ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ನಲ್ಲಿ ಕನ್ನಡಿಗನ ಅಂಪೈರಿಂಗ್

ಪ್ಯಾರಿಸ್‌ ಕೂಟದಲ್ಲಿ ಭಾರತದ ಏಕೈಕ ಹಾಕಿ ಅಂಪೈರ್‌ ಬೆಂಗಳೂರಿನ ರಘುಪ್ರಸಾದ್
Published 14 ಸೆಪ್ಟೆಂಬರ್ 2023, 0:30 IST
Last Updated 14 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಹಾಕಿ ಆಟಗಾರನಾಗಿದ್ದೆ. ಆದರೆ ಅದರಲ್ಲಿಯೇ ದೊಡ್ಡಮಟ್ಟಕ್ಕೆ ಬೆಳೆಯುವಂತಹ ಸಾಮರ್ಥ್ಯ ಇರಲಿಲ್ಲ. ಅದಕ್ಕಾಗಿಯೇ ಅದೊಂದು ದಿನ ನಮ್ಮ ಕೋಚ್ ಕೃಷ್ಣಮೂರ್ತಿಯವರು ಆಟ ಬಿಡು ಅಂಪೈರಿಂಗ್ ಮಾಡು ಎಂದರು. ಅವರ ಮಾತು ಕೇಳಿದೆ. ಇವತ್ತು ಈ ಎತ್ತರಕ್ಕೆ ಬೆಳೆದಿದ್ದೇನೆ’–

ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಹಾಕಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿರುವ ರಘುಪ್ರಸಾದ್ ಆರ್‌.ವಿ. ಅವರ ಮಾತುಗಳಿವು. ಪ್ಯಾರಿಸ್ ಒಲಿಂಪಿಕ್‌ ಕೂಟಕ್ಕೆ ಆಯ್ಕೆಯಾಗಿರುವ ಭಾರತದ ಏಕೈಕ ಅಂಪೈರ್ ಕೂಡ ಅವರಾಗಿದ್ದಾರೆ. ಇದು ಅವರಿಗೆ ಮೂರನೇ ಒಲಿಂಪಿಕ್ಸ್. 2012 ಮತ್ತು 2020ರ ಒಲಿಂಪಿಕ್ ಕೂಟಗಳಲ್ಲಿ ಅವರು ಅಂಪೈರ್ ಆಗಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಾಯ್ದಿಟ್ಟ ಅಂಪೈರ್ ಆಗಿದ್ದರು. 186 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಇದೆ. ಬೆಂಗಳೂರಿನ ರಘುಪ್ರಸಾದ್, 23ನೇ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಅಂಪೈರಿಂಗ್‌ಗೆ ಪದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದರು.

‘ಸ್ಥಳೀಯ ಟೂರ್ನಿಗಳಲ್ಲಿ ಅಂಪೈರಿಂಗ್ ಮಾಡುವ ಮೂಲಕ ಕಲಿಕೆ ಆರಂಭವಾಯಿತು. ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣನಾದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗೆ ಅರ್ಹತೆ ಪಡೆದೆ. 2003ರಲ್ಲಿ ಆಸ್ಟ್ರೇಲಿಯಾದ ಪರ್ತ್ ಹಗೂ ಸಿಡ್ನಿಯಲ್ಲಿ ನಡೆದ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿತು. ಆಗ ಧನರಾಜ್ ಪಿಳ್ಳೆ, ಎಬಿ ಸುಬ್ಬಯ್ಯ ಅವರಂತಹ ಖ್ಯಾತನಾಮರು ಭಾರತ ತಂಡದಲ್ಲಿದ್ದರು. ಅವರೆಲ್ಲರೂ ಬಹಳಷ್ಟು ಪ್ರೋತ್ಸಾಹ ನೀಡಿದರು. ಇದು ನನ್ನಲ್ಲಿದ್ದ ಭಯ ಕಡಿಮೆಯಾಗಿ ವೃತ್ತಿಪರನಾಗಿ ರೂಪುಗೊಳ್ಳಲು ಕಾರಣವಾಯಿತು. ಆ ಟೂರ್ನಿಯಲ್ಲಿ ನನ್ನ ಕೆಲಸ ನೋಡಿದ ಎಫ್‌ಐಎಚ್‌ ಅಂಪೈರ್ ಡಾನ್ ಪ್ರಯರ್ ಎಫ್‌ಐಎಚ್‌ (ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌)ಗೆ ಶಿಫಾರಸು ಮಾಡಿದರು. ಅಂತರರಾಷ್ಟ್ರೀಯಮಟ್ಟದ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣನಾದೆ. ವಿಶ್ವ ಪ್ಯಾನಲ್‌ಗೆ ಪ್ರವೇಶ ಲಭಿಸಿತು. ನಂತರ ತುಂಬಾ ಒಳ್ಳೆಯ ಅವಕಾಶಗಳು ಲಭಿಸಿದವು‘ ಎಂದರು.

‘ಇದುವರೆಗೆ ನಾಲ್ಕು ಸೀನಿಯರ್ ವಿಶ್ವಕಪ್, ಮೂರು ಜೂನಿಯರ್ ವಿಶ್ವಕಪ್, ಒಂದು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾರ್ಯನಿರ್ವಹಿಸಿದೆ. ಮುಂಬರುವ ಚೀನಾ ಏಷ್ಯನ್ ಕ್ರೀಡಾಕೂಟಕ್ಕೂ ತೆರಳುತ್ತಿರುವೆ. ಇದೀಗ ಮೂರನೇ ಬಾರಿ ಒಲಿಂಪಿಕ್‌ಗೆ ತೆರಳುತ್ತಿರುವೆ. ಕೆಎಸ್‌ಎಚ್‌ಎ, ಹಾಕಿ ಇಂಡಿಯಾ, ಹಾಕಿ ಕರ್ನಾಟಕ, ದೇವರು ಮತ್ತು ನನ್ನ ಕುಟುಂಬದ ಬೆಂಬಲದಿಂದ ಈ ಸಾಧನೆ ಸಾಧ್ಯವಾಗುತ್ತಿದೆ‘ ಎಂದು ರಘುಪ್ರಸಾದ್ ಸ್ಮರಿಸುತ್ತಾರೆ.

‘ಅಂಪೈರಿಂಗ್ ತುಂಬಾ ಸವಾಲಿನ ಕೆಲಸ. ಹಾಕಿ ಆಟದ ವೇಗ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಕ್ಷಣಾರ್ಧದಲ್ಲಿ ನಿರ್ಣಯ ಕೈಗೊಳ್ಳಬೇಕು.  ಅಂಪೈರ್‌ಗಳಿಗೆ ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ದೃಢತೆ  ಜೊತೆಗೆ ದೈಹಿಕ ಕ್ಷಮತೆಯು ಉನ್ನತಮಟ್ಟದ್ದಾಗಿರಬೇಕು. ಅದಕ್ಕಾಗಿ ಪ್ರತಿನಿತ್ಯ ಓಟ, ವ್ಯಾಯಾಮಗಳನ್ನು ಕಟ್ಟುನಿಟ್ಟಾಗಿ ಮಾಡುತ್ತೇವೆ. ಇದೆಲ್ಲದರ ಜೊತೆಗೆ ನಿಯಮಗಳ ಕುರಿತು ಆಳವಾದ ಜ್ಞಾನ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆ ಮತ್ತು ಸಮಚಿತ್ತದ ಗುಣ ರೂಢಿಸಿಕೊಳ್ಳಬೇಕು. ಯಾವುದೇ ಪಂದ್ಯ ಇರಲಿ. ಉಭಯ ತಂಡಗಳ ಆಟಗಾರರು ಆಕ್ರಮಣಶೀಲವಾಗಿರುತ್ತಾರೆ. ಆದ್ದರಿಂದ ಸಂಘರ್ಷಗಳಾಗದಂತೆ ಅವರೆಲ್ಲರಿಗೂ ಅರಿವು ಮೂಡಿಸಿ ಅತ್ಯಂತ ನಿಖರವಾದ ತೀರ್ಪು ನೀಡಬೇಕು. ಇವತ್ತು ಟಿ.ವಿಯಲ್ಲಿ ನೇರಪ್ರಸಾರ, ಡಿಜಿಟಲ್ ಸ್ಟ್ರೀಮಿಂಗ್ ಮತ್ತಿತರ ತಂತ್ರಜ್ಞಾನಗಳಿರುವುದರಿಂದ ಯಾವುದೇ ಲೋಪಕ್ಕೂ ಆಸ್ಪದವಿಲ್ಲ‘ ಎಂದರು. 

‘2012ರ ಒಲಿಂಪಿಕ್ ನೀಡಿದ ಅನುಭವ ವಿಶೇಷವಾದದ್ದು. ಆದರೆ, 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ ಕೂಟ ವಿಭಿನ್ನವಾದದ್ದು. ಅದು ಕೋವಿಡ್ ಕಾಲಘಟ್ಟ. ಪ್ರತಿದಿನವೂ ನಮ್ಮ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಕಟ್ಟುನಿಟ್ಟಿನ ನಿಯಮಗಳಿದ್ದವು. ಅಷ್ಟೇ ಅಚ್ಚುಕಟ್ಟಾದ ವ್ಯವಸ್ಥೆಗಳೂ ಇದ್ದವು. ಆದ್ದರಿಂದಲೇ ನಮ್ಮ ತಂಡದ ಯಾರಿಗೂ ಕೋವಿಡ್ ಕಾಡಲಿಲ್ಲ. ಕ್ವಾರ್ಟರ್‌ಫೈನಲ್ ಸೇರಿದಂತೆ ಐದು ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದೆ. ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿತ್ತು‘ ಎಂದರು.

ರಘುಪ್ರಸಾದ್ ಅವರು ಐದನೇ ವಯಸ್ಸಿನಲ್ಲಿಯೇ ಹಾಕಿ ಸ್ಟಿಕ್ ಕೈಗೆತ್ತಿಕೊಂಡವರು. ತಂದೆ ವೆಂಕಟೇಶಪ್ಪ ಅವರು ಬಿಇಎಲ್‌ನ ನಿವೃತ್ತ  ಉದ್ಯೋಗಿ. ಆಗ ಬಿಇಎಲ್ ಪ್ರದೇಶದಲ್ಲಿದ್ದ  ಯೂತ್ ಅಸೋಸಿಯೇಷನ್‌ನಲ್ಲಿ ರಘುಪ್ರಸಾದ್ ಹಾಕಿ ಆಟ ಕಲಿತರು. ಅಂತರರಾಷ್ಟ್ರೀಯ ಮಟ್ಟದ ಆಟಗಾರನಾಗಲಿಲ್ಲ. ಆದರೆ ‘ಒಲಿಂಪಿಯನ್ ಅಂಪೈರ್’ ಆಗಿ ರೂಪುಗೊಂಡಿದ್ದಾರೆ. ಎಫ್‌ಐಎಚ್ ನಿಯಮದ ಪ್ರಕಾರ ಅಂಪೈರ್‌ಗಳಿಗೆ 47 ವರ್ಷಕ್ಕೆ ನಿವೃತ್ತಿ ನೀಡಲಾಗುತ್ತದೆ. ಆದ್ದರಿಂದ 45 ವರ್ಷದ ರಘುಪ್ರಸಾದ್‌ ಅವರಿಗೆ ಇದು ಕೊನೆಯ ಒಲಿಂಪಿಕ್ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT