ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ನಾಳೆಯಿಂದ ಹಾಕಿ ಶಿಬಿರ

ಅನುಭವಿಗಳ ಜೊತೆ ಯುವ ಆಟಗಾರರಿಗೂ ಅವಕಾಶ; ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸಾಧನೆ ಗುರಿ
Last Updated 2 ಅಕ್ಟೋಬರ್ 2021, 13:31 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಕಿ ತಂಡದ ರಾಷ್ಟ್ರೀಯ ಶಿಬಿರ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ಅಕ್ಟೋಬರ್ ನಾಲ್ಕರಂದು ಆರಂಭವಾಗಲಿದೆ. ಇದಕ್ಕಾಗಿ ಹಾಕಿ ಇಂಡಿಯಾ 30 ಆಟಗಾರರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಉದ್ಯಾನ ನಗರಿಯಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡು ಟೋಕಿಯೊಗೆ ತೆರಳಿದ್ದ ತಂಡ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದುಕೊಂಡಿತ್ತು. ಈ ಮೂಲಕ 41 ವರ್ಷಗಳ ನಂತರ ಪದಕದ ಸಾಧನೆ ಮಾಡಿತ್ತು. ಬೆಂಗಳೂರಿನಲ್ಲಿ ಮತ್ತೆ ಆರಂಭವಾಲಿರುವ ಶಿಬಿರ ಮುಂದಿನ ಒಲಿಂಪಿಕ್ಸ್‌ನ ಸಿದ್ಧತೆಯೂ ಆಗಲಿದೆ. 2024ರಲ್ಲಿ ಪ್ಯಾರಿಸ್‌ನಲ್ಲಿ ಮಹತ್ವದ ಸಾಧನೆ ಮಾಡುವ ಗುರಿಯೊಂದಿಗೆ ತಂಡ ಅಭ್ಯಾಸ ಆರಂಭಿಸಲಿದೆ.

ಅನುಭವಿ ಆಟಗಾರರ ಜೊತೆ ಯುವ ಪ್ರತಿಭೆಗಳನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್‌ ಅವರೊಂದಿಗೆಮನ್‌ಪ್ರೀತ್‌ ಸಿಂಗ್‌, ಹರ್ಮನ್‌ಪ್ರೀತ್ ಸಿಂಗ್, ದಿಲ್‌ಪ್ರೀತ್ ಸಿಂಗ್‌, ಗುರಿಂದರ್ ಸಿಂಗ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

‘ಆಟಗಾರರಿಗೆ ಸುದೀರ್ಘ ವಿಶ್ರಾಂತಿ ಬೇಕಾಗಿತ್ತು. ಅದು ಲಭ್ಯವಾಗಿದೆ. ಮತ್ತೊಮ್ಮೆ ಶಿಬಿರದಲ್ಲಿ ಪಾಲ್ಗೊಳ್ಳಲು ಎಲ್ಲರೂ ಉತ್ಸುಕರಾಗಿದ್ದಾರೆ. ಮುಂದಿನ ವರ್ಷದ ಸವಾಲುಗಳಿಗೆ ಸಜ್ಜಾಗಲು ಈ ಶಿಬಿರ ನೆರವಾಗುವ ಭರವಸೆ ಇದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಮತ್ತು ಸಂಘಟಿತ ಸಾಮರ್ಥ್ಯ ಹೆಚ್ಚಿಸುವುದು ಪ್ರಮುಖ ಗುರಿ’ ಎಂದು ಮುಖ್ಯ ಕೋಚ್ ಗ್ರಹಾಂ ರೀಡ್ ಅಭಿಪ್ರಾಯಪಟ್ಟರು.

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಾಡಿದ ಸಾಧನೆಗೆ ಸಂಭ್ರಮಪಟ್ಟು ಆಗಿದೆ. ಈಗ ಹೊಸ ಅಧ್ಯಾಯ ಆರಂಭಿಸುವ ಕಾಲ. ಮುಂದಿನ ವರ್ಷ ಮಹತ್ವದ ಟೂರ್ನಿಗಳು ನಡೆಯಲಿದ್ದು ಅದಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಸಜ್ಜಾಗಬೇಕಾಗಿದೆ. ಫೆಬ್ರುವರಿಯಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ಗೆ ತಯಾರಾಗುವುದು ತಂಡದ ಮೊದಲ ಆದ್ಯತೆ’ ಎಂದು ಅವರು ವಿವರಿಸಿದರು.

ಶಿಬಿರದಲ್ಲಿ ಪಾಲ್ಗೊಳ್ಳುವ ಆಟಗಾರರು: ಮನ್‌ದೀಪ್‌ ಸಿಂಗ್‌, ಲಲಿತ್ ಕುಮಾರ್ ಉಪಾಧ್ಯಾಯ, ಗುರುಸಾಹೀಬ್‌ಜೀತ್ ಸಿಂಗ್‌, ಶಂಶೇರ್ ಸಿಂಗ್‌, ವರುಣ್ ಕುಮಾರ್, ಜರ್ಮನ್‌ಪ್ರೀತ್ ಸಿಂಗ್‌, ದಿಪ್ಸನ್ ಟರ್ಕಿ, ನೀಲಂ ಸಂಜೀವ್ ಕ್ಸೆಸ್‌, ಜಸ್‌ಕರಣ್ ಸಿಂಗ್, ರಾಜ್‌ಕುಮಾರ್ ಪಾಲ್‌, ಗುರ್ಜಂತ್ ಸಿಂಗ್‌, ಸುಮಿತ್‌, ಶೈಲಾನಂದ್ ಲಾಕ್ರ, ಸುಮನ್ ಬೇಕ್‌, ಮನ್‌ದೀಪ್ ಮೋರ್, ಆಶಿಶ್‌ ಕುಮಾರ್ ಟೊಪ್ನೊ, ಪಿ.ಆರ್.ಶ್ರೀಜೇಶ್‌, ಕೃಶನ್ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರಾ, ಹರ್ಮನ್‌ಪ್ರೀತ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಸುರೇಂದ್ರ ಕುಮಾರ್, ಗುರಿಂದರ್ ಸಿಂಗ್‌, ಅಮಿತ್ ರೋಹಿದಾಸ್‌, ಮನ್‌ಪ್ರೀತ್‌ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್, ಸಿಮ್ರನ್‌ಜೀತ್ ಸಿಂಗ್, ಆಕಾಶ್‌ದೀಪ್ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT