡೆದ ಸ್ಥಿತಸ್ಥಾಪಕತ್ವದಿಂದಾಗಿ ಮಿಂಚಲಿದ್ದಾರೆ. ಹೀಗಾಗಿ ಯಾವುದೇ ರೀತಿಯ ಆಟದ ಶೈಲಿಗೂ ಇವರು ತ್ವರಿತವಾಗಿ ಒಗ್ಗಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಅದು ಖಂಡಿತಾ ಸಾಧ್ಯವಾಗಲಿದೆ’ ಎಂದಿದ್ದಾರೆ.

‘ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಜುಲೈ 27ರಂದು ಹಾಗೂ ಅರ್ಜೆಂಟೀನಾ ವಿರುದ್ಧ ಜುಲೈ 29ರಂದು ಆಡಲಿದೆ. ಜುಲೈ 30ರಂದು ಐರ್ಲೆಂಡ್ ವಿರುದ್ಧ, ಆಗಸ್ಟ್ 1ರಂದು ಬೆಲ್ಜಿಯಂ ವಿರುದ್ಧ, ಆಗಸ್ಟ್ 2ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಆಡಲಿದೆ.

ಈವರೆಗೂ ನಡೆದಿರುವ ಒಲಿಂಪಿಕ್ಸ್‌ನಲ್ಲಿ ಭಾರತ 12 ಪದಕಗಳನ್ನು ಗೆದ್ದಿದೆ. ಇದರಲ್ಲಿ ಎಂಟು ಚಿನ್ನ, ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಒಳಗೊಂಡಿದೆ.

ಭಾರತ ತಂಡದಲ್ಲಿ...

ಗೋಲ್‌ಕೀಪರ್‌: ಶ್ರೀಜೆಶ್ ಪರಟ್ಟು ರವೀಂದ್ರನ್‌

ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೊಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಸಂಜಯ್

ಮಿಡ್‌ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ಶಮ್‌ಶೇರ್‌ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್

ಫಾರ್ವರ್ಡ್‌: ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್

ಬದಲಿ ಆಟಗಾರರು: ನೀಲಕಂಠ ಶರ್ಮಾ, ಜುಗರಾಜ್ ಸಿಂಗ್, ಕೃಷ್ಣ ಬಹದ್ದೂರ್ ಪಾಠಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT